
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಹಾಗೂ ಬ್ಯಾಟಿಂಗ್ ಕೋಚ್, ಮೆಂಟರ್ ದಿನೇಶ್ ಕಾರ್ತಿಕ್ ಅವರೊಂದಿಗೆ ಮಾತನಾಡುತ್ತಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಆರ್ಸಿಬಿ ತಂಡ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಕೆಲವೇ ದಿನಗಳಲ್ಲಿ ಈ ಫೋಟೋ ಹೊರಬಂದಿರುವುದರಿಂದ, ಹಾರ್ದಿಕ್ ಪಾಂಡ್ಯ ಮುಂದಿನ ಸೀಸನ್ಗೆ ಬೆಂಗಳೂರು ತಂಡ ಸೇರಲಿದ್ದಾರಾ ಎಂಬ ದೊಡ್ಡ ಮಟ್ಟದ ಚರ್ಚೆ ಮತ್ತು ವದಂತಿಗಳು ಕ್ರಿಕೆಟ್ ವಲಯದಲ್ಲಿ ಶುರುವಾಗಿವೆ.
ಹಾರ್ದಿಕ್ ಪಾಂಡ್ಯ ಮುಂಬೈನಲ್ಲಿ ಕಳಪೆ ಪ್ರದರ್ಶನ ನೀಡಿದ್ದು, ಕ್ಯಾಪ್ಟನ್ ಆಗಿಯೂ ವಿಫಲರಾಗಿದ್ದಾರೆ. ಅವರು ಮುಂಬೈ ತಂಡ ತೊರೆಯುತ್ತಾರೆ ಎನ್ನಲಾಗಿದೆ. ಹೀಗಿರುವಾಗಲೇ ಈ ಫೋಟೋ ವೈರಲ್ ಆಗಿದೆ. ಆದರೆ, ಈ ಭೇಟಿಗೂ, ಐಪಿಎಲ್ ಟ್ರೇಡಿಂಗ್ಗೆ ಯಾವುದೇ ಸಂಬಂಧವಿಲ್ಲ ಎನ್ನಲಾಗಿದೆ. ಈ ಫೋಟೋದ ಬಗ್ಗೆ ಎರಡು ಪ್ರಮುಖ ಅನುಮಾನಗಳು ವ್ಯಕ್ತವಾಗಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ಈ ಫೋಟೋದಲ್ಲಿರುವ ಹಲವಾರು ತಪ್ಪುಗಳನ್ನು ಎತ್ತಿ ತೋರಿಸಿದ್ದಾರೆ. ಇದು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ಫೋಟೋ ಇರಬಹುದು ಎಂದು ಶಂಕಿಸಲಾಗಿದೆ. ಫೋಟೋದಲ್ಲಿ ಹಾರ್ದಿಕ್ ಪಾಂಡ್ಯ ಅವರ ಹೇರ್ಸ್ಟೈಲ್ ಇತ್ತೀಚಿನ ಐಪಿಎಲ್ ಪಂದ್ಯಗಳಲ್ಲಿದ್ದ ಶೈಲಿಗಿಂತ ಸಂಪೂರ್ಣ ಭಿನ್ನವಾಗಿದೆ. ಇದರ ಜೊತೆಗೆ, ಈ ಫೋಟೋ ವೈರಲ್ ಆದ ದಿನವೇ ಹಾರ್ದಿಕ್ ಪಾಂಡ್ಯ ಅವರ ಗರ್ಲ್ಫ್ರೆಂಡ್ ಮಹಿಹಿಕಾ ಶರ್ಮಾ ಅವರು ಫ್ರಾನ್ಸ್ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದರು. ಮೇ 24 ರಂದೇ ಹಾರ್ದಿಕ್ ಮುಂಬೈ ಬಿಟ್ಟು ಹೊರಟಿದ್ದರಿಂದ, ಅವರು ಆರ್ಸಿಬಿ ಕೋಚ್ಗಳನ್ನು ಭೇಟಿಯಾಗಿರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.
ಈ ವೈರಲ್ ಫೋಟೋ ಕುರಿತು ಮತ್ತೊಂದು ಆಸಕ್ತಿದಾಯಕ ಆ್ಯಂಗಲ್ ಕೂಡ ಕೇಳಿಬರುತ್ತಿದೆ. ಫೋಟೋದಲ್ಲಿ ಆರ್ಸಿಬಿ ಹೆಡ್ ಕೋಚ್ ಆ್ಯಂಡಿ ಫ್ಲವರ್ ಅವರ ತಲೆಯಲ್ಲಿ ದಟ್ಟವಾದ ಕೂದಲು ಕಾಣಿಸುತ್ತಿದೆ. ಆದರೆ, ಪ್ರಸ್ತುತ ಆ್ಯಂಡಿ ಫ್ಲವರ್ ಅವರ ತಲೆಯಲ್ಲಿ ಕೂದಲು ತೀರಾ ಕಡಿಮೆ ಇದೆ. ಈ ಪ್ರಮುಖ ವ್ಯತ್ಯಾಸವನ್ನು ಗಮನಿಸಿರುವ ಕ್ರಿಕೆಟ್ ಪ್ರೇಮಿಗಳು, ಇದು ಈಗಿನ ಫೋಟೋ ಅಲ್ಲವೇ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕಪ್ ಗೆದ್ದ ಖುಷಿಯಲ್ಲಿದ್ದ ರಜತ್ಗೆ ಹೊಸ ಲೀಗ್ನ ಮೊದಲ ಪಂದ್ಯದಲ್ಲೇ ಹೀನಾಯ ಸೋಲಿನಾಘಾತ
ಫೋಟೋ ವದಂತಿ ಏನೇ ಇರಲಿ, ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ದಿನಗಳು ಮುಗಿಯುತ್ತಾ ಬಂದಿರುವುದು ಮಾತ್ರ ನಿಜ ಎನ್ನಲಾಗುತ್ತಿದೆ. ಈ ಸೀಸನ್ನಲ್ಲಿ ಮುಂಬೈ ಪ್ಲೇಆಫ್ ತಲುಪಲು ವಿಫಲವಾಗಿತ್ತು. ಡ್ರೆಸ್ಸಿಂಗ್ ರೂಮ್ನಲ್ಲಿ ಹಿರಿಯ ಆಟಗಾರರ ಬೆಂಬಲ ಸಿಗದ ಕಾರಣ, ಸೀಸನ್ನ ಮಧ್ಯದಲ್ಲೇ ಹಾರ್ದಿಕ್ ತಾವು ಮುಂಬೈ ಫ್ರಾಂಚೈಸಿಯಿಂದ ಹೊರನಡೆಯುವ ನಿರ್ಧಾರವನ್ನು ಮ್ಯಾನೇಜ್ಮೆಂಟ್ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ