IPL 2022, PBKS vs RCB: ಪಂದ್ಯ ಸೋತರೂ ಎದುರಾಳಿಗರಿಗೆ ದೊಡ್ಡದಾಗಿ ಸಿಗ್ನಲ್ ಕೊಟ್ಟ ಆರ್​​ಸಿಬಿ: ಏನದು ಗೊತ್ತೇ?

Punjab vs Bangalore: ನಾಯಕ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಅಬ್ಬರದ ಬ್ಯಾಟಿಂಗ್ ಪ್ರಯೋಜನಕ್ಕೆ ಬರಲಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಸೋತರೂ ಎದುರಾಳಿ ತಂಡಕ್ಕೆ ದೊಡ್ಡದಾಗಿ ಸಂದೇಶವೊಂದನ್ನು ರವಾನೆ ಮಾಡಿದೆ.

IPL 2022, PBKS vs RCB: ಪಂದ್ಯ ಸೋತರೂ ಎದುರಾಳಿಗರಿಗೆ ದೊಡ್ಡದಾಗಿ ಸಿಗ್ನಲ್ ಕೊಟ್ಟ ಆರ್​​ಸಿಬಿ: ಏನದು ಗೊತ್ತೇ?
Virat Kohli and Duplessis PBKS vs RCB
Follow us
TV9 Web
| Updated By: Vinay Bhat

Updated on: Mar 28, 2022 | 7:31 AM

ಐಪಿಎಲ್ 2022ರಲ್ಲಿ (IPL 2022) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ. ಬಿಗ್ ಟಾರ್ಗೆಟ್ ನೀಡಿದ್ದರೂ ಬೌಲರ್​​ಗಳ ವೈಫಲ್ಯ ಮತ್ತು ಪಂಜಾಬ್ ಕಿಂಗ್ಸ್​ ಬ್ಯಾಟರ್​ಗಳ ಸ್ಫೋಟಕ ಆಟಕ್ಕೆ ಆರ್​ಸಿಬಿ ತಬ್ಬಿಬ್ಬಾಯಿತು. ನಾಯಕ ಫಾಫ್ ಡುಪ್ಲೆಸಿಸ್ (Faf Du Plessis), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ (Dinesh Kartik) ಅಬ್ಬರದ ಬ್ಯಾಟಿಂಗ್ ಪ್ರಯೋಜನಕ್ಕೆ ಬರಲಿಲ್ಲ. ಆರ್​​ಸಿಬಿ ಬೌಲರ್​​ಗಳನ್ನು ಮನಬಂದಂತೆ ದಂಡಿಸಿದ ಮಯಾಂಕ್ ಪಡೆ ಇನ್ನೂ ಒಂದು ಓವರ್ ಬಾಕಿ ಇರುವಂತೆ 200 ರನ್​​ಗಳ ಗಡಿ ದಾಟಿ ಗೆದ್ದು ಬೀಗಿತು. ಸೋಲಿನ ಹೊಣೆ ಸಂಪೂರ್ಣವಾಗಿ ಆರ್​ಸಿಬಿ ಬೌಲರ್​​ಗಳ ತಲೆಮೇಲೆ ಬಂದು ಬಿದ್ದಿದೆ. ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಪಂದ್ಯ ಸೋತರೂ ಎದುರಾಳಿ ತಂಡಕ್ಕೆ ದೊಡ್ಡದಾಗಿ ಸಂದೇಶವೊಂದನ್ನು ರವಾನೆ ಮಾಡಿದೆ. ಅದೇನೆಂದರೆ ಪ್ರತಿ ಬಾರಿ ಮಧ್ಯಮ ಕ್ರಮಾಂಕದಲ್ಲಿ ದುರ್ಬಲ ಎಂದು ಮಾತನಾಡಿಕೊಳ್ಳುತ್ತಿದ್ದವರಿಗೆ ಮೊದಲ ಪಂದ್ಯದಲ್ಲೇ ಬ್ಯಾಟ್ ಮೂಲಕ ಖಡಕ್ ಉತ್ತರ ನೀಡಿ ಬಾಯಿ ಮುಚ್ಚಿಸಿದೆ.

ಹೌದು, ಅಂದಿನಿಂದಲೂ ಆರ್​ಸಿಬಿ ಮಧ್ಯಮ ಕ್ರಮಾಂಕದಲ್ಲಿ ವೀಕ್, ಆರಂಭದಲ್ಲಿ ಎರಡು ಮೂರು ಬ್ಯಾಟರ್​ಗಳನ್ನು ಔಟ್ ಮಾಡಿದರೆ ನಂತರ ಪಂದ್ಯ ಗೆದ್ದಂತೆ, ಆರ್​ಸಿಬಿದಲ್ಲಿ ಫಿನಿಶರ್ ಎಂದು ಯಾರೂ ಇಲ್ಲ, ಹೀಗೆ ಈರೀತಿಯ ಮಾತುಗಳು ಆರ್​ಸಿಬಿಗೆ ಕಪ್ಪು ಚುಕ್ಕೆಯಾಗಿತ್ತು. ಆದರೀಗ ಮೊದಲ ಪಂದ್ಯದಲ್ಲೇ ಇದೆಲ್ಲ ಸುಳ್ಳಾಗಿದೆ. ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್​ ವಿರುದ್ಧ ಡೆತ್ ಓವರ್​ಗಳನ್ನು ನೀಡಿದ ಪ್ರದರ್ಶನ ಬೇರೆ ತಂಡಕ್ಕೆ ಆಘಾತ ನೀಡಿದೆ. ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಆರ್​​ಸಿಬಿ ಹರಾಜಿನಲ್ಲಿ ಕಾರ್ತಿಕ್​ರನ್ನು ಖರೀದಿಸಿದಾಗ ಟ್ರೋಲ್ ಮಾಡಿದವರೆಲ್ಲ ಇದೀಗ ಗಪ್​ಚುಪ್ ಆಗಿದ್ದಾರೆ. ಅಲ್ಲದೆ ಬೆಂಗಳೂರು ತಂಡಕ್ಕೆ ಗ್ಲೆನ್ ಮ್ಯಾಕ್ಸ್​​ವೆಲ್ ಇನ್ನಷ್ಟೆ ಸೇರಬೇಕಿದೆ. ಇವರು ಬಂದ ಮೇಲಂತು ತಂಡ ಇನ್ನಷ್ಟು ಬಲಿಷ್ಠವಾಗಲಿದ್ದು, ಕಾರ್ತಿಕ್ ಫಿನಿಶಿಂಗ್ ಜವಾಬ್ದಾರಿ ಹೊತ್ತರೆ ಮ್ಯಾಕ್ಸ್​​ವೆಲ್ ನಾಲ್ಕನೇ ಕ್ರಮಾಂಕದಲ್ಲಿ ಅಬ್ಬರಿಸಲಿದ್ದಾರೆ.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಆರ್‌ಸಿಬಿ ಅತ್ಯಂತ ನಿಧಾನಗತಿಯ ಆರಂಭ ಪಡೆಯಿತು. ನಾಯಕ ಫಾಫ್ ಡುಪ್ಲೆಸಿಸ್‌ ಆರಂಭದಲ್ಲಿ ರನ್‌ಗಳಿಸಲು ಸ್ವಲ್ಪ ಪರದಾಟ ನಡೆಸಿದರೂ ಸಹ ನಂತರ ತನ್ನ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಪಂದ್ಯದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿಸಿದ ಫಾಫ್ ಡುಪ್ಲೆಸಿಸ್ 57 ಎಸೆತಗಳಲ್ಲಿ 88 ರನ್ ಸಿಡಿಸಿದರು. ಇವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 7 ಅಮೋಘ ಸಿಕ್ಸರ್‌ಗಳಿದ್ದವು. ಮತ್ತೊಬ್ಬ ಓಪನರ್ ಅನುಜ್ ರಾವತ್‌ 21 ರನ್‌ಗಳಿಸಿ ರಾಹುಲ್‌ ಚಹಾರ್‌ಗೆ ವಿಕೆಟ್‌ ಒಪ್ಪಿಸಿದ ಬಳಿಕ ಆಗಮಿಸಿದ ವಿರಾಟ್ ಕೊಹ್ಲಿ ಕೂಡ ಸ್ಫೋಟಕ ಆಟವಾಡಿದರು.

29 ಎಸೆತಗಳಲ್ಲಿ 41ರನ್ ಸಿಡಿಸುವ ಮೂಲಕ ಕೊಹ್ಲಿ ಅಜೇಯರಾಗಿ ಉಳಿದರು. ಫಾಫ್ ಡುಪ್ಲೆಸಿಸ್ ಜೊತೆಗೂಡಿ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು. ಫಾಫ್ ಔಟಾದ ಬಳಿಕ ಕ್ರೀಸ್‌ಗಿಳಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಪಂಜಾಬ್ ಕಿಂಗ್ ಬೌಲರ್‌ಗಳನ್ನ ಧೂಳೀಪಟ ಮಾಡಿದರು. ಡಿಕೆ ಎದುರಿಸಿದ ಕೇವಲ 14 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಅಜೇಯ 32 ರನ್ ಚಚ್ಚಿದರು. ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿತು.

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್‌ಗೆ ಉತ್ತಮ ಆರಂಭ ದೊರೆಯಿತು. ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಶಿಖರ್ ಧವನ್ ಮೊದಲ ವಿಕೆಟ್‌ಗೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ 70 ರನ್‌ಗಳ ಜೊತೆಯಾಟ ನೀಡಿದರು. ನಂತರ ಬಂದ ಭಾನುಕಾ ರಾಜಪಕ್ಸ ಕೂಡ 22 ಎಸೆತಗಳಲ್ಲಿ 43 ರನ್‌ಗಳಿಸಿ ಮಿಂಚಿದರು. ನಂತರ ರಾಜಪಕ್ಸ ಹಾಗೂ ರಾಜ್ ಭಾವಾ ಸತತ ಎರಡು ಎಸೆತಗಳಲ್ಲಿ ವಿಕೆಟ್ ಕಳೆದುಕೊಂಡಾಗ ಆರ್‌ಸಿಬಿ ಪಂದ್ಯದಲ್ಲಿ ಮರಳಿ ಹಿಡಿತ ಸಾಧಿಸುವ ವಿಶ್ವಾಸ ಹೊಂದಿತ್ತು. ಆದರೆ, ನಂತರ ಬಂದ ಲಿವಿಂಗ್‌ಸ್ಟನ್, ಶಾರೂಖ್‌ಖಾನ್ ಹಾಗೂ ಓಡಿಯನ್ ಸ್ಮಿತ್ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಅದರಲ್ಲೂ ಓಡಿಯನ್ ಕೇವಲ 8 ಎಸೆತಗಳನ್ನು ಎದುರಿಸಿ 25 ರನ್ ಗಳಿಸುವ ಮೂಲಕ ಆರ್‌ಸಿಬಿ ಗೆಲುವಿವನ್ನು ಖಸಿದುಕೊಂಡು 19 ಓವರ್​ಗಳಲ್ಲೇ 206 ರನ್‌ಗಳ ಗುರಿಯನ್ನು ತಲುಪಿತು.

Rohit Sharma: ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾಗೆ 12 ಲಕ್ಷ ರೂ. ದಂಡ