ಐಪಿಎಲ್‌ನಿಂದ ಬ್ಯಾನ್ ಆಗಿರುವ ಹ್ಯಾರಿ ಬ್ರೂಕ್‌ಗೆ ಪಿಎಸ್ಎಲ್ನಿಂದ ಆಹ್ವಾನ
Harry Brook PSL Return: ಪಿಎಸ್‌ಎಲ್‌ಗೆ ಸಂಕಷ್ಟದ ನಡುವೆ ಬ್ಲೆಸ್ಸಿಂಗ್ ಮುಜರಬಾನಿ ಬದಲು ಹ್ಯಾರಿ ಬ್ರೂಕ್ ಇಸ್ಲಾಮಾಬಾದ್ ಯುನೈಟೆಡ್ ಸೇರಿಕೊಂಡಿದ್ದಾರೆ. ಅಚ್ಚರಿಯೆಂದರೆ, ಗಾಯವಿಲ್ಲದೆ ಐಪಿಎಲ್ ಒಪ್ಪಂದದಿಂದ ಹಿಂದೆ ಸರಿದ ಕಾರಣ, ಹ್ಯಾರಿ ಬ್ರೂಕ್‌ಗೆ ಬಿಸಿಸಿಐ ಎರಡು ವರ್ಷಗಳ ನಿಷೇಧ ಹೇರಿದೆ. ಇದರಿಂದ 2026 ಮತ್ತು 2027ರ ಐಪಿಎಲ್ ಸೀಸನ್ಗಳಲ್ಲಿ ಅವರು ಆಡಲು ಸಾಧ್ಯವಿಲ್ಲ. ಹ್ಯಾರಿ ಬ್ರೂಕ್ ಆಗಮನದಿಂದ ಇಸ್ಲಾಮಾಬಾದ್ ಯುನೈಟೆಡ್ ತಂಡಕ್ಕೆ ಬ್ಯಾಟಿಂಗ್ ಬಲ ಹೆಚ್ಚಿದೆ.

ಒಂದೆಡೆ ಭಾರತದಲ್ಲಿ ಐಪಿಎಲ್ (IPL 2026) ನಡೆಯುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನದಲ್ಲಿ ಪಿಎಸ್‌ಎಲ್ (PSL) ನಡೆಯುತ್ತಿದೆ. ಆದಾಗ್ಯೂ ಪಿಎಸ್‌ಎಲ್‌ಗೆ ಆರಂಭದಲ್ಲೇ ನಾನಾ ಸಂಕಷ್ಟಗಳು ಎದುರಾಗಿವೆ. ಇದರಿಂದಾಗಿ ಪಂದ್ಯಾವಳಿಯನ್ನು ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದೆ. ಇದರ ಜೊತೆಗೆ ಲೀಗ್ ಆರಂಭಕ್ಕೂ ಮುನ್ನ ಕೆಲವು ಆಟಗಾರರು ಲೀಗ್ನಿಂದ ಹಿಂದೆ ಸರಿದಿದ್ದರು. ಇದೀಗ ಅವರ ಬದಲಿಯಾಗಿ ಕೆಲವು ಫ್ರಾಂಚೈಸಿಗಳು ಬೇರೆ ಆಟಗಾರರ ಮೊರೆ ಹೋಗಿವೆ. ಅದರಂತೆ ಜಿಂಬಾಬ್ವೆಯ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ ಪಿಎಸ್ಎಲ್ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡವನ್ನು ತೊರೆದು ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದರು. ಇದೀಗ ಅವರ ಬದಲಿಯಾಗಿ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ (Harry Brook) ತಂಡವನ್ನು ಸೇರಲಿದ್ದಾರೆ.
ಹ್ಯಾರಿ ಬ್ರೂಕ್‌ಗೆ ಆಹ್ವಾನ
ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಮತ್ತೆ ಆಡಲಿದ್ದಾರೆ. ಇಸ್ಲಾಮಾಬಾದ್ ಯುನೈಟೆಡ್ ತಂಡವು ಬ್ಲೆಸ್ಸಿಂಗ್ ಮುಜರಬಾನಿ ಬದಲಿಗೆ ಹ್ಯಾರಿ ಬ್ರೂಕ್ ಅವರನ್ನು ತಂಡಕ್ಕೆ ನೇಮಿಸಿಕೊಂಡಿದೆ. ಹ್ಯಾರಿ ಬ್ರೂಕ್ ಈ ಹಿಂದೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರ ಆಗಮನದಿಂದ ಇಸ್ಲಾಮಾಬಾದ್ ಯುನೈಟೆಡ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ಬಂದಿದೆ.
ಹ್ಯಾರಿ ಬ್ರೂಕ್ ಐಪಿಎಲ್‌ನಿಂದ ಬ್ಯಾನ್
ಹ್ಯಾರಿ ಬ್ರೂಕ್ ಈ ವರ್ಷ ಐಪಿಎಲ್‌ನಲ್ಲಿ ಆಡುತ್ತಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಅವರನ್ನು ಎರಡು ಆವೃತ್ತಿಗಳ (2026 ಮತ್ತು 2027) ಐಪಿಎಲ್‌ನಿಂದ ನಿಷೇಧಿಸಲಾಗಿದೆ. ವಾಸ್ತವವಾಗಿ ಐಪಿಎಲ್ ಹರಾಜಿನಲ್ಲಿ ಹ್ಯಾರಿ ಬ್ರೂಕ್ ಅವರನ್ನು ದೆಹಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 6.25 ಕೋಟಿ ರೂ.ಗೆ ಖರೀದಿ ಮಾಡಿತ್ತು. ಆದರೆ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ಹೆಚ್ಚು ಆದ್ಯತೆ ನೀಡಿ ಐಪಿಎಲ್ ಒಪ್ಪಂದದಿಂದ ಹಿಂದೆ ಸರಿದಿದ್ದರು. ಬಿಸಿಸಿಐನ ಕಟ್ಟುನಿಟ್ಟಿನ ನೀತಿಯಡಿಯಲ್ಲಿ, ಹರಾಜಿನಲ್ಲಿ ಆಯ್ಕೆಯಾದ ಮತ್ತು ನಂತರ ಗಾಯವಿಲ್ಲದೆ ಪಂದ್ಯಾವಳಿಯಿಂದ ಹಿಂದೆ ಸರಿಯುವ ಆಟಗಾರರು ಎರಡು ವರ್ಷಗಳ ನಿಷೇಧವನ್ನು ಎದುರಿಸುತ್ತಾರೆ.
ಅದರಂತೆ ಐಪಿಎಲ್‌ನಿಂದ ಹಿಂದೆ ಸರಿದ ಬ್ರೂಕ್ ಅವರ ದೆಹಲಿ ಕ್ಯಾಪಿಟಲ್ಸ್‌ನೊಂದಿಗಿನ ಒಪ್ಪಂದದ ಎರಡನೇ ಉಲ್ಲಂಘನೆಯಾಗಿದ್ದು, ಇದರ ಪರಿಣಾಮವಾಗಿ ಅವರಿಗೆ ಎರಡು ವರ್ಷಗಳ ನಿಷೇಧದ ಶಿಕ್ಷೆ ವಿಧಿಸಲಾಗಿದೆ. ಹೀಗಾಗಿ ಹ್ಯಾರಿ ಬ್ರೂಕ್ ಮುಂದಿನ ಎರಡು ಆವೃತ್ತಿಗಳ ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ ಅಥವಾ ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.
ಹ್ಯಾರಿ ಬ್ರೂಕ್ ವೃತ್ತಿಜೀವನ
ಹ್ಯಾರಿ ಬ್ರೂಕ್ ಕೊನೆಯ ಬಾರಿಗೆ 2022 ರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಿದ್ದರು. ಆ ಆವೃತ್ತಿಯಲ್ಲಿ ಅವರು ಒಟ್ಟು 10 ಪಂದ್ಯಗಳನ್ನು ಆಡಿ264 ರನ್ ಬಾರಿಸಿದ್ದರು. ಇದರಲ್ಲಿ ಒಂದು ಶತಕವನ್ನೂ ಬಾರಿಸಿದ್ದರು. ಆದ್ದರಿಂದ, ಹ್ಯಾರಿ ಬ್ರೂಕ್ ಆಗಮನವು ಇಸ್ಲಾಮಾಬಾದ್ ಯುನೈಟೆಡ್ ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಲಿದೆ ಎಂದರೆ ತಪ್ಪಾಗಲಾರದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
