
2025 ರ ಏಷ್ಯಾಕಪ್‌ನಲ್ಲಿ (Asia Cup 2025) ಭಾಗವಹಿಸಲು ಟೀಂ ಇಂಡಿಯಾ ದುಬೈ ತಲುಪಿದೆ. ಭಾರತ ತಂಡದ ಮೊದಲ ಪಂದ್ಯ ಸೆಪ್ಟೆಂಬರ್ 10 ರಂದು ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ನಡೆಯಲಿದೆ. ಇದಕ್ಕೂ ಮೊದಲು ತಂಡ ದುಬೈನಲ್ಲಿ ಅಭ್ಯಾಸ ನಡೆಸಲಿದೆ. ಆದರೆ ಅದಕ್ಕೂ ಮುನ್ನ ನಿನ್ನೆ ತಾನೆ ಮುಂಬೈನಿಂದ ದುಬೈಗೆ ಪ್ರಯಾಣ ಬೆಳೆಸಿದ್ದ ಹಾರ್ದಿಕ್ ಪಾಂಡ್ಯ (Hardik Pandya) ದುಬೈ ತಲುಪಿದ ಕೂಡಲೇ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಇದಕ್ಕೆ ಕಾರಣ ಅವರ ಹೊಸ ಹೇರ್ ಸ್ಟೈಲ್. ನಿನ್ನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಂಡ್ಯ ಕಾಣಿಸಿಕೊಂಡಾಗ ಅವರ ತಲೆಯ ತುಂಬ ಕರಿಯ ಕೂದಲುಗಳು ಕಂಗೊಳಿಸುತ್ತಿದ್ದವು. ಆದರೆ ದುಬೈ ತಲುಪಿದ ಕೂಡಲೇ ಪಾಂಡ್ಯ ತಲೆಯಲ್ಲಿ ಕರಿ ಕೂದಲುಗಳು ನಾಪತ್ತೆಯಾಗಿರುವುದಲ್ಲದೆ ಅವರ ಹೇರ್ ಸ್ಟೈಲ್ ಕೂಡ ಬದಲಾಗಿದೆ.
ಮೇಲೆ ಹೇಳಿದಂತೆ ಹಾರ್ದಿಕ್ ಪಾಂಡ್ಯ ಏಷ್ಯಾಕಪ್‌ಗೂ ಮುನ್ನ ತಮ್ಮ ಕೇಶವಿನ್ಯಾಸವನ್ನು ಬದಲಾಯಿಸಿಕೊಂಡಿದ್ದಾರೆ. ಅದರ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿರುವ ಹಾರ್ದಿಕ್, “ನ್ಯೂ ಮಿ” ಎಂಬ ಶೀರ್ಷಿಕೆಯನ್ನು ಸಹ ನೀಡಿದ್ದಾರೆ.
ಇದೀಗ ಹಾರ್ದಿಕ್ ಅವರ ನೂತನ ಕೇಶವಿನ್ಯಾಸ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ. ಅಭಿಮಾನಿಗಳು ಈ ಕೇಶವಿನ್ಯಾಸವನ್ನು ಇಂಗ್ಲೆಂಡ್‌ನ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮತ್ತು ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ನಿಕೋಲಸ್ ಪೂರನ್ ಅವರೊಂದಿಗೆ ಹೋಲಿಸುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ಕೊನೆಯ ಬಾರಿಗೆ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಅಂದಿನಿಂದ ಅವರು ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಹೀಗಾಗಿ ಸೆಪ್ಟೆಂಬರ್ 9 ರಂದು ಯುಎಇ ವಿರುದ್ಧ ಪಂದ್ಯವನ್ನಾಡಲಿರುವ ಹಾರ್ದಿಕ್ ಅವರಿಂದ ತಂಡವು ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ.
ರೋಹಿತ್ ಶರ್ಮಾ ನಂತರ ಭಾರತದ ಮುಂದಿನ ಟಿ20 ನಾಯಕ ಎಂದು ಪರಿಗಣಿಸಲ್ಪಟ್ಟ ಹಾರ್ದಿಕ್ ಅವರನ್ನು ಆಟಗಾರನಾಗಿ ಮಾತ್ರ ತಂಡದಲ್ಲಿ ಸೇರಿಸಲಾಗಿದೆ. ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾದ ಟಿ20 ತಂಡದ ನಾಯಕರಾಗಿದ್ದರೆ, ಶುಭ್ಮನ್ ಗಿಲ್ ಅವರನ್ನು ಏಷ್ಯಾಕಪ್‌ಗೆ ಉಪನಾಯಕರನ್ನಾಗಿ ಮಾಡಲಾಗಿದೆ. ಆದಾಗ್ಯೂ, ಟಿ20ಐನಲ್ಲಿ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನ ಉತ್ತಮವಾಗಿದೆ.
ಟೀಂ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 114 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 27.87 ಸರಾಸರಿಯಲ್ಲಿ 1812 ರನ್ ಗಳಿಸಿದ್ದಾರೆ. ಇದರಲ್ಲಿ ಹಾರ್ದಿಕ್ 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದಲ್ಲದೆ, ಅವರು 94 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.
94 ಏಕದಿನ ಪಂದ್ಯಗಳಲ್ಲಿ, ಹಾರ್ದಿಕ್ 32.82 ಸರಾಸರಿಯಲ್ಲಿ 1904 ರನ್ ಗಳಿಸಿದ್ದಾರೆ. ಇದರಲ್ಲಿ 11 ಅರ್ಧಶತಕಗಳು ಸೇರಿವೆ. ಅವರು ಏಕದಿನ ಪಂದ್ಯಗಳಲ್ಲಿ 91 ವಿಕೆಟ್‌ಗಳನ್ನು ಹೊಂದಿದ್ದಾರೆ. ಹಾಗೆಯೇ 11 ಟೆಸ್ಟ್ ಪಂದ್ಯಗಳನ್ನು ಆಡಿರುವ ಹಾರ್ದಿಕ್ 18 ಇನ್ನಿಂಗ್ಸ್‌ಗಳಲ್ಲಿ 31.29 ಸರಾಸರಿಯಲ್ಲಿ 532 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 4 ಅರ್ಧಶತಕಗಳು ಸೇರಿವೆ. ಈ ಅವಧಿಯಲ್ಲಿ, ಅವರು 17 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Fri, 5 September 25