Riyan Parag: ಬ್ಯಾಟಿಂಗ್-ಫೀಲ್ಡಿಂಗ್ ಮೂಲಕ ದಾಖಲೆ ಬರೆದ ರಿಯಾನ್ ಪರಾಗ್

Riyan Parag: ಬ್ಯಾಟಿಂಗ್-ಫೀಲ್ಡಿಂಗ್ ಮೂಲಕ ದಾಖಲೆ ಬರೆದ ರಿಯಾನ್ ಪರಾಗ್
Riyan Parag

IPL 2022: ಆರ್​ಆರ್​ ತಂಡ ನೀಡಿದ 145 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಆರ್​ಸಿಬಿ 115 ರನ್​ಗಳಿಗೆ ಆಲೌಟ್ ಆಗುವ ಮೂಲಕ 29 ರನ್​ಗಳಿಂದ ಸೋಲೋಪ್ಪಿಕೊಂಡಿತು.

TV9kannada Web Team

| Edited By: Zahir PY

Apr 27, 2022 | 1:48 PM

ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ತಂಡ 29 ರನ್‌ಗಳಿಂದ ಸೋತಿದೆ. ಈ ಗೆಲುವಿನೊಂದಿಗೆ ರಾಜಸ್ಥಾನ್ ‘ರಾಯಲ್ಸ್’ 12 ಅಂಕಗಳೊಂದಿಗೆ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಪಂದ್ಯದ ಗೆಲುವಿನ ರೂವಾರಿ ರಿಯಾನ್ ಪರಾಗ್ (Riyan Parag). ಆರ್​ಆರ್​ ಪರ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಯಾನ್ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದರು. ಅಲ್ಲದೆ ಫೀಲ್ಡಿಂಗ್​ನಲ್ಲಿ ಒಟ್ಟು 4 ಕ್ಯಾಚ್‌ಗಳನ್ನು ಹಿಡಿದು ಮಿಂಚಿದ್ದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಅತ್ಯುತ್ತಮ ಪ್ರದರ್ಶನದ ಫಲವಾಗಿ ರಿಯಾನ್ ಪರಾಗ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಒಲಿಯಿತು.

ಈ ಭರ್ಜರಿ ಪ್ರದರ್ಶನದ ಮೂಲಕ ರಿಯಾನ್ ಪರಾಗ್ ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ರಿಯಾನ್ ಐಪಿಎಲ್ ಪಂದ್ಯವೊಂದರಲ್ಲಿ ಅರ್ಧಶತಕ ಬಾರಿಸಿ, 4 ಕ್ಯಾಚ್‌ಗಳನ್ನು ಹಿಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಜಾಕ್ಸ್ ಕಾಲಿಸ್ ಮತ್ತು ಆ್ಯಡಂ ಗಿಲ್​ಕ್ರಿಸ್ಟ್​ ಮಾತ್ರ ಐಪಿಎಲ್​ನಲ್ಲಿ ಅರ್ಧಶತಕ ಬಾರಿಸಿ 4 ಕ್ಯಾಚ್ ಹಿಡಿದ ದಾಖಲೆ ಬರೆದಿದ್ದರು. ಇದೀಗ ರಿಯಾನ್ ಪರಾಗ್ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಕಾಲಿಸ್ 2011ರ ಐಪಿಎಲ್‌ನಲ್ಲಿ ಕೆಕೆಆರ್ ಪರ ಆಡುತ್ತಿದ್ದಾಗ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಈ ಸಾಧನೆ ಮಾಡಿದ್ದರು. ಮತ್ತೊಂದೆಡೆ, ಆಸ್ಟ್ರೇಲಿಯಾದ ಶ್ರೇಷ್ಠ ವಿಕೆಟ್‌ಕೀಪರ್ ಆ್ಯಡಂ ಗಿಲ್‌ಕ್ರಿಸ್ಟ್ 2012 ರಲ್ಲಿ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುವಾಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಈ ದಾಖಲೆಯನ್ನು ಮಾಡಿದ್ದರು. ಇದೀಗ ಆರ್​ಸಿಬಿ ವಿರುದ್ದ ಪರಾಗ್ ಕೂಡ ಅರ್ಧಶತಕ ಬಾರಿಸಿ 4 ಕ್ಯಾಚ್ ಹಿಡಿದು ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಇನ್ನು ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿನ ನಂತರ ಮಾತನಾಡಿದ ರಿಯಾನ್ ಪರಾಗ್, ‘ರಾಯಲ್ಸ್ ಕಳೆದ ಮೂರು ವರ್ಷಗಳಿಂದ ನನ್ನ ಮೇಲೆ ನಂಬಿಕೆಯನ್ನು ಇಟ್ಟಿದೆ. ನಾನು ಒತ್ತಡವನ್ನು ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ಟೈಮ್‌ಔಟ್‌ನ ಸಮಯದಲ್ಲಿ ಕೋಚ್ ಸಂಗಕ್ಕಾರ ನನಗೆ 140 ಸ್ಕೋರ್​ ಉತ್ತಮ ಮೊತ್ತವಾಗಲಿದೆ ಎಂದು ತಿಳಿಸಿದ್ದರು. ಹೀಗಾಗಿ ಕೊನೆಯ ಎರಡು ಓವರ್‌ಗಳಲ್ಲಿ ಭರ್ಜರಿ ಹೊಡೆತಕ್ಕೆ ನಿರ್ಧರಿಸಿದ್ದೆ. ಅದರಂತೆ ಆರ್​​ಸಿಬಿ ಡೆತ್ ಬೌಲರ್​ಗಳ ವಿರುದ್ದ ಬಿರುಸಿನ ಬ್ಯಾಟಿಂಗ್ ಮಾಡಿ ತಂಡದ ಟಾರ್ಗೆಟ್​ ಅನ್ನು ಮುಟ್ಟಿಸಿದ್ದೆ ಎಂದು ರಿಯಾನ್ ಪರಾಗ್ ತಿಳಿಸಿದ್ದಾರೆ. ಆರ್​ಆರ್​ ತಂಡ ನೀಡಿದ 145 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಆರ್​ಸಿಬಿ 115 ರನ್​ಗಳಿಗೆ ಆಲೌಟ್ ಆಗುವ ಮೂಲಕ 29 ರನ್​ಗಳಿಂದ ಸೋಲೋಪ್ಪಿಕೊಂಡಿತು.

ಇದನ್ನೂ ಓದಿ: IPL 2022 VIDEO: ಏನೋ ಮಾಡ್ತೀಯಾ..? ಮೈದಾನದಲ್ಲೇ ಜಗಳಕ್ಕಿಳಿದ ಹರ್ಷಲ್-ಪರಾಗ್

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

Follow us on

Related Stories

Most Read Stories

Click on your DTH Provider to Add TV9 Kannada