Rashmika Mandanna: ಮಿಂಚಿಂಗೊ ಮಿಂಚಿಂಗ್…ಸದ್ಯಕ್ಕಂತು ಕನ್ನಡಕ್ಕಿಲ್ಲ ರಶ್ಮಿಕಾ ಮಂದಣ್ಣ..!
Rashmika Mandanna: ಸೌತ್ ಸೆನ್ಸೇಷನ್ ದುಲ್ಖಾರ್ ಸಲ್ಮಾನ್ ಅಭಿನಯದ ಸೀತಾ ರಾಮಂ ಚಿತ್ರದಲ್ಲಿ ರಶ್ಮಿಕಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ತಮಿಳು ಚಿತ್ರರಂಗದ ಬಾಕ್ಸಾಫೀಸ್ ಕಿಂಗ್ ಇಳಯ ದಳಪತಿ ವಿಜಯ್ ಅವರ 66ನೇ ಚಿತ್ರಕ್ಕೂ ಸ್ಯಾಂಡಲ್ವುಡ್ ಸಾನ್ವಿಯೇ ನಾಯಕಿ.
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿ ಕೆರಿಯರ್ ಆರಂಭಿಸಿದ್ದ ಕೊಡಗಿನ ಬೆಡಗಿ ಚೆಂದುಳ್ಳಿ ಚೆಲುವೆ ರಶ್ಮಿಕಾ ಮಂದಣ್ಣ ಕೊನೆಯ ಬಾರಿ ಸ್ಯಾಂಡಲ್ವುಡ್ನಲ್ಲಿ ಕಾಣಿಸಿಕೊಂಡಿದ್ದು ಪೊಗರು ಚಿತ್ರದಲ್ಲಿ. ಕಳೆದ ವರ್ಷ ರಿಲೀಸ್ ಆಗಿದ್ದ ಆ ಚಿತ್ರವು ಶುರುವಾಗಿದ್ದು 2019 ರಲ್ಲಿ. ಅಂದರೆ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದು ಬರೋಬ್ಬರಿ 3 ವರ್ಷಗಳೇ ಕಳೆದಿವೆ. ಇದಾಗ್ಯೂ ಪ್ಯಾನ್ ಇಂಡಿಯಾ ಚಿತ್ರ ಪುಷ್ಪಾ ಮೂಲಕ ಕನ್ನಡ ಪ್ರೇಕ್ಷಕರಿಗೂ ಹತ್ತಿರವಾಗಿದ್ದರು. ಆದರೆ ಕಳೆದ 3 ವರ್ಷಗಳಿಂದ ಸ್ಯಾಂಡ್ವುಡ್ನಿಂದ ದೂರವೇ ಉಳಿದಿರುವ ರಶ್ಮಿಕಾ ಟಾಲಿವುಡ್, ಕಾಲಿವುಡ್ ದಾಟಿ ಬಾಲಿವುಡ್ವರೆಗೂ ತಲುಪಿರುವುದು ವಿಶೇಷ.
ಹೌದು, ರಶ್ಮಿಕಾ ಈಗ ಕೇವಲ ಸ್ಯಾಂಡಲ್ವುಡ್ ಅಥವಾ ಟಾಲಿವುಡ್ ನಟಿಯಾಗಿ ಉಳಿದಿಲ್ಲ. ಬದಲಾಗಿ ಚತುರ್ಭಾಷಾ ನಾಯಕಿಯಾಗಿ ಮಿಂಚುತ್ತಿದ್ದಾರೆ. ಅಂದರೆ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾನ್ವಿಯಾಗಿ ಎಂಟ್ರಿ ಕೊಟ್ಟು ಹೊಸ ಸೆನ್ಸೇಷನ್ ಸೃಷ್ಟಿಸಿದ್ದ ರಶ್ಮಿಕಾ ಆ ಬಳಿಕ ತೆಲುಗು ಚಿತ್ರರಂಗದಲ್ಲಿ ಮನೆಮಾತಾಗಿದ್ದರು. ಯಾವಾಗ ತೆಲುಗಿನಲ್ಲಿ ನೆಲೆಯೂರಿದರೋ, ತಮಿಳು ಚಿತ್ರರಂಗದಿಂದ ಆಫರ್ಗಳು ಬಂತು. ಇತ್ತ ಸೌತ್ ಸಿನಿರಂಗದಲ್ಲಿ ಛಾಪು ಮೂಡಿಸುತ್ತಿದ್ದಂತೆ ರಶ್ಮಿಕಾ ಹಿಂದಿ ಆಲ್ಬಂ ಗೀತೆಯೊಂದರಲ್ಲಿ ಕಾಣಿಸಿಕೊಂಡಿದ್ದರು.
ಇದರ ನಡುವೆ ಮೂಡಿಬಂದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾ ಚಿತ್ರದ ಶ್ರೀವಳ್ಳಿ ಪಾತ್ರವು ರಶ್ಮಿಕಾಗೆ ಹೊಸ ಇಮೇಜ್ ತಂದುಕೊಟ್ಟಿತ್ತು. ಆ ಬಳಿಕ ಕೊಡಗಿನ ಬೆಡಗಿ ಹಿಂತಿರುಗಿ ನೋಡಿಲ್ಲ ಎನ್ನಬಹುದು. ಏಕೆಂದರೆ ಇದೀಗ ರಶ್ಮಿಕಾ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಅದು ಕೂಡ ಸ್ಟಾರ್ ನಟರುಗಳೊಂದಿಗೆ ಎಂಬುದು ವಿಶೇಷ.
ಸೌತ್ ಸೆನ್ಸೇಷನ್ ದುಲ್ಖಾರ್ ಸಲ್ಮಾನ್ ಅಭಿನಯದ ಸೀತಾ ರಾಮಂ ಚಿತ್ರದಲ್ಲಿ ರಶ್ಮಿಕಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ತಮಿಳು ಚಿತ್ರರಂಗದ ಬಾಕ್ಸಾಫೀಸ್ ಕಿಂಗ್ ಇಳಯ ದಳಪತಿ ವಿಜಯ್ ಅವರ 66ನೇ ಚಿತ್ರಕ್ಕೂ ಸ್ಯಾಂಡಲ್ವುಡ್ ಸಾನ್ವಿಯೇ ನಾಯಕಿ. ಹಾಗೆಯೇ ಪುಷ್ಪಾ-2 ಚಿತ್ರದಲ್ಲೂ ಶ್ರೀವಳ್ಳಿ ಕಮಾಲ್ ವೀಕ್ಷಿಸಬಹುದು. ಇದು ಮೂರು ಸೌತ್ ಸಿನಿಮಾಗಳಾದರೆ, ಅತ್ತ ಮೂರು ಬಾಲಿವುಡ್ ಚಿತ್ರದಲ್ಲೂ ರಶ್ಮಿಕಾ ಮಿಂಚಲಿದ್ದಾರೆ. ಅದು ಕೂಡ ಬಾಲಿವುಡ್ ಶೆಹನ್ಶಾ ಅಮಿತಾಭ್ ಬಚ್ಚನ್ ಜೊತೆ ಎಂದರೆ ನಂಬಲೇಬೇಕು.
ಅಮಿತಾಭ್ ಬಚ್ಚನ್ ಅಭಿನಯದ ಗುಡ್ ಬೈ ಚಿತ್ರದಲ್ಲೂ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ಮಿಷನ್ ಮಜ್ನೂ ಸಿನಿಮಾದಲ್ಲೂ ಕೊಡಗಿನ ಬೆಡಗಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಯಾಕೆ ರಣಬೀರ್ ಕಪೂರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಅನಿಮಲ್ನಲ್ಲೂ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇದರಲ್ಲಿ ಸೀತಾ ರಾಮಂ, ಗುಡ್ ಬೈ ಹಾಗೂ ಮಿಷನ್ ಮಜ್ನೂ ಚಿತ್ರಗಳು ಪೂರ್ಣಗೊಂಡಿದೆ. ಹೀಗಾಗಿ ರಶ್ಮಿಕಾ ಮಂದಣ್ಣ ಅಭಿನಯದ ಮೂರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ತೆರೆಗೆ ಅಪ್ಪಳಿಸಲಿದೆ. ಹಾಗೆಯೇ ತಮಿಳು ನಟ ವಿಜಯ್ ಜೊತೆಗಿನ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹಾಗೆಯೇ ಪುಷ್ಫಾ-2 ಶುರುವಾಗುತ್ತಿದ್ದಂತೆ ರಶ್ಮಿಕಾ ಶ್ರೀವಳ್ಳಿಯಾಗಿ ಎಂಟ್ರಿ ಕೊಡಲಿದ್ದಾರೆ. ಇದರ ಜೊತೆಗೆ ಅನಿಮಲ್ ನಲ್ಲಿ ರಣಬೀರ್ ಕಪೂರ್ಗೆ ಜೋಡಿಯಾಗಿ ಅಭಿನಯಿಸಲಿದ್ದಾರೆ. ಅಂದರೆ 2023 ರ ತನಕ ರಶ್ಮಿಕಾ ಮಂದಣ್ಣ ಫುಲ್ ಬಿಝಿಯಾಗಿರಲಿದ್ದಾರೆ. ಹೀಗಾಗಿ ಮುಂದಿನ ವರ್ಷದವರೆಗೆ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಿಂದ ಕೆರಿಯರ್ ಆರಂಭಿಸಿ ಬಳಿಕ ಸೌತ್ ಸಿನಿರಂಗದಲ್ಲಿ ಮಿಂಚಿ, ಇದೀಗ ಬಾಲಿವುಡ್ಗೂ ಕಾಲಿಟ್ಟಿರುವ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ನಾಯಕಿಯಾಗಿ ಹೊಸ ಹವಾ ಸೃಷ್ಟಿಸುತ್ತಿರುವುದು ವಿಶೇಷ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.