ಭಾರತ ಕ್ರಿಕೆಟ್ ಧರ್ಮ ರಾಷ್ಟ್ರ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಇತ್ತೀಚೆಗಷ್ಟೇ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಾಗಿ ಇಡೀ ದೇಶವೇ ಇದನ್ನು ಹಬ್ಬದಂತೆ ಸಂಭ್ರಮಿಸಿತ್ತು. ಭಾರತದಲ್ಲಿ ಕ್ರಿಕೆಟ್ನ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಹೀಗಾಗಿ ಬಿಸಿಸಿಐ ಖಜಾನೆ ವರ್ಷದಿಂದ ವರ್ಷಕ್ಕೆ ಭರ್ತಿಯಾಗುತ್ತಲೆ ಸಾಗುತ್ತಿದೆ. ಆದ್ದರಿಂದ ಬಿಸಿಸಿಐನ ಹಿಂದೆ ಬಿದ್ದಿರುವ ಕೆಲವು ತಂಬಾಕು ಉತ್ಪನ್ನಗಳ ಕಂಪನಿಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಕ್ರಿಕೆಟ್ ಅನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಹಾಗಾಗಿ ಊಹೆಗೂ ಮೀರಿದ ಹಣ ನೀಡಿ ಕ್ರಿಕೆಟ್ ಪಂದ್ಯಾವಳಿಗಳ ವೇಳೆ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡುತ್ತವೆ. ಇದರಿಂದ ತಂಬಾಕು ಸೇವನೆಯಂತಹ ದುಶ್ಚಟಕ್ಕೆ ಬಲಿಯಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಇದನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ.
ವಾಸ್ತವವಾಗಿ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಅನೇಕ ತಂಬಾಕು ಜಾಹೀರಾತುಗಳನ್ನು ಪ್ರಚಾರ ಮಾಡುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ಆದರೆ ಇದೀಗ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ತಂಬಾಕು ಜಾಹೀರಾತುಗಳ ಪ್ರಚಾರವನ್ನು ನಿಷೇಧಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮುಂದಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಶೀಘ್ರದಲ್ಲೇ ಈ ಬಗ್ಗೆ ಬಿಸಿಸಿಐ ಜೊತೆ ಮಾತುಕತೆ ನಡೆಸಲಿದೆ ಎಂದು ತಿಳಿದುಬಂದಿದೆ.
ಮಾಧ್ಯಮ ವರದಿಗಳ ಪ್ರಕಾರ, ICMR ಮತ್ತು ವೈಟಲ್ ಸ್ಟ್ರಾಟಜೀಸ್ 2023 ರಲ್ಲಿ, 41 ಪ್ರತಿಶತದಷ್ಟು ಧೂಮಪಾನ ಮತ್ತು ತಂಬಾಕು ಜಾಹೀರಾತುಗಳನ್ನು ಏಕದಿನ ವಿಶ್ವಕಪ್‌ನ ಕೊನೆಯ 17 ಪಂದ್ಯಗಳಲ್ಲಿ ತೋರಿಸಲಾಗಿದೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಕ್ರೀಡಾಂಗಣಗಳಲ್ಲಿ ತಂಬಾಕು ಜಾಹೀರಾತುಗಳನ್ನು ತೋರಿಸುವುದನ್ನು ನಿಷೇಧಿಸುವಂತೆ ಬಿಸಿಸಿಐಗೆ ಸೂಚಿಸಲಿದೆ ಎಂದು ವರದಿಯಾಗಿದೆ. ಇದಲ್ಲದೆ, ಏಲಕ್ಕಿ ಹೆಸರಿನಲ್ಲಿ ತಂಬಾಕು ಪ್ರಚಾರ ಮಾಡುವ ನಟರಿಗೂ ಇಂತಹ ಜಾಹೀರಾತುಗಳಲ್ಲಿ ನಟಿಸದಂತೆ ಎಚ್ಚರಿಕೆ ನೀಡಲು ಮುಂದಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ಭಾರತದ ಯುವಕರು ಸಾಕಷ್ಟು ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಾರೆ. ಆದರೆ ಪಂದ್ಯದ ಸಮಯದಲ್ಲಿ ಅನೇಕ ಸೆಲೆಬ್ರಿಟಿಗಳ ತಂಬಾಕು ಜಾಹೀರಾತುಗಳನ್ನು ತೋರಿಸಲಾಗುತ್ತದೆ. ಇದು ಯುವಕರನ್ನು ಹೆಚ್ಚು ಆಕರ್ಷಿಸುತ್ತದೆ. ಹೀಗಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಬಿಸಿಸಿಐ ಜತೆ ನಿರಂತರ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಅಲ್ಲದೆ, ಐಪಿಎಲ್ ಪಂದ್ಯಗಳಲ್ಲಿ ತಂಬಾಕು ಜಾಹೀರಾತುಗಳನ್ನು ಸಹ ತೋರಿಸಲಾಗುತ್ತದೆ. ಆದ್ದರಿಂದ ಐಪಿಎಲ್ನಲ್ಲೂ ಇಂತಹ ಜಾಹೀರಾತುಗಳಿಗೆ ನಿಷೇಧ ಹೇರಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ