
Asia Cup 2022: ಏಷ್ಯಾ ರಾಷ್ಟ್ರಗಳ ಚುಟುಕು ಕ್ರಿಕೆಟ್ ಕದನ ಏಷ್ಯಾಕಪ್ ಇಂದಿನಿಂದ ಶುರುವಾಗಲಿದೆ. 15ನೇ ಸೀಸನ್ ಟೂರ್ನಿ ಆರಂಭಕ್ಕೂ ಮುನ್ನವೇ ಪಾಕಿಸ್ತಾನ್ ತಂಡಕ್ಕೆ ಆಘಾತ ಎದುರಾಗಿತ್ತು. ತಂಡದಕ್ಕೆ ಆಯ್ಕೆಯಾಗಿದ್ದ ಪ್ರಮುಖ ವೇಗಿ ಶಾಹೀನ್ ಅಫ್ರಿದಿ ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿದ್ದರು. ಇನ್ನೇನು ಟೂರ್ನಿ ಆರಂಭವಾಗಲಿದೆ ಎನ್ನುವಷ್ಟರಲ್ಲಿ ಮತ್ತೋರ್ವ ವೇಗಿ ಮೊಹಮ್ಮದ್ ವಾಸಿಂ ಜೂನಿಯರ್ ಅಭ್ಯಾಸದ ವೇಳೆ ಗಾಯಗೊಂಡು ಹೊರಬಿದ್ದಿದ್ದರು. ಇದೀಗ ವಾಸಿಂ ಜೂನಿಯರ್ ಸ್ಥಾನದಲ್ಲಿ ಪಾಕ್ ಕ್ರಿಕೆಟ್ ಮಂಡಳಿ ಮತ್ತೋರ್ವ ವೇಗಿ ಹಸನ್ ಅಲಿ ಅವರನ್ನು ಆಯ್ಕೆ ಮಾಡಿದೆ.
ಪಾಕಿಸ್ತಾನ್ ತಂಡದ ಅನುಭವಿ ವೇಗಿಯಾಗಿ ಗುರುತಿಸಿಕೊಂಡಿರುವ ಹಸನ್ ಅಲಿ ಅವರನ್ನು ಈ ಬಾರಿ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಬದಲಾಗಿ ಯುವ ವೇಗಿಗಳಿಗೆ ಅವಕಾಶ ನೀಡಲಾಗಿತ್ತು. ಇದೀಗ ಇಬ್ಬರು ಪ್ರಮುಖ ಬೌಲರ್ಗಳು ಹೊರಬಿದ್ದ ಕಾರಣ ಹಸನ್ ಅಲಿಗೆ ಅವಕಾಶ ಕಲ್ಪಿಸಲಾಗಿದೆ.
ಅದರಂತೆ ಇದೀಗ ಏಷ್ಯಾಕಪ್ ಆಯೋಜಕರು ಬದಲಿ ಆಟಗಾರರನ್ನು ಕರೆಸಿಕೊಳ್ಳಲು ಪಾಕ್ ತಂಡಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಭಾರತದ ವಿರುದ್ದದ ಪಂದ್ಯಕ್ಕೂ ಮುನ್ನವೇ ಹಸನ್ ಅಲಿ ಪಾಕಿಸ್ತಾನ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಭಾರತ-ಪಾಕಿಸ್ತಾನ್ ನಡುವಣ ಪಂದ್ಯವು ಆಗಸ್ಟ್ 28 ರಂದು ನಡೆಯಲಿದೆ. ಇತ್ತ ಶುಕ್ರವಾರವೇ ಹಸನ್ ಅಲಿ ಅವರ ಆಯ್ಕೆಯನ್ನು ಏಷ್ಯಾಕಪ್ ತಾಂತ್ರಿಕ ಸಮಿತಿಯು ಅನುಮೋದಿಸಿದೆ. ಹೀಗಾಗಿ ಟೀಮ್ ಇಂಡಿಯಾ ವಿರುದ್ದದ ಪಂದ್ಯದಲ್ಲಿ ಹಸನ್ ಅಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
2021 ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ದ ಆಡಿದ ಪ್ಲೇಯಿಂಗ್ ಇಲೆವೆನ್ನಲ್ಲಿ ಹಸನ್ ಅಲಿ ಕೂಡ ಇದ್ದರು. ಆ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದ ಹಸನ್ ಸೂರ್ಯಕುಮಾರ್ ಯಾದವ್ ಹಾಗೂ ರವೀಂದ್ರ ಜಡೇಜಾ ಅವರ ವಿಕೆಟ್ ಪಡೆದಿದ್ದರು. ಇದೀಗ ಬದಲಿ ಆಟಗಾರನಾಗಿ ಅನುಭವಿ ವೇಗಿಯನ್ನು ಮತ್ತೆ ಕರೆಸಿಕೊಳ್ಳುವ ಮೂಲಕ ಪಾಕಿಸ್ತಾನ್ ಟೀಮ್ ಇಂಡಿಯಾ ವಿರುದ್ದ ಭರ್ಜರಿ ಪ್ಲ್ಯಾನ್ ರೂಪಿಸುತ್ತಿದೆ.
ಪಾಕಿಸ್ತಾನ್ ಪರ 49 ಟಿ20 ಪಂದ್ಯಗಳನ್ನಾಡಿರುವ ಹಸನ್ ಅಲಿ ಒಟ್ಟು 60 ವಿಕೆಟ್ ಪಡೆದಿದ್ದಾರೆ. ಇದೀಗ ಅಂತಿಮ ಹಂತದಲ್ಲಿ ತಂಡವನ್ನು ಕೂಡಿಕೊಳ್ಳುವ ಮೂಲಕ ಟೀಮ್ ಇಂಡಿಯಾ ಪಾಲಿಗೆ ಕಂಟಕವಾಗಲಿದೆಯಾ ಕಾದು ನೋಡಬೇಕಿದೆ.
ಪಾಕಿಸ್ತಾನ ತಂಡ ಹೀಗಿದೆ:
ಬಾಬರ್ ಆಜಂ (ನಾಯಕ), ಶದಾಬ್ ಖಾನ್, ಆಸಿಫ್ ಅಲಿ, ಫಖರ್ ಝಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕಾರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಝ್ವಾನ್ (ವಿಕೆಟ್‌ಕೀಪರ್), ಹಸನ್ ಅಲಿ, ನಸೀಮ್ ಶಾ, ಮೊಹಮ್ಮದ್ ಹಸ್ನೈನ್, ಶಹನವಾಝ್ ದಹಾನಿ, ಉಸ್ಮಾನ್ ಖಾದಿರ್.
ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್.