ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ (WPL 2023) ಅಂತಿಮ ಹಂತದತ್ತ ತಲುಪುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ (Delhi Capitals Womens), ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್ ರೇಸ್ನಲ್ಲಿದೆ. ಈಗಾಗಲೇ ಆಡಿದ ಎಂಟು ಪಂದ್ಯಗಳ ಪೈಕಿ ಎರಡರಲ್ಲಿ ಸೋಲು ಆರರಲ್ಲಿ ಗೆಲುವು ಸಾಧಿಸಿ ಡೆಲ್ಲಿ ನೇರವಾಗಿ ಫೈನಲ್ ಪ್ರವೇಶಿಸಿದೆ. ಮುಂಬೈ ಹಾಗೂ ಯುಪಿ ನಡುವೆ ಯಾರಿಗೆ ಫೈನಲ್ ಟಿಕೆಟ್ ಎಂಬುದು ಇಂದು ನಿರ್ಧಾರವಾಗಲಿದೆ. ನೇವಿ ಮುಂಬೈನ ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಇಂದು ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಮತ್ತು ಅಲಿಸ್ಸಾ ಹೀಲಿ ನೇತೃತ್ವದ ಯುಪಿ ವಾರಿಯರ್ಸ್ (MIW vs UPW) ನಡುವೆ ಎಲಿಮಿನೇಟರ್ ಪಂದ್ಯ ಆಯೋಜಿಸಲಾಗಿದೆ.
ಟೂರ್ನಿಯ ಆರಂಭದಲ್ಲಿ ಸತತ 5 ಪಂದ್ಯಗಳನ್ನು ಗೆದ್ದು ಬೀಗಿದ್ದ ಮುಂಬೈ ಮಹಿಳಾ ತಂಡದಲ್ಲಿ ಈಗ ಮೊದಲಿದ್ದ ಕಿಚ್ಚು ಕಾಣುತ್ತಿಲ್ಲ. ಎರಡು ಪಂದ್ಯಗಳಲ್ಲಿ ಸೋತ ಬಳಿಕ ಪಾಯಿಂಟ್ ಟೇಬಲ್ನಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಡೆಲ್ಲಿ ಕೂಡ ಮುಂಬೈ ಅಂತೆ 12 ಅಂಕ ಸಂಪಾದಿಸಿದೆ. ಆದರೆ, ರನ್ರೇಟ್ ಆಧಾರಾದ ಮೇಲೆ ಫೈನಲ್ಗೇರಿದೆ. ಮುಂಬೈ ತಂಡವು ನಾಯಕಿ ಹರ್ಮನ್‌ಪ್ರೀತ್ ಕೌರ್, ಹೇಲಿ ಮ್ಯಾಥ್ಯೂಸ್, ನಥಾಲಿ ಸಿವೆರ್ ಬ್ರಂಟ್ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಆರಂಭದಿಂದಲೂ ತಂಡಕ್ಕೆ ನಾಯಕಿ ಆಸರೆ ಆಗುತ್ತಿದ್ದಾರೆ. ತಂಡದ ಪ್ರಮುಖ ವಿಕೆಟ್ ಟೇಕರ್ ಸೈಕಾ ಇಶಾಕ್ ಕಳೆದ ಮೂರು ಪಂದ್ಯಗಳಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲವಾಗಿದ್ದಾರೆ.
India’s next match schedule: ಭಾರತದ ಮುಂದಿನ ಎದುರಾಳಿ ಕೂಡ ಆಸ್ಟ್ರೇಲಿಯಾ: ಇಲ್ಲಿದೆ ವೇಳಾಪಟ್ಟಿ
ಇತ್ತ ಯುಪಿ ವಾರಿಯರ್ಸ್ ಏಳು ಬೀಳುಗಳ ಮೂಲಕ ಪ್ಲೇ ಆಫ್‌ಗೆ ಪ್ರವೇಶ ಪಡೆದುಕೊಂಡಿದೆ. ಆಡಿದ ಎಂಟು ಪಂದ್ಯಗಳಲ್ಲಿ ನಾಲ್ಕು ಗೆಲುವು, ನಾಲ್ಕು ಸೋಲಿನ ಮೂಲಕ ಎಲಿಮಿನೇಟರ್ಗೆ ಲಗ್ಗೆಯಿಟ್ಟಿತು. ತಂಡದ ನಾಯಕಿ ಅಲಿಸ್ಸಾ ಹೀಲಿ, ತಹಲಿ ಮೆಕ್‌ಗ್ರಾತ್ ಮತ್ತು ಸೋಫಿ ಎಕ್ಸೆಲ್‌ಸ್ಟನ್ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದೆ. ಸ್ಪಿನ್ನರ್ಗಳು ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ರಾಜೇಶ್ವರಿ ಗಾಯಕ್ವಾಡ್, ಸೋಫಿ ಎಕ್ಲಸ್ಟೋನ್, ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಮೋಡಿ ಮಾಡಿದರೆ, ಮುಂಬೈ ಇಂಡಿಯನ್ಸ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಬಹುದಾಗಿದೆ. ಗಾಯದ ಕಾರಣ ಕೊನೆಯ ಲೀಗ್ ಪಂದ್ಯದಲ್ಲಿ ಆಡದೇ ಇದ್ದ ಪ್ರಮುಖ ಆಟಗಾರ್ತಿ ಗ್ರೇಸ್ ಹ್ಯಾರಿಸ್ ಅವರು ಇಂದು ಕಣಕ್ಕಿಳಿಯುವ ಸಾಧ್ಯತೆಯಿದೆ.
ಪ್ಲೇ ಆಫ್ ಪಂದ್ಯ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯ ರಾತ್ರಿ 7:30 ಕ್ಕೆ ಶುರುವಾಗಲಿದ್ದು ಏಳು ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಪಂದ್ಯದ ನೇರ ಪ್ರಸಾರವು ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿರಲಿದೆ. ಅಂತೆಯೆ ಲೈವ್ ಸ್ಟ್ರೀಮಿಂಗ್ ಅನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು.
ಮುಂಬೈ ಇಂಡಿಯನ್ಸ್: ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವೊಂಗ್, ಅಮಂಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್, ಹೀದರ್ ಗ್ರಹಾಂ, ಕ್ಲೋಯ್ ಟ್ರಯಾನ್, ಸೋನಮ್ ಯಾದವ್, ನೀಲಂ ಬಿಷ್ಟ್, ಪ್ರಿಯಾಂಕಾ ಬಾಲಾ, ಧಾರಾ ಗುಜ್ಜರ್
ಯುಪಿ ವಾರಿಯರ್ಸ್: ಅಲಿಸ್ಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್, ಲಾರ್ ಬೆಲ್‌ರಿಸ್, ಗ್ರೇಸ್ ಬೆಲ್ಲರಿಸ್, ಪಾರ್ಶವಿ ಚೋಪ್ರಾ, ಸೊಪ್ಪದಂಡಿ ಯಶಸ್ರಿ.
ಮಹಿಳಾ ಪ್ರೀಮಿಯರ್ ಲೀಗ್‌ನ ಸ್ವರೂಪದ ಪ್ರಕಾರ, ಟೇಬಲ್‌ನ ಅಗ್ರಸ್ಥಾನದಲ್ಲಿರುವ ತಂಡವು ನೇರವಾಗಿ ಫೈನಲ್‌ನಲ್ಲಿ ಸ್ಥಾನ ಪಡೆಯುತ್ತದೆ. ಮತ್ತು ಎರಡನೇ ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಆಡುತ್ತವೆ. ಮೆಗ್ ಲ್ಯಾನ್ನಿಂಗ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ 8 ರಲ್ಲಿ 6 ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನವನ್ನು ಗಳಿಸಿದೆ. ಮುಂಬೈ ಇಂಡಿಯನ್ಸ್ ಕೂಡ ದೆಹಲಿಯಂತೆ ಆರು ಗೆಲುವಿನೊಂದಿಗೆ 12 ಅಂಕಗಳನ್ನು ಹೊಂದಿತ್ತು, ಆದರೆ ಉತ್ತಮ ನಿವ್ವಳ ರನ್ ರೇಟ್‌ನಿಂದಾಗಿ ಡೆಲ್ಲಿ ನೇರವಾಗಿ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಫೈನಲ್ ಫೈಟ್ ಮಾರ್ಚ್ 26ಕ್ಕೆ ಆಯೋಜಿಸಲಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:31 am, Fri, 24 March 23