Hardik Pandya: ಏಕದಿನ ಸರಣಿಗೆ ನಾನಿಲ್ಲ: ಹಾರ್ದಿಕ್ ಪಾಂಡ್ಯ ಮಾಹಿತಿ

|

Updated on: Jul 16, 2024 | 2:03 PM

Hardik Pandya: ಭಾರತ ಮತ್ತು ಶ್ರೀಲಂಕಾ ನಡುವಣ ಸರಣಿಯು ಜುಲೈ 27 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಮೊದಲು ಮೂರು ಟಿ20 ಪಂದ್ಯಗಳನ್ನಾಡಲಾಗುತ್ತಿದ್ದು, ಆ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಯ ಏಕದಿನ ಪಂದ್ಯಗಳಿಗೆ ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಅಲಭ್ಯರಾಗುವ ಸಾಧ್ಯತೆಯಿದೆ.

Hardik Pandya: ಏಕದಿನ ಸರಣಿಗೆ ನಾನಿಲ್ಲ: ಹಾರ್ದಿಕ್ ಪಾಂಡ್ಯ ಮಾಹಿತಿ
Hardik Pandya
Follow us on

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗುವುದಾಗಿ ಹಾರ್ದಿಕ್ ಪಾಂಡ್ಯ (Hardik Pandya) ಬಿಸಿಸಿಐಗೆ ತಿಳಿಸಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ನಾನು ಏಕದಿನ ಸರಣಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ನನ್ನನ್ನು ಏಕದಿನ ತಂಡದ ಆಯ್ಕೆಗೆ ಪರಿಗಣಿಸದಂತೆ ಪಾಂಡ್ಯ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಹಾರ್ದಿಕ್ ಕಾಣಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು. ಇದಾಗ್ಯೂ ಅವರು ಮೂರು ಪಂದ್ಯಗಳ ಟಿ20 ಸರಣಿಗೆ ಲಭ್ಯರಿರಲಿದ್ದಾರೆ.

ಭಾರತ ಮತ್ತು ಶ್ರೀಲಂಕಾ ನಡುವಣ ಟಿ20 ಸರಣಿಯು ಜುಲೈ 27 ರಿಂದ ಶುರುವಾಗಲಿದೆ. ಈ ಸರಣಿ ಮೂಲಕ ಟೀಮ್ ಇಂಡಿಯಾ ಟಿ20 ತಂಡದ ಖಾಯಂ ನಾಯಕರಾಗಿ ಪಾಂಡ್ಯ ಆಯ್ಕೆಯಾಗುವ ಸಾಧ್ಯತೆಯಿದೆ.

ಹಾರ್ದಿಕ್ ಪಾಂಡ್ಯ 2023ರ ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಪರ ಒನ್​ಡೇ ಕ್ರಿಕೆಟ್ ಆಡಿಲ್ಲ. ಬಾಂಗ್ಲಾದೇಶ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಪಾಂಡ್ಯ ಅರ್ಧದಲ್ಲೇ ಟೂರ್ನಿ ತೊರೆದಿದ್ದರು. ಅಲ್ಲದೆ ಈ ಬಾರಿಯ ಐಪಿಎಲ್ ಮೂಲಕ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಮರಳಿದ್ದರು. ಅದರಂತೆ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಉಪನಾಯಕನಾಗಿ ಕಾಣಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಭರ್ಜರಿ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು.

ವೈಯುಕ್ತಿಕ ಜೀವನ ಅಲ್ಲೋಲ ಕಲ್ಲೋಲ:

ಐಪಿಎಲ್​ ಮತ್ತು ಟಿ20 ವಿಶ್ವಕಪ್ ನಡುವೆ ಹಾರ್ದಿಕ್ ಪಾಂಡ್ಯ ಅವರ ವೈಯುಕ್ತಿಕ ಜೀವನ ಚರ್ಚೆಗೆ ಕಾರಣವಾಗಿತ್ತು. ಪಾಂಡ್ಯ ಹಾಗೂ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವಿಚಾರ ಬಹಿರಂಗವಾಗಿತ್ತು. ಅಲ್ಲದೆ ಇಬ್ಬರೂ ಡೈವೋರ್ಸ್ ಪಡೆಯಲಿದ್ದಾರೆ ಎಂಬ ಸುದ್ದಿಗಳು ಕೂಡ ವೈರಲ್ ಆಗಿದ್ದವು. ಇದೀಗ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ವೈಯುಕ್ತಿಕ ಕಾರಣಗಳಿಂದಾಗಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿ ಹಾರ್ದಿಕ್ ಪಾಂಡ್ಯ ಕುತೂಹಲ ಮೂಡಿಸಿದ್ದಾರೆ.

ಟೀಮ್ ಇಂಡಿಯಾ ಆಯ್ಕೆ:

ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗಾಗಿ ಭಾರತ ತಂಡವನ್ನು ಮಂಗಳವಾರ ಆಯ್ಕೆ ಮಾಡುವ ಸಾಧ್ಯತೆಯಿದೆ. ಈ ಬಗ್ಗೆ ಈಗಾಗಲೇ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಸದಸ್ಯರು ಚರ್ಚಿಸಿದ್ದಾರೆ. ಅಲ್ಲದೆ ತಂಡದಲ್ಲಿ ಯಾರೆಲ್ಲಾ ಇರಬೇಕೆಂಬ ಸಂಪೂರ್ಣ ಮಾಹಿತಿಯನ್ನು ಗಂಭೀರ್ ಆಯ್ಕೆಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?

ರೋಹಿತ್ – ವಿರಾಟ್ ಅಲಭ್ಯ?

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹೊರಗುಳಿಯಲು ನಿರ್ಧರಿಸಿದ್ದಾರೆ. ಆದರೆ ಹಿರಿಯ ಆಟಗಾರರು ತಂಡದಲ್ಲಿರಬೇಕು ಎಂದು ಕೋಚ್ ಗಂಭೀರ್ ಆಯ್ಕೆ ಸಮಿತಿಗೆ ತಿಳಿಸಿದೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶ್ ಸರಣಿ ನಡುವೆ 6 ವಾರಗಳ ಅಂತರವಿದ್ದು, ಹಿರಿಯ ಆಟಗಾರರು ಈ ವೇಳೆ ವಿಶ್ರಾಂತಿ ಪಡೆಯಬಹುದು. ಹೀಗಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಶ್ರೀಲಂಕಾ ವಿರುದ್ಧ ಸರಣಿಗೆ ಆಯ್ಕೆ ಮಾಡುವಂತೆ ಗೌತಮ್ ಗಂಭೀರ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.