AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಲಿನ ಬೆನ್ನಲ್ಲೇ ಪಾಕ್ ತಂಡಕ್ಕೆ ಬಿಗ್ ಶಾಕ್; ಉಳಿದ ಏಷ್ಯಾಕಪ್ ಪಂದ್ಯಗಳಿಗೆ ಇಬ್ಬರು ಸ್ಟಾರ್​ ವೇಗಿಗಳು ಡೌಟ್..!

Asia Cup 2023: ಏಷ್ಯಾಕಪ್‌ ಸೂಪರ್ 4 ಸುತ್ತಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ 228 ರನ್​ಗಳ ಬೃಹತ್ ಸೋಲನುಭವಿಸಿದ ಪಾಕಿಸ್ತಾನ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ತಂಡದ ಬೌಲಿಂಗ್ ಜೀವಾಳವಾಗಿ ತ್ರಿವಳಿ ಬೌಲರ್​ಗಳ ಪೈಕಿ ಇಬ್ಬರು ವೇಗಿಗಳು ಉಳಿದ ಏಷ್ಯಾಕಪ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.

ಸೋಲಿನ ಬೆನ್ನಲ್ಲೇ ಪಾಕ್ ತಂಡಕ್ಕೆ ಬಿಗ್ ಶಾಕ್; ಉಳಿದ ಏಷ್ಯಾಕಪ್ ಪಂದ್ಯಗಳಿಗೆ ಇಬ್ಬರು ಸ್ಟಾರ್​ ವೇಗಿಗಳು ಡೌಟ್..!
ಹಾರಿಸ್ ರವೂಫ್, ನಸೀಮ್ (ಪ್ರಾತಿನಿಧಿಕ ಚಿತ್ರ)
ಪೃಥ್ವಿಶಂಕರ
|

Updated on:Sep 12, 2023 | 6:50 AM

Share

ಏಷ್ಯಾಕಪ್‌ (Asia Cup 2023) ಸೂಪರ್ 4 ಸುತ್ತಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ 228 ರನ್​ಗಳ ಬೃಹತ್ ಸೋಲನುಭವಿಸಿದ ಪಾಕಿಸ್ತಾನ (India vs Pakistan) ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ತಂಡದ ಬೌಲಿಂಗ್ ಜೀವಾಳವಾಗಿರುವ ತ್ರಿವಳಿ ಬೌಲರ್​ಗಳ ಪೈಕಿ ಇಬ್ಬರು ವೇಗಿಗಳು ಉಳಿದ ಏಷ್ಯಾಕಪ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ ಭಾರತ ವಿರುದ್ಧದ ಪಂದ್ಯದಲ್ಲಿ ವೇಗಿಗಳಾದ ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ (Haris Rauf, Naseem Shah) ಗಾಯಗೊಂಡಿದ್ದರು. ಹೀಗಾಗಿ ಹ್ಯಾರಿಸ್ ರೌಫ್ ಮೀಸಲು ದಿನದಂದು ಮೈದಾನಕ್ಕೆ ಇಳಿಯಲಿಲ್ಲ. ಇತ್ತ ಮೀಸಲು ದಿನದಂದು ಮೈದಾನಕ್ಕಿಳಿದಿದ್ದ ಮತ್ತೊಬ್ಬ ವೇಗಿ ಹ್ಯಾರಿಸ್ ರೌಫ್, ಭಾರತದ ಇನ್ನಿಂಗ್ಸ್​ನ 49ನೇ ಓವರ್​ನಲ್ಲಿ ಇಂಜುರಿಗೆ ತುತ್ತಾದರು. ಹೀಗಾಗಿ ಓವರ್ ಪೂರ್ಣಗೊಳಿಸದೆ ಅವರು ಪೆವಿಲಿಯನ್​ಗೆ ತೆರಳಬೇಕಾಯಿತು.

ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಡೌಟ್

ESPNcricinfo ಪ್ರಕಾರ, ಗುರುವಾರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಏಷ್ಯಾಕಪ್ ಪಂದ್ಯವನ್ನು ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಮಿಸ್ ಮಾಡಿಕೊಳ್ಳುವುದು ಖಚಿತವಾಗಿದೆ. ಇದು ಸಾಲದೆಂಬಂತೆ ಫೈನಲ್‌ ಪಂದ್ಯಕ್ಕೆ ಇವರಿಬ್ಬರು ಲಭ್ಯವಾಗುವುದು ಕೂಡ ಅನುಮಾನ ಎಂದು ವರದಿಯಾಗಿದೆ. ಗಮನಾರ್ಹವಾಗಿ, ಹ್ಯಾರಿಸ್ ರೌಫ್ ಪ್ರಸ್ತುತ ಈ ಕಾಂಟಿನೆಂಟಲ್ ಈವೆಂಟ್​ನಲ್ಲಿ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ. ಆದರೆ ಭಾರತ ವಿರುದ್ಧದ ಪಂದ್ಯದ ಮೊದಲ ದಿನ ಇಂಜುರಿಗೊಳಗಾಗಿದ್ದ ರೌಫ್, ಮೀಸಲು ದಿನದಂದು ಮೈದಾನಕ್ಕೆ ಬರಲಿಲ್ಲ.

ಹಾರ್ದಿಕ್ ಇನ್​ಸ್ವಿಂಗರ್ ಬ್ರಹ್ಮಾಸ್ತ್ರಕ್ಕೆ ಬೆದರಿದ ಬಾಬರ್; ಮೀಟರ್ ದೂರ ಹಾರಿ ಬಿದ್ದ ಬೇಲ್ಸ್! ವಿಡಿಯೋ ನೋಡಿ

8 ವಿಕೆಟ್​ಗೆ ಇನ್ನಿಂಗ್ಸ್ ಮುಗಿಸಿದ ಪಾಕ್

ಇನ್ನು ಮೀಸಲು ದಿನದಂದು ಪಾಕಿಸ್ತಾನದ ಬೌಲಿಂಗ್ ದಾಳಿ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಸೀಮ್ ಶಾ ಅವರು ಭುಜದ ಗಾಯದಿಂದಾಗಿ ಭಾರತದ ಇನ್ನಿಂಗ್ಸ್‌ನ 49 ನೇ ಓವರ್‌ನಲ್ಲಿ ಮೈದಾನವನ್ನು ತೊರೆಯಬೇಕಾಯಿತು. ಹೀಗಾಗಿ ಓವರ್​ನ ಉಳಿದ ಐದು ಎಸೆತಗಳನ್ನು ಸ್ಪಿನ್ನರ್ ಇಫ್ತಿಕರ್ ಅಹ್ಮದ್ ಪೂರ್ಣಗೊಳಿಸಿದ್ದರು. ಇನ್ನು ಈ ಇಬ್ಬರು ಬೌಲರ್​ಗಳು ಕೂಡ ಬ್ಯಾಟಿಂಗ್​ಗೂ ಬರಲಿಲ್ಲ. ಇದರ ಪರಿಣಾಮವಾಗಿ ಪಾಕಿಸ್ತಾನ 8 ವಿಕೆಟ್​ಗಳ ನಷ್ಟಕ್ಕೆ ತನ್ನ ಇನ್ನಿಂಗ್ಸ್ ಮುಗಿಸಿತು. ಹೀಗಾಗಿ ಭಾರತ 228 ರನ್‌ಗಳ ಜಯ ಸಾಧಿಸಿತು.

ಪಾಕ್ ತಂಡಕ್ಕೆ ಭಾರಿ ಹಿನ್ನಡೆ

ಒಂದು ವೇಳೆ ಮೇಲೆ ಹೇಳಿದ ಸುದ್ದಿ ನಿಜವಾದರೆ, ಪಾಕಿಸ್ತಾನ ತಂಡಕ್ಕೆ ಭಾರಿ ಹೊಡೆತ ಬೀಳುವುದಂತೂ ಖಚಿತ. ರೌಫ್ ಅಲಭ್ಯತೆಯಿಂದ ಟೀಂ ಇಂಡಿಯಾ ಬ್ಯಾಟರ್​ಗಳ ಮುಂದೆ ಮಂಕಾಗಿದ್ದ ಪಾಕ್ ಬೌಲಿಂಗ್ ವಿಭಾಗ, ಸರಾಗವಾಗಿ ರನ್​ ಬಿಟ್ಟುಕೊಟ್ಟಿತು. ಅಂತಿಮ ಹಂತದಲ್ಲಿ ಇಂಜುರಿಗೆ ತುತ್ತಾದ ನಸೀಮ್ ಮಾತ್ರ ಭಾರತೀಯ ಬ್ಯಾಟರ್​ಗಳ ರನ್​ವೇಗಕ್ಕೆ ಕೊಂಚ ಕಡಿವಾಣ ಹಾಕಿದ್ದರು. ಇದೀಗ ಈ ಇಬ್ಬರ ಅಲಭ್ಯತೆ ಪಾಕ್ ಪಡೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:48 am, Tue, 12 September 23