Harshal Patel: ಪದಾರ್ಪಣೆ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಸ್ವೀಕರಿಸುವಾಗ ಹರ್ಷಲ್ ಪಟೇಲ್ ಹೇಳಿದ್ದೇನು ಗೊತ್ತಾ?
Harshal Patel Gets Man of The Match on Debut: ಭಾರತ ಟಿ20 ತಂಡಕ್ಕೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ 4 ಓವರ್ ಬೌಲಿಂಗ್ ಮಾಡಿ ಕೇವಲ 25 ರನ್ ನೀಡಿ 2 ವಿಕೆಟ್ ಕಿತ್ತ ಹರ್ಷಲ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡಿದ್ದಾರೆ. ಈ ಸಂದರ್ಭ ಮಾತನಾಡಿದ್ದು, ಕೆಲ ಅಮೂಲ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಟಿ20 ವಿಶ್ವಕಪ್ (T20 World Cup) ಸೋಲಿನ ಆಘಾತದಿಂದ ಭರ್ಜರಿ ಆಗಿ ಕಮ್ಬ್ಯಾಕ್ ಮಾಡಿರುವ ಭಾರತ ತಂಡ ನ್ಯೂಜಿಲೆಂಡ್ (India vs New Zealand) ವಿರುದ್ಧದ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಜೈಪುರದಲ್ಲಿ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ 5 ವಿಕೆಟ್ಗಳ ರೋಚಕ ಜಯ ಸಾಧಿಸಿದ್ದ ಟೀಮ್ ಇಂಡಿಯಾ (Team India) ಸದ್ಯ ರಾಂಚಿಯಲ್ಲಿ ನಡೆದ ಎರಡನೇ ಟಿ20ಯಲ್ಲೂ 7 ವಿಕೆಟ್ಗಳ ಭರ್ಜರಿ ಗೆಲುವು ಕಂಡಿದೆ. ಈ ಮೂಲಕ ರೋಹಿತ್ ಶರ್ಮಾ (Rohit Sharma) ಪರಿಪೂರ್ಣ ನಾಯಕನಾಗಿ ಮತ್ತು ಕೋಚ್ ಆಗಿ ರಾಹುಲ್ ದ್ರಾವಿಡ್ (Rahul Dravid) ಅವರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಶುರು ಮಾಡಿದ್ದಾರೆ. ಇದರ ನಡುವವೆ ಎರಡನೇ ಟಿ20 ಪಂದ್ಯದ ಮೂಲಕ ಪದಾರ್ಪಣೆ ಮಾಡಿದ ವೇಗಿ ಹರ್ಷಲ್ ಪಟೇಲ್ (Harshal Patel) ನ್ಯೂಜಿಲೆಂಡ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡರು.
ಹೌದು, ಐಪಿಎಲ್ 2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅಮೋಘ ಪ್ರದರ್ಶನ ನೀಡಿದ ಹರ್ಷಲ್ ಪಟೇಲ್ ಸದ್ಯ ಟೀಮ್ ಇಂಡಿಯಾಕ್ಕೂ ಕಾಲಿಟ್ಟು ಮೋಡಿ ಮಾಡುತ್ತಿದ್ದಾರೆ. ಐಪಿಎಲ್ 2021ರಲ್ಲಿ ಲೀಡಿಂಗ್ ವಿಕೆಟ್ ಟೇಕರ್ ಆಗಿರುವ ಹರ್ಷಲ್ ಐಪಿಎಲ್ ಇತಿಹಾಸದಲ್ಲೇ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. 2021ರ ಪರ್ಪಲ್ ಕ್ಯಾಪ್ ವಿನ್ನರ್ ಆಗಿರುವ ಇವರು 15 ಪಂದ್ಯಗಳಲ್ಲಿ 32 ವಿಕೆಟ್‌ಗಳನ್ನು ಪಡೆದಿದ್ದರು. ಈ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ತಮ್ಮ 30ನೇ ವರ್ಷದಲ್ಲಿ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.
ತನ್ನ ಚೊಚ್ಚಲ ಪಂದ್ಯದಲ್ಲೇ 4 ಓವರ್ ಬೌಲಿಂಗ್ ಮಾಡಿ ಕೇವಲ 25 ರನ್ ನೀಡಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಿತ್ತರು. ಅದ್ಭುತ ಪ್ರದರ್ಶನ ನೀಡಿದ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು, “ಇದಕ್ಕಿಂತ ಉತ್ತಮ ಪದಾರ್ಪಣಾ ಪಂದ್ಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನನ್ನ ಪ್ರಕಾರ ನಾನು ಉತ್ತಮವಾಗಿ ಪ್ರದರ್ಶನ ನೀಡಿದ್ದೇನೆ. ನನಗೆ ಸಾಕಷ್ಟು ಕ್ರಿಕೆಟ್ ಆಡಿದ ಅನುಭವವಿಲ್ಲ. ಹೀಗಾಗಿ ನಾನು ಆಟವನ್ನು ಆರಂಭದಿಂದ ಕಲಿಯುತ್ತಿರುತ್ತೇನೆ. ಬೆಳವಣಿಗೆ ಎನ್ನುವುದು ನಿಧಾನಗತಿ ಮತ್ತು ನಿರಂತರವಾಗಿರುತ್ತದೆ. ನಾನೂ ತಪ್ಪುಗಳನ್ನು ಮಾಡುತ್ತೇನೆ ಮತ್ತು ಅದರಿಂದ ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂಬುದನ್ನು ಕಲಿಯುತ್ತೇನೆ” ಎಂದು ಹೇಳಿದ್ದಾರೆ.
“ನನ್ನ ಪಾಲಿಗೆ ಇದೊಂದು ಅದ್ಭುತ ಪ್ರಯಾಣ. ಕೇವಲ ಕ್ರಿಕೆಟ್ ಒಳಗಡೆ ಮಾತ್ರವಲ್ಲದೆ ಇದರ ಆಚೆಗೂ ಯಾವರೀತಿ ಇರಬೇಕು ಎಂಬ ಅನೇಕ ಪಾಠಗಳನ್ನು ಕಲಿತಿದ್ದೇನೆ. ಬೌಲಿಂಗ್ನಲ್ಲಿ ಸಾಕಷ್ಟು ವೇರಿಯೆಷನ್ಗಳ ಅಗತ್ಯ ಬೇಡ ಎಂಬುದು ನನ್ನ ಅನಿಸಿಕೆ. ನಿಮ್ಮ ಕಡೆಯಿಂದ ಏನು ಸಾಧ್ಯವಾಗುತ್ತದೆ ಅದನ್ನು ನೀವು ಕಾರ್ಯರೂಪಕ್ಕೆ ತಂದರೆ ಫಲಿತಾಂಶ ಬರುತ್ತದೆ. ಈರೀತಿಯ ಪರಿಸ್ಥಿತಿಯಲ್ಲಿ ನಾನು ಹೆಚ್ಚು ಯಾರ್ಕರ್ ಎಸೆತವನ್ನು ಹಾಕುವುದಿಲ್ಲ. ನಾನು ಅದನ್ನು ಕೆಲ ಸಂದರ್ಭಗಳಲ್ಲಿ ಮಾತ್ರ ಉಪಯೋಗಿಸುತ್ತೇನೆ. ಇದು ನನ್ನ ಸಾಮರ್ಥ್ಯವನ್ನು ತೋರ್ಪಡಿಸಲು ನನಗೆ ಸಿಕ್ಕ ಮತ್ತೊಂದು ಅವಕಾಶವಾಗಿದೆ. ನನ್ನ ಪಾಲಿಗೆ ಏನೇ ಬಂದರು ಅದನ್ನು ಸ್ವಾಗತಿಸುತ್ತೇನೆ” ಎಂದು ಹರ್ಷಲ್ ಪಟೇಲ್ ಹೇಳಿದ್ದಾರೆ.
ಇನ್ನು ಹರ್ಷಲ್ ಪಟೇಲ್ ಪ್ರದರ್ಶನದ ಬಗ್ಗೆ ಮಾತನಾಡಿರುವ ನಾಯಕ ರೋಹಿತ್ ಶರ್ಮಾ, “ಹರ್ಷಲ್ ಪಟೇಲ್ ತಾನು ಏನು ಎಂಬುದು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದ್ದಾರೆ. ಅವರೊಬ್ಬ ಕೌಶಲ್ಯಪೂರ್ಣ ಬೌಲರ್. ಈರೀತಿಯ ಕಂಡೀಶನ್ನಲ್ಲಿ ಅವರು ಸ್ಲೋವರ್ ಬಾಲ್ ಅನ್ನು ಅದ್ಭುತವಾಗಿ ಮಾಡುತ್ತಾರೆ” ಎಂದು ಹಾಡಿಹೊಗಳಿದ್ದಾರೆ.
Rohit Sharma: ಪಂದ್ಯ ಮುಗಿದ ಬಳಿಕ 3ನೇ ಟಿ20 ಬಗ್ಗೆ ರೋಹಿತ್ ಶರ್ಮಾರಿಂದ ಮಹತ್ವದ ಹೇಳಿಕೆ: ಏನದು ಗೊತ್ತೇ?
India vs New Zealand T20: ರೋಹಿತ್-ದ್ರಾವಿಡ್ ಮಾಸ್ಟರ್ ಪ್ಲಾನ್ಗೆ ಮಕಾಡೆ ಮಲಗಿದ ನ್ಯೂಜಿಲೆಂಡ್: ಸರಣಿ ಕೈವಶ
(Harshal Patel won Man of The Match Award in India vs New Zealand 2nd T20I Here is What He said)