ಮಹಿಳಾ ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಭಾರತ ತಂಡ ಹೀನಾಯ ಸೋಲನುಭವಿಸಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 58 ರನ್ಗಳಿಂದ ಪರಾಜಯಗೊಂಡಿದೆ. ಈ ಸೋಲಿನ ಬೆನ್ನಲ್ಲೇ ಭಾರತ ತಂಡದ ಸೆಮಿಫೈನಲ್ ಲೆಕ್ಕಾಚಾರಗಳು ಸಹ ಶುರುವಾಗಿದೆ.
ಏಕೆಂದರೆ ಈ ಬಾರಿಯ ಟಿ20 ವಿಶ್ವಕಪ್ನ ಮೊದಲ ಸುತ್ತಿನ ಪಂದ್ಯಗಳು ಗ್ರೂಪ್ ಹಂತಗಳಲ್ಲಿ ನಡೆಯುತ್ತಿದೆ. ಇಲ್ಲಿ 10 ತಂಡಗಳನ್ನು 2 ಗ್ರೂಪ್ಗಳಲ್ಲಿ ವಿಂಗಡಿಸಲಾಗಿದೆ. ಅಲ್ಲದೆ ಮೊದಲ ಸುತ್ತಿನ ಪಂದ್ಯಗಳ ಮುಕ್ತಾಯದ ವೇಳೆಗೆ ಆಯಾ ಗ್ರೂಪ್ನ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ.
ಅದರಂತೆ ಇದೀಗ ಮೊದಲ ಸುತ್ತಿನ ಪ್ರಥಮ ಪಂದ್ಯದಲ್ಲೇ ಟೀಮ್ ಇಂಡಿಯಾ ಸೋಲನುಭವಿಸಿದೆ. ಇನ್ನುಳಿದಿರುವುದು ಮೂರು ಪಂದ್ಯಗಳು ಮಾತ್ರ. ಈ ಮೂರು ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ ಮಾತ್ರ ಟೀಮ್ ಇಂಡಿಯಾ ನೇರವಾಗಿ ಸೆಮಿಫೈನಲ್ಗೆ ಅರ್ಹತೆ ಪಡೆಯಬಹುದು.
ಒಂದು ವೇಳೆ ಈ ಮೂರು ಮ್ಯಾಚ್ಗಳಲ್ಲಿ ಒಂದರಲ್ಲಿ ಸೋಲನುಭವಿಸಿದರೂ, ಉಳಿದ ತಂಡಗಳ ಪಂದ್ಯಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ. ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಮುಂಬರುವ ಪಂದ್ಯಗಳು ತುಂಬಾ ಮಹತ್ವದು.
ಟೀಮ್ ಇಂಡಿಯಾ ಅಕ್ಟೋಬರ್ 6 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ. ಇನ್ನು ಅಕ್ಟೋಬರ್ 9 ರಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್ ಶ್ರೀಲಂಕಾ ವಿರುದ್ಧ ಆಡಲಿದೆ. ಹಾಗೆಯೇ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ.
ಈ ಮೂರು ಮ್ಯಾಚ್ಗಳಲ್ಲಿ ಭಾರತ ತಂಡವು ಹ್ಯಾಟ್ರಿಕ್ ಗೆಲುವು ಸಾಧಿಸಿದರೆ, 6 ಅಂಕಗಳೊಂದಿಗೆ ಸೆಮಿಫೈನಲ್ಗೆ ಪ್ರವೇಶಿಸಬಹುದು. ಒಂದು ವೇಳೆ ಇದರಲ್ಲಿ ಒಂದು ಮ್ಯಾಚ್ನಲ್ಲಿ ಸೋತರೂ ಶ್ರೀಲಂಕಾ, ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನ್ ತಂಡಗಳ ಫಲಿತಾಂಶದ ಆಧಾರದ ಮೇಲೆ ಸೆಮಿಫೈನಲ್ ಅರ್ಹತೆಯನ್ನು ಎದುರು ನೋಡಬೇಕಾಗುತ್ತದೆ. ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಮುಂದಿನ ಮೂರು ಪಂದ್ಯಗಳು ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು.
ಇದನ್ನೂ ಓದಿ: ಟೀಮ್ ಇಂಡಿಯಾ ಪರ ಕಣಕ್ಕಿಳಿದರೆ ಅನ್ಕ್ಯಾಪ್ಡ್ ಪಟ್ಟಿಯಿಂದ ಮೂವರು ಹೊರಕ್ಕೆ..!