Harshal Patel: ಕ್ರೀಡಾಸ್ಪೂರ್ತಿ ಮರೆತ ಹರ್ಷಲ್ ಪಟೇಲ್: ಆರ್​ಸಿಬಿ ವೇಗಿ ವಿರುದ್ದ ಆಕ್ರೋಶ

| Updated By: ಝಾಹಿರ್ ಯೂಸುಫ್

Updated on: Apr 27, 2022 | 12:27 PM

IPL 2022: ಅಂತಿಮವಾಗಿ ಆರ್​ಸಿಬಿ 19.3 ಓವರ್​ಗಳಲ್ಲಿ 115 ರನ್​ಗೆ ಆಲೌಟ್ ಆಗುವ ಮೂಲಕ 29 ರನ್​ಗಳಿಂದ ಸೋಲೊಪ್ಪಿಕೊಂಡಿತು. 31 ಎಸೆತಗಳಲ್ಲಿ 56 ರನ್ ಬಾರಿಸಿ ಮಿಂಚಿದ್ದ ರಿಯಾನ್ ಪರಾಗ್ ಈ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Harshal Patel: ಕ್ರೀಡಾಸ್ಪೂರ್ತಿ ಮರೆತ ಹರ್ಷಲ್ ಪಟೇಲ್: ಆರ್​ಸಿಬಿ ವೇಗಿ ವಿರುದ್ದ ಆಕ್ರೋಶ
Harshal Patel-Riyan Parag
Follow us on

IPL 2022: ಪುಣೆಯಲ್ಲಿ ನಡೆದ ಐಪಿಎಲ್​ನ 39ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ದ ರಾಜಸ್ಥಾನ್ ರಾಯಲ್ಸ್ (RCB vs RR) 29 ರನ್​ಗಳಿಂದ ಜಯ ಸಾಧಿಸಿತ್ತು. ಈ ಪಂದ್ಯದ ವೇಳೆ ಆರ್​ಸಿಬಿ ಆಟಗಾರ ಹರ್ಷಲ್ ಪಟೇಲ್ ಹಾಗೂ ರಿಯಾನ್ ಪರಾಗ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಪರಾಗ್, ಹರ್ಷಲ್ ಪಟೇಲ್ ಅವರ ಕೊನೆಯ ಓವರ್​ನಲ್ಲಿ 1 ಫೋರ್ 2 ಸಿಕ್ಸ್​ನೊಂದಿಗೆ 18 ರನ್ ಬಾರಿಸಿದ್ದರು. ಅದರಲ್ಲೂ ಕೊನೆಯ ಎಸೆತದಲ್ಲಿ ಸಿಕ್ಸ್​ ಬಾರಿಸಿದ್ದರಿಂದ ಹರ್ಷಲ್ ಪಟೇಲ್​ಗೆ ಕೋಪ ನೆತ್ತಿಗೇರಿದೆ. ಇತ್ತ ಇನಿಂಗ್ಸ್ ಮುಗಿಸಿ ಡಗೌಟ್​ಗೆ ಮರಳುತ್ತಿದ್ದ ಪರಾಗ್​ ಅವರನ್ನು ಮೇಲ್ನೋಟಕ್ಕೆ ಹರ್ಷಲ್ ಪಟೇಲ್ ಕೆಣಕಿದ್ದಾರೆ. ಇದರಿಂದ ಕೋಪಗೊಂಡ ರಿಯಾನ್ ಪರಾಗ್ ಕೂಡ ತಿರುಗೇಟು ನೀಡಿದ್ದರು. ಆ ಬಳಿಕ ಇಬ್ಬರ ನಡುವೆ ಮೈದಾನದಲ್ಲೇ ಮಾತಿನ ಚಕಮಕಿ ನಡೆಯಿತು. ಅಷ್ಟರಲ್ಲಿ ಇತರೆ ಆಟಗಾರರು ಆಗಮಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಇದಾದ ಬಳಿಕ 145 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಆರ್​ಸಿಬಿ ತಂಡವು 19.3 ಓವರ್​ಗಳಲ್ಲಿ ಕೇವಲ 115 ರನ್​ಗಳಿಸಿ 29 ರನ್​ಗಳಿಂದ ಸೋಲೋಪ್ಪಿಕೊಂಡಿತು. ಅಂತಿಮವಾಗಿ ಔಟ್ ಆಗಿದ್ದು ಹರ್ಷಲ್ ಪಟೇಲ್. ವಿಶೇಷ ಎಂದರೆ ಹರ್ಷಲ್ ಪಟೇಲ್ ಕ್ಯಾಚ್ ನೀಡಿದ್ದು ರಿಯಾನ್ ಪರಾಗ್​ಗೆ. ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಶೇಕ್ ಹ್ಯಾಂಡ್ ನೀಡಿದ್ದರು. ಆದರೆ ಈ ವೇಳೆ ಹರ್ಷಲ್ ಪಟೇಲ್ ರಿಯಾನ್ ಪರಾಗ್​ ಅವರನ್ನು ನಿರ್ಲಕ್ಷ್ಯ ಮಾಡಿದ್ದಾರೆ.

ಕೈ ಕುಲಕಲು ಬಂದ ಪರಾಗ್ ಅವರನ್ನು ನಿರ್ಲಕ್ಷಿಸಿ ಹರ್ಷಲ್ ಪಟೇಲ್ ಮುಂದಕ್ಕೆ ಹೋಗಿದ್ದಾರೆ. ಇದೀಗ ಆರ್​ಸಿಬಿ ಆಟಗಾರನ ಈ ನಡೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಕ್ರೀಡಾಸ್ಪೂರ್ತಿ ಮರೆತ ಹರ್ಷಲ್ ಪಟೇಲ್ ವಿರುದ್ದ ಕ್ರಿಕೆಟ್ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರೀಕ್ಷೆಯನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ್ದ ಆರ್​ಸಿಬಿ ಬೌಲರ್​ಗಳು ಆರಂಭದಲ್ಲೇ ಯಶಸ್ಸು ಸಾಧಿಸಿದ್ದದರು. ಪವರ್​ಪ್ಲೇನಲ್ಲೇ 3 ವಿಕೆಟ್ ಉರುಳಿಸಿ ರಾಜಸ್ಥಾನ್ ರಾಯಲ್ಸ್​ಗೆ ಆಘಾತ ನೀಡಿದ್ದರು. ಆದರೆ 6ನೇ ಕ್ರಮಾಂಕದಲ್ಲಿ ಆಡಿದ ರಿಯಾನ್ ಪರಾಗ್ ಅವರು ಮಾತ್ರ ಆರ್​ಸಿಬಿ ಬೌಲರ್​ಗಳ ವಿರುದ್ದ ತಿರುಗಿಬಿದ್ದರು.

29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಪರಾಗ್ ತಂಡದ ಮೊತ್ತವನ್ನು ಹೆಚ್ಚಿಸುತ್ತಾ ಹೋದರು. ಅಲ್ಲದೆ ಅಂತಿಮವಾಗಿ 31 ಎಸೆತಗಳಲ್ಲಿ 51 ರನ್​ ಬಾರಿಸಿ ರಾಜಸ್ಥಾನ್ ರಾಯಲ್ಸ್ ತಂಡದ ಮೊತ್ತವನ್ನು 144 ಕ್ಕೆ ತಂದು ನಿಲ್ಲಿಸಿದರು. 145 ರನ್​ಗಳ ಸಾಧಾರಣ ಸವಾಲು ಪಡೆದ ಆರ್​ಸಿಬಿ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾಗಿ ಬಡ್ತಿ ಪಡೆದಿದ್ದ ವಿರಾಟ್ ಕೊಹ್ಲಿ ಕೇವಲ 9 ರನ್​ಗಳಿಸಿ ಔಟಾಗಿದ್ದರು. ಇದರ ಬೆನ್ನಲ್ಲೇ ಡುಪ್ಲೆಸಿಸ್​ (23) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ (0) ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ಇನ್ನುಳಿದಂತೆ ರಜತ್ ಪಾಟಿದಾರ್ (16), ಸುಯಶ್ ಪ್ರಭುದೇಸಾಯಿ (2) ಬಂದ ವೇಗದಲ್ಲೇ ಹಿಂತಿರುಗಿದರು. ಇದಾಗ್ಯೂ ಶಹಬಾಜ್ ಅಹ್ಮದ್ (17) ಒಂದಷ್ಟು ಹೊತ್ತು ಕ್ರೀಸ್ ಕಚ್ಚಿ ನಿಂತರು. ಆದರೆ ಈ ವೇಳೆ ಕೆಟ್ಟ ರನ್​ ಕರೆಯಿಂದಾಗಿ ದಿನೇಶ್ ಕಾರ್ತಿಕ್ (6) ಅವರು ರನೌಟ್ ಆದರು. ಇದರೊಂದಿಗೆ ಆರ್​ಸಿಬಿ ತಂಡದ ಸೋಲು ಖಚಿತವಾಗಿತ್ತು. ಅಂತಿಮವಾಗಿ ಆರ್​ಸಿಬಿ 19.3 ಓವರ್​ಗಳಲ್ಲಿ 115 ರನ್​ಗೆ ಆಲೌಟ್ ಆಗುವ ಮೂಲಕ 29 ರನ್​ಗಳಿಂದ ಸೋಲೊಪ್ಪಿಕೊಂಡಿತು. 31 ಎಸೆತಗಳಲ್ಲಿ 56 ರನ್ ಬಾರಿಸಿ ಮಿಂಚಿದ್ದ ರಿಯಾನ್ ಪರಾಗ್ ಈ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಇದನ್ನೂ ಓದಿ: IPL 2022 VIDEO: ಏನೋ ಮಾಡ್ತೀಯಾ..? ಮೈದಾನದಲ್ಲೇ ಜಗಳಕ್ಕಿಳಿದ ಹರ್ಷಲ್-ಪರಾಗ್

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್