Smriti Mandhana: ದಿ ಹಂಡ್ರೆಡ್ ಲೀಗ್ನಲ್ಲಿ ಅಬ್ಬರಿಸಿದ ಸ್ಮೃತಿ ಮಂಧಾನ
The Hundred: ಡೇನಿಯಲ್ ವ್ಯಾಟ್ ಜೊತೆ ಇನಿಂಗ್ಸ್ ಆರಂಭಿಸಿದ ಸ್ಮತಿ ಮಂಧಾನ ಮೊದಲ ಓವರ್ನಿಂದಲೇ ಸ್ಪೋಟಕ ಬ್ಯಾಟಿಂಗ್ಗೆ ಒತ್ತು ನೀಡಿದರು.
The Hundred: ಇಂಗ್ಲೆಂಡ್ನ ಟ್ರೆಂಡ್ ಬ್ರಿಡ್ಜ್ ಸ್ಟೇಡಿಯಂನಲ್ಲಿ ನಡೆದ ದಿ ಹಂಡ್ರೆಡ್ ವುಮೆನ್ಸ್ ಲೀಗ್ನ ಮೊದಲ ಪಂದ್ಯದಲ್ಲೇ ಸ್ಮೃತಿ ಮಂಧಾನ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಅಬ್ಬರಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟ್ರೆಂಟ್ ರಾಕೆಟ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸದರ್ನ್ ಬ್ರೇವ್ ತಂಡಕ್ಕೆ ಸ್ಮೃತಿ ಮಂಧಾನ ಬಿರುಸಿನ ಆರಂಭ ಒದಗಿಸಿದ್ದರು.
ಡೇನಿಯಲ್ ವ್ಯಾಟ್ ಜೊತೆ ಇನಿಂಗ್ಸ್ ಆರಂಭಿಸಿದ ಸ್ಮತಿ ಮಂಧಾನ ಮೊದಲ ಓವರ್ನಿಂದಲೇ ಸ್ಪೋಟಕ ಬ್ಯಾಟಿಂಗ್ಗೆ ಒತ್ತು ನೀಡಿದರು. ಪರಿಣಾಮ 40 ಎಸೆತಗಳಲ್ಲಿ ಸದರ್ನ್ ಬ್ರೇವ್ ತಂಡದ ಮೊತ್ತ 60 ಗಡಿದಾಟಿತು. ಈ ಹಂತದಲ್ಲಿ ಡೇನಿಯಲ್ ವ್ಯಾಟ್ (27) ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಸ್ಮೃತಿ ಮಂಧಾನ 36 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 55 ರನ್ ಚಚ್ಚಿದರು.
ಇನ್ನು ಮೈಯಾ ಬೌಚಿಯರ್ 31 ರನ್ಗಳ ಕಾಣಿಕೆ ನೀಡಿದರೆ, ಕ್ಲೋಯ್ ಟ್ರಯಾನ್ ಅಜೇಯ 23 ರನ್ ಬಾರಿಸಿದರು. ಈ ಮೂಲಕ ಸದರ್ನ್ ಬ್ರೇವ್ ತಂಡವು 100 ಎಸೆತಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿತು.
100 ಎಸೆತಗಳಲ್ಲಿ 158 ರನ್ಗಳ ಗುರಿ ಪಡೆದ ಟ್ರೆಂಟ್ ರಾಕೆಟ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ನಾಯಕಿ ನ್ಯಾಟ್ ಸ್ಕಿವರ್-ಬ್ರಂಟ್ 31 ಎಸೆತಗಳಲ್ಲಿ 49 ರನ್ ಬಾರಿಸಿದ್ದರು.
ಇನ್ನು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹರ್ಮನ್‌ಪ್ರೀತ್ ಕೌರ್ 17 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 22 ರನ್ಗಳಿಸಲಷ್ಟೇ ಶಕ್ತರಾದರು. ಅಂತಿಮವಾಗಿ ಟ್ರೆಂಟ್ ರಾಕೆಟ್ಸ್ ತಂಡವು 100 ಎಸೆತಗಳಲ್ಲಿ 7 ವಿಕೆಟ್ ಕಳೆದುಕೊಂಡು 130 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಮೊದಲ ಪಂದ್ಯದಲ್ಲೇ ಸದರ್ನ್ ಬ್ರೇವ್ ತಂಡ 27 ರನ್ಗಳ ಜಯ ಸಾಧಿಸಿತು.
ಟ್ರೆಂಟ್ ರಾಕೆಟ್ಸ್ ಪ್ಲೇಯಿಂಗ್ 11: ಲಿಜೆಲ್ಲೆ ಲೀ (ವಿಕೆಟ್ ಕೀಪರ್) , ಬ್ರಯೋನಿ ಸ್ಮಿತ್ , ನ್ಯಾಟ್ ಸ್ಕಿವರ್-ಬ್ರಂಟ್ (ನಾಯಕಿ) , ಹರ್ಮನ್‌ಪ್ರೀತ್ ಕೌರ್ , ಫ್ರಾನ್ ವಿಲ್ಸನ್ , ಜೋನ್ನೆ ಗಾರ್ಡ್ನರ್ , ನವೋಮಿ ದಟ್ಟಾನಿ , ಕ್ಯಾಥರೀನ್ ಸ್ಕೈವರ್-ಬ್ರಂಟ್ , ಅಲಾನಾ ಕಿಂಗ್ , ಅಲೆಕ್ಸಾ ಸ್ಟೋನ್‌ಹೌಸ್ , ಕಿರ್ಸ್ಟಿ ಗಾರ್ಡನ್.
ಇದನ್ನೂ ಓದಿ: Team India: ಶತಕ ಬಾರಿಸದೇ ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸದರ್ನ್ ಬ್ರೇವ್ ಪ್ಲೇಯಿಂಗ್ 11: ಡೇನಿಯಲ್ ವ್ಯಾಟ್ , ಸ್ಮೃತಿ ಮಂಧಾನ , ಮಾಯಾ ಬೌಚಿಯರ್ , ಜಾರ್ಜಿಯಾ ಆಡಮ್ಸ್ , ಫ್ರೇಯಾ ಕೆಂಪ್ , ಕ್ಲೋಯ್ ಟ್ರಯಾನ್ , ರಿಯಾನ್ನಾ ಸೌತ್ ಬೈ (ವಿಕೆಟ್ ಕೀಪರ್) , ಮೈಟ್ಲಾನ್ ಬ್ರೌನ್ , ಕ್ಯಾಲಿಯಾ ಮೂರ್ , ಅನ್ಯಾ ಶ್ರಬ್ಸೋಲ್ (ನಾಯಕಿ) , ಮೇರಿ ಟೇಲರ್.