Champions Trophy 2025: ಹೀಗಾದ್ರೆ ಭಾರತ vs ಪಾಕಿಸ್ತಾನ್ ನಡುವೆ 2 ಪಂದ್ಯ
Champions Trophy 2025: ಫೆಬ್ರವರಿ 19 ರಿಂದ ಶುರುವಾಗಲಿರುವ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯು ಮಾರ್ಚ್ 9 ರವರೆಗೆ ನಡೆಯಲಿದೆ. 8 ತಂಡಗಳ ನಡುವಣ ಈ ಕದನದ ಮೊದಲ ಮ್ಯಾಚ್ನಲ್ಲಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ತಂಡಗಳು ಕಣಕ್ಕಿಳಿಯಲಿವೆ. ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯವು ಫೆಬ್ರವರಿ 23 ರಂದು ನಡೆಯಲಿದೆ.

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಗೆ ವೇದಿಕೆ ಸಿದ್ಧವಾಗಿದೆ. 8 ತಂಡಗಳ ನಡುವಣ ಈ ಟೂರ್ನಿಗೆ ನಾಳೆ (ಫೆ.19) ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾದರೆ, ಟೀಮ್ ಇಂಡಿಯಾ ಫೆಬ್ರವರಿ 20 ರಂದು ಬಾಂಗ್ಲಾದೇಶ್ ವಿರುದ್ಧ ಕಣಕ್ಕಿಳಿಯುವ ಮೂಲಕ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ.
ಈ ಬಾರಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್ನಲ್ಲಿರುವುದರಿಂದ ಮೊದಲ ಸುತ್ತಿನಲ್ಲೇ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಅದರಂತೆ ಫೆಬ್ರವರಿ 23 ರಂದು ನಡೆಯಲಿರುವ ಪಂದ್ಯದಲ್ಲಿ ಬದ್ಧವೈರಿಗಳು ಕಾದಾಡಲಿದ್ದಾರೆ. ಈ ಹೈವೋಲ್ಟೇಜ್ ಪಂದ್ಯದ ಬಳಿಕ ಭಾರತ ಮತ್ತು ಪಾಕಿಸ್ತಾನ್ ಮತ್ತೆ ಮುಖಾಮುಖಿಯಾಗಬಹುದು.
ಭಾರತ ಮತ್ತು ಪಾಕಿಸ್ತಾನ್ ಮತ್ತೆ ಮುಖಾಮುಖಿ ಹೇಗೆ?
- ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅದರಂತೆ ಮೊದಲ ಸುತ್ತಿನಲ್ಲಿ ಗ್ರೂಪ್ಗಳಲ್ಲಿರುವ ತಂಡಗಳು ಪರಸ್ಪರ ಸೆಣಸಲಿದೆ.
- ಗ್ರೂಪ್ A ನಲ್ಲಿರುವ ಭಾರತ ತಂಡವು ಪಾಕಿಸ್ತಾನ್, ನ್ಯೂಝಿಲೆಂಡ್ ಮತ್ತು ಬಾಂಗ್ಲಾದೇಶ್ ವಿರುದ್ಧ ತಲಾ ಒಂದು ಪಂದ್ಯವಾಡಲಿದೆ.
- ಗ್ರೂಪ್ B ನಲ್ಲಿ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ್ ಮತ್ತು ಇಂಗ್ಲೆಂಡ್ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಲಿದ್ದಾರೆ.
- ಇಲ್ಲಿ ಉಭಯ ಗ್ರೂಪ್ಗಳಿಗೆ ಪ್ರತ್ಯೇಕ ಅಂಕಪಟ್ಟಿ ಇರಲಿದ್ದು, ಈ ಅಂಕ ಪಟ್ಟಿಗಳಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್ಗೇರಲಿದೆ.
ಗ್ರೂಪ್-ಎ ನಿಂದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಸೆಮಿಫೈನಲ್ಗೇರಿದರೆ, ಸೆಮಿಫೈನಲ್ನಲ್ಲಿ ಗ್ರೂಪ್-ಬಿ ನಿಂದ ಅರ್ಹತೆ ಪಡೆದ ತಂಡಗಳ ವಿರುದ್ಧ ಕಣಕ್ಕಿಳಿಯಲಿದೆ. ಹೀಗಾಗಿ ಸೆಮಿಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಮುಖಾಮುಖಿಯನ್ನು ಎದುರು ನೋಡುವಂತಿಲ್ಲ.
ಇದಾಗ್ಯೂ ಸೆಮಿಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಗೆಲುವು ಸಾಧಿಸಿ ಫೈನಲ್ಗೆ ಪ್ರವೇಶಿಸಿದರೆ, ಅಂತಿಮ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಕಾದಾಟವನ್ನು ಎದುರು ನೋಡಬಹುದು.
ಆದರೆ ಅದಕ್ಕೂ ಮುನ್ನ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಲೀಗ್ ಹಂತದ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್-2 ನಲ್ಲಿ ಕಾಣಿಸಿಕೊಳ್ಳಬೇಕು. ಈ ಮೂಲಕ ಸೆಮಿಫೈನಲ್ಗೆ ಅರ್ಹತೆ ಪಡೆದು, ಅಲ್ಲೂ ಜಯ ಸಾಧಿಸಿ ಫೈನಲ್ಗೇರಬೇಕು. ಹೀಗಾದರೆ ಮಾತ್ರ ಈ ಬಾರಿ ಭಾರತ ಮತ್ತು ಪಾಕಿಸ್ತಾನ್ ನಡುವಣ 2 ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ದೊರೆಯಲಿದೆ.
