Harshal Patel: ಕ್ರೀಡಾಸ್ಪೂರ್ತಿ ಮರೆತ ಹರ್ಷಲ್ ಪಟೇಲ್: ಆರ್ಸಿಬಿ ವೇಗಿ ವಿರುದ್ದ ಆಕ್ರೋಶ
IPL 2022: ಅಂತಿಮವಾಗಿ ಆರ್ಸಿಬಿ 19.3 ಓವರ್ಗಳಲ್ಲಿ 115 ರನ್ಗೆ ಆಲೌಟ್ ಆಗುವ ಮೂಲಕ 29 ರನ್ಗಳಿಂದ ಸೋಲೊಪ್ಪಿಕೊಂಡಿತು. 31 ಎಸೆತಗಳಲ್ಲಿ 56 ರನ್ ಬಾರಿಸಿ ಮಿಂಚಿದ್ದ ರಿಯಾನ್ ಪರಾಗ್ ಈ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
IPL 2022: ಪುಣೆಯಲ್ಲಿ ನಡೆದ ಐಪಿಎಲ್ನ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ರಾಜಸ್ಥಾನ್ ರಾಯಲ್ಸ್ (RCB vs RR) 29 ರನ್ಗಳಿಂದ ಜಯ ಸಾಧಿಸಿತ್ತು. ಈ ಪಂದ್ಯದ ವೇಳೆ ಆರ್ಸಿಬಿ ಆಟಗಾರ ಹರ್ಷಲ್ ಪಟೇಲ್ ಹಾಗೂ ರಿಯಾನ್ ಪರಾಗ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಪರಾಗ್, ಹರ್ಷಲ್ ಪಟೇಲ್ ಅವರ ಕೊನೆಯ ಓವರ್ನಲ್ಲಿ 1 ಫೋರ್ 2 ಸಿಕ್ಸ್ನೊಂದಿಗೆ 18 ರನ್ ಬಾರಿಸಿದ್ದರು. ಅದರಲ್ಲೂ ಕೊನೆಯ ಎಸೆತದಲ್ಲಿ ಸಿಕ್ಸ್ ಬಾರಿಸಿದ್ದರಿಂದ ಹರ್ಷಲ್ ಪಟೇಲ್ಗೆ ಕೋಪ ನೆತ್ತಿಗೇರಿದೆ. ಇತ್ತ ಇನಿಂಗ್ಸ್ ಮುಗಿಸಿ ಡಗೌಟ್ಗೆ ಮರಳುತ್ತಿದ್ದ ಪರಾಗ್ ಅವರನ್ನು ಮೇಲ್ನೋಟಕ್ಕೆ ಹರ್ಷಲ್ ಪಟೇಲ್ ಕೆಣಕಿದ್ದಾರೆ. ಇದರಿಂದ ಕೋಪಗೊಂಡ ರಿಯಾನ್ ಪರಾಗ್ ಕೂಡ ತಿರುಗೇಟು ನೀಡಿದ್ದರು. ಆ ಬಳಿಕ ಇಬ್ಬರ ನಡುವೆ ಮೈದಾನದಲ್ಲೇ ಮಾತಿನ ಚಕಮಕಿ ನಡೆಯಿತು. ಅಷ್ಟರಲ್ಲಿ ಇತರೆ ಆಟಗಾರರು ಆಗಮಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಇದಾದ ಬಳಿಕ 145 ರನ್ಗಳ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ತಂಡವು 19.3 ಓವರ್ಗಳಲ್ಲಿ ಕೇವಲ 115 ರನ್ಗಳಿಸಿ 29 ರನ್ಗಳಿಂದ ಸೋಲೋಪ್ಪಿಕೊಂಡಿತು. ಅಂತಿಮವಾಗಿ ಔಟ್ ಆಗಿದ್ದು ಹರ್ಷಲ್ ಪಟೇಲ್. ವಿಶೇಷ ಎಂದರೆ ಹರ್ಷಲ್ ಪಟೇಲ್ ಕ್ಯಾಚ್ ನೀಡಿದ್ದು ರಿಯಾನ್ ಪರಾಗ್ಗೆ. ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಶೇಕ್ ಹ್ಯಾಂಡ್ ನೀಡಿದ್ದರು. ಆದರೆ ಈ ವೇಳೆ ಹರ್ಷಲ್ ಪಟೇಲ್ ರಿಯಾನ್ ಪರಾಗ್ ಅವರನ್ನು ನಿರ್ಲಕ್ಷ್ಯ ಮಾಡಿದ್ದಾರೆ.
ಕೈ ಕುಲಕಲು ಬಂದ ಪರಾಗ್ ಅವರನ್ನು ನಿರ್ಲಕ್ಷಿಸಿ ಹರ್ಷಲ್ ಪಟೇಲ್ ಮುಂದಕ್ಕೆ ಹೋಗಿದ್ದಾರೆ. ಇದೀಗ ಆರ್ಸಿಬಿ ಆಟಗಾರನ ಈ ನಡೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಕ್ರೀಡಾಸ್ಪೂರ್ತಿ ಮರೆತ ಹರ್ಷಲ್ ಪಟೇಲ್ ವಿರುದ್ದ ಕ್ರಿಕೆಟ್ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
One Young Talent Jealous Of Other. Very #Unsportive Behaviour From Harshal Patel. Keep Going Riyan Parag @rajasthanroyals @RCBTweets @IPL pic.twitter.com/Sg0Pv2pfSC
— JAYAKRISHNA (@ImJK_117) April 27, 2022
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರೀಕ್ಷೆಯನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ್ದ ಆರ್ಸಿಬಿ ಬೌಲರ್ಗಳು ಆರಂಭದಲ್ಲೇ ಯಶಸ್ಸು ಸಾಧಿಸಿದ್ದದರು. ಪವರ್ಪ್ಲೇನಲ್ಲೇ 3 ವಿಕೆಟ್ ಉರುಳಿಸಿ ರಾಜಸ್ಥಾನ್ ರಾಯಲ್ಸ್ಗೆ ಆಘಾತ ನೀಡಿದ್ದರು. ಆದರೆ 6ನೇ ಕ್ರಮಾಂಕದಲ್ಲಿ ಆಡಿದ ರಿಯಾನ್ ಪರಾಗ್ ಅವರು ಮಾತ್ರ ಆರ್ಸಿಬಿ ಬೌಲರ್ಗಳ ವಿರುದ್ದ ತಿರುಗಿಬಿದ್ದರು.
29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಪರಾಗ್ ತಂಡದ ಮೊತ್ತವನ್ನು ಹೆಚ್ಚಿಸುತ್ತಾ ಹೋದರು. ಅಲ್ಲದೆ ಅಂತಿಮವಾಗಿ 31 ಎಸೆತಗಳಲ್ಲಿ 51 ರನ್ ಬಾರಿಸಿ ರಾಜಸ್ಥಾನ್ ರಾಯಲ್ಸ್ ತಂಡದ ಮೊತ್ತವನ್ನು 144 ಕ್ಕೆ ತಂದು ನಿಲ್ಲಿಸಿದರು. 145 ರನ್ಗಳ ಸಾಧಾರಣ ಸವಾಲು ಪಡೆದ ಆರ್ಸಿಬಿ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾಗಿ ಬಡ್ತಿ ಪಡೆದಿದ್ದ ವಿರಾಟ್ ಕೊಹ್ಲಿ ಕೇವಲ 9 ರನ್ಗಳಿಸಿ ಔಟಾಗಿದ್ದರು. ಇದರ ಬೆನ್ನಲ್ಲೇ ಡುಪ್ಲೆಸಿಸ್ (23) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (0) ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಇನ್ನುಳಿದಂತೆ ರಜತ್ ಪಾಟಿದಾರ್ (16), ಸುಯಶ್ ಪ್ರಭುದೇಸಾಯಿ (2) ಬಂದ ವೇಗದಲ್ಲೇ ಹಿಂತಿರುಗಿದರು. ಇದಾಗ್ಯೂ ಶಹಬಾಜ್ ಅಹ್ಮದ್ (17) ಒಂದಷ್ಟು ಹೊತ್ತು ಕ್ರೀಸ್ ಕಚ್ಚಿ ನಿಂತರು. ಆದರೆ ಈ ವೇಳೆ ಕೆಟ್ಟ ರನ್ ಕರೆಯಿಂದಾಗಿ ದಿನೇಶ್ ಕಾರ್ತಿಕ್ (6) ಅವರು ರನೌಟ್ ಆದರು. ಇದರೊಂದಿಗೆ ಆರ್ಸಿಬಿ ತಂಡದ ಸೋಲು ಖಚಿತವಾಗಿತ್ತು. ಅಂತಿಮವಾಗಿ ಆರ್ಸಿಬಿ 19.3 ಓವರ್ಗಳಲ್ಲಿ 115 ರನ್ಗೆ ಆಲೌಟ್ ಆಗುವ ಮೂಲಕ 29 ರನ್ಗಳಿಂದ ಸೋಲೊಪ್ಪಿಕೊಂಡಿತು. 31 ಎಸೆತಗಳಲ್ಲಿ 56 ರನ್ ಬಾರಿಸಿ ಮಿಂಚಿದ್ದ ರಿಯಾನ್ ಪರಾಗ್ ಈ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಇದನ್ನೂ ಓದಿ: IPL 2022 VIDEO: ಏನೋ ಮಾಡ್ತೀಯಾ..? ಮೈದಾನದಲ್ಲೇ ಜಗಳಕ್ಕಿಳಿದ ಹರ್ಷಲ್-ಪರಾಗ್
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್