ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡದ ಬ್ಯಾಟರ್ಗಳು ವಿಶೇಷ ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಮ್ ಇಂಡಿಯಾ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ ವಿಕೆಟ್ಗೆ 143 ರನ್ಗಳ ಜೊತೆಯಾಟವಾಡುವ ಮೂಲಕ ಶುಭ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಿದ್ದರು. ಇನ್ನು ಈ ಪಂದ್ಯದಲ್ಲಿ ಇಶಾನ್ ಕಿಶನ್ 77 ರನ್ ಬಾರಿಸಿದರೆ, ಶುಭ್ಮನ್ ಗಿಲ್ 85 ರನ್ ಸಿಡಿಸಿದ್ದರು.
ಆ ಬಳಿಕ ಬಂದ ಸಂಜು ಸ್ಯಾಮ್ಸನ್ 51 ರನ್ಗಳ ಕೊಡುಗೆ ನೀಡಿದರು. ಇನ್ನು ಅಂತಿಮ ಹಂತದಲ್ಲಿ 52 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 4 ಪೋರ್ಗಳೊಂದಿಗೆ ಅಬ್ಬರಿಸಿದ್ದ ಹಾರ್ದಿಕ್ ಪಾಂಡ್ಯ ಅಜೇಯ 70 ರನ್ ಚಚ್ಚಿದ್ದರು. ಈ ಮೂಲಕ ಟೀಮ್ ಇಂಡಿಯಾ ಒಟ್ಟು 351 ರನ್ ಕಲೆಹಾಕಿತು.
ಈ 351 ರನ್ಗಳೊಂದಿಗೆ ಟೀಮ್ ಇಂಡಿಯಾ ದಾಖಲೆ ಬರೆದಿರುವುದು ವಿಶೇಷ. ಅಂದರೆ ಟೀಮ್ ಇಂಡಿಯಾ ಬ್ಯಾಟರ್ಗಳು ಶತಕ ಬಾರಿಸದೇ ಕಲೆಹಾಕಿದ ಅತ್ಯಧಿಕ ಮೊತ್ತ ಇದಾಗಿದೆ. ಈ ಪಂದ್ಯದಲ್ಲಿ ಇಶಾನ್ ಕಿಶನ್, ಶುಭ್ಮನ್ ಗಿಲ್, ಸಂಜು ಸ್ಯಾಮ್ಸನ್ ಹಾಗೂ ಹಾರ್ದಿಕ್ ಪಾಂಡ್ಯ ಅರ್ಧಶತಕ ಬಾರಿಸಿ 351 ರನ್ ಪೇರಿಸಿದ್ದರು.
ಇದು ಯಾವುದೇ ಬ್ಯಾಟರ್ ಶತಕ ಬಾರಿಸದೇ ಟೀಮ್ ಇಂಡಿಯಾ ಕಲೆಹಾಕಿದ ಅತ್ಯಧಿಕ ಮೊತ್ತವಾಗಿದೆ. ಇದಕ್ಕೂ ಮುನ್ನ 2005 ರಲ್ಲಿ ಶ್ರೀಲಂಕಾ ವಿರುದ್ಧ ಭಾರತೀಯ ಬ್ಯಾಟರ್ಗಳು ಶತಕ ಬಾರಿಸದೇ 6 ವಿಕೆಟ್ ನಷ್ಟಕ್ಕೆ 350 ರನ್ ಕಲೆಹಾಕಿದ್ದರು.
ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾದ ಯಾವುದೇ ಬ್ಯಾಟರ್ ಶತಕಗಳಿಸದೇ ಒಟ್ಟು 351 ರನ್ಗಳಿಸಿ ಹೊಸ ದಾಖಲೆ ನಿರ್ಮಿಸಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 351 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಕೇವಲ 151 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ವಶಪಡಿಸಿಕೊಂಡಿದೆ.
ಭಾರತ (ಪ್ಲೇಯಿಂಗ್ XI): ಇಶಾನ್ ಕಿಶನ್(ವಿಕೆಟ್ ಕೀಪರ್), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಯದೇವ್ ಉನಾದ್ಕಟ್, ಕುಲದೀಪ್ ಯಾದವ್, ಮುಖೇಶ್ ಕುಮಾರ್.
ಇದನ್ನೂ ಓದಿ: India T20 squad: ಟೀಮ್ ಇಂಡಿಯಾ ಟಿ20 ತಂಡ ಪ್ರಕಟ: ಬುಮ್ರಾಗೆ ನಾಯಕತ್ವ
ವೆಸ್ಟ್ ಇಂಡೀಸ್ (ಪ್ಲೇಯಿಂಗ್ XI): ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಅಲಿಕ್ ಅಥಾನಾಝ್, ಶಾಯ್ ಹೋಪ್(ನಾಯಕ), ಶಿಮ್ರಾನ್ ಹೆಟ್ಮೆಯರ್, ಕೀಸಿ ಕಾರ್ಟಿ, ರೊಮಾರಿಯೋ ಶೆಫರ್ಡ್, ಯಾನಿಕ್ ಕ್ಯಾರಿಯಾ, ಅಲ್ಝಾರಿ ಜೋಸೆಫ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್.