ಪಾಕಿಸ್ತಾನ್ ತಂಡದ ಕೋಚ್ ಆಗಲು ನಾನು ಸಿದ್ಧನಿದ್ದೇನೆ ಎಂದು ಭಾರತ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ (Ajay Jadeja) ಹೇಳಿದ್ದಾರೆ. 2023ರ ಐಸಿಸಿ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿರುವ ಜಡೇಜಾ ಇದೀಗ ಕೋಚ್ ಹುದ್ದೆಯತ್ತ ದೃಷ್ಟಿ ನೆಟ್ಟಿದ್ದಾರೆ.
ಏಕೆಂದರೆ ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ್ ತಂಡವು ಅಭೂತಪೂರ್ವ ಪ್ರದರ್ಶನ ನೀಡಿತ್ತು. ಈ ಪ್ರದರ್ಶನ ಹಿಂದಿದದ್ದು ಮೆಂಟರ್ ಅಜಯ್ ಜಡೇಜಾ ಎಂದರೆ ತಪ್ಪಾಗಲಾರದು. ಭಾರತೀಯ ಪಿಚ್ನಲ್ಲಿ ಹೇಗೆ ಆಡಬೇಕೆಂಬ ಅನುಭವನ್ನು ಧಾರೆಯೆರೆದಿದ್ದ ಜಡೇಜಾ ಅಫ್ಘಾನ್ ಪಡೆಯನ್ನು ಸಾಂಘಿಕ ಶಕ್ತಿಯನ್ನಾಗಿ ಮಾರ್ಪಟ್ಟಿಸಿದ್ದರು.
ಇದರ ಫಲವಾಗಿ ಅಫ್ಘಾನಿಸ್ತಾನ್ ತಂಡವು ಬಲಿಷ್ಠ ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾ ಮತ್ತು ನೆದರ್ಲೆಂಡ್ಸ್‌ಗಳಿಗೆ ಸೋಲುಣಿಸಿತ್ತು. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧ ಕೂಡ ಭರ್ಜರಿ ಪ್ರದರ್ಶನ ನೀಡಿತ್ತು. ಅಫ್ಘಾನ್ ಆಟಗಾರರಲ್ಲಿ ಈ ಹೋರಾಟದ ಮನೋಭಾವವನ್ನು ತುಂಬುವಲ್ಲಿ ಜಡೇಜಾ ಪ್ರಮುಖ ಪಾತ್ರವಹಿಸಿದ್ದರು.
ಸ್ಪೋರ್ಟ್ಸ್ ಟುಡೆ ಜೊತೆಗಿನ ಸಂವಾದದಲ್ಲಿ ಕಾಣಿಸಿಕೊಂಡ ಜಡೇಜಾ ಅವರಿಗೆ ಪಾಕ್ ತಂಡದ ಕೋಚ್ ಆಗುತ್ತೀರಾ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ನಾನಂತು ಪಾಕಿಸ್ತಾನ್ ತಂಡದ ಕೋಚ್ ಆಗಲು ಸಿದ್ಧನಿದ್ದೇನೆ ಎಂದು ಅಜಯ್ ಜಡೇಜಾ ಹೇಳಿದ್ದಾರೆ.
ನನ್ನ ಕಲಿಕೆಯನ್ನು ಅಫ್ಘಾನಿಸ್ತಾನ್ ತಂಡದೊಂದಿಗೆ ಹಂಚಿಕೊಂಡಿದ್ದೇನೆ. ನನ್ನ ಪ್ರಕಾರ ಪಾಕಿಸ್ತಾನ್ ತಂಡ ಕೂಡ ಒಂದು ಕಾಲದಲ್ಲಿ ಅಸ್ಪಷ್ಟತೆಯಿಂದ ಕೂಡಿದ ತಂಡವಾಗಿತ್ತು. ಅಲ್ಲಿ ನಿಮ್ಮ ಸಹ ಆಟಗಾರನ ಮುಖಕ್ಕೆ ಹೊಡೆದಂತೆ ಮಾತನಾಡುವ ವಾತಾವರಣ ಹೊಂದಿತ್ತು.
ಇದೇ ಮಾದರಿಯಲ್ಲಿದ್ದ ಅಫ್ಘಾನಿಸ್ತಾನ್ ತಂಡಕ್ಕೆ ನಾನು ಅನುಭವವನ್ನು ಧಾರೆಯೆರದಿದ್ದೇನೆ. ಅದರ ಫಲವೇ ಈ ಫಲಿತಾಂಶಗಳು. ಹೀಗಾಗಿ ಪಾಕ್ ತಂಡಕ್ಕೂ ಕೋಚಿಂಗ್ ಮಾಡಲು ನಾನಂತು ರೆಡಿಯಿದ್ದೇನೆ ಎಂದು ಅಜಯ್ ಜಡೇಜಾ ತಿಳಿಸಿದ್ದಾರೆ.
ಅಜಯ್ ಜಡೇಜಾ ಅವರನ್ನು ಅಫ್ಘಾನಿಸ್ತಾನ್ ತಂಡವು ಏಕದಿನ ವಿಶ್ವಕಪ್ಗಾಗಿ ಮೆಂಟರ್ ಆಗಿ ನೇಮಿಸಿತ್ತು. ಇದೀಗ ಅಫ್ಘಾನ್ ತಂಡದಿಂದ ಬೇರ್ಪಟ್ಟಿರುವ ಜಡೇಜಾ ಮತ್ತೊಂದು ಇನಿಂಗ್ಸ್ ಆರಂಭಿಸುವ ಇರಾದೆಯಲ್ಲಿದ್ದಾರೆ. ಇದೇ ಕಾರಣದಿಂದಾಗಿ ಯಾವುದೇ ತಂಡವಾದರೂ ಕೋಚಿಂಗ್ ನೀಡಲು ಸಿದ್ಧನಿದ್ದೇನೆ ಎಂಬ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Tim Southee: ಸಿಕ್ಸ್ ಸಿಡಿಸಿಯೇ ವಿಶ್ವ ದಾಖಲೆ ಬರೆದ ಟಿಮ್ ಸೌಥಿ
ಒಟ್ಟಿನಲ್ಲಿ ಅಜಯ್ ಜಡೇಜಾ ಅವರ ಈ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅತ್ತ ಪಾಕಿಸ್ತಾನ್ ತಂಡವು ಸತತ ವೈಫಲ್ಯದಿಂದ ಕಂಗೆಟ್ಟಿದೆ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತೆರಳಿರುವ ಪಾಕ್ ಪಡೆಯು ಹೀನಾಯ ಸೋಲನುಭವಿಸಿದರೆ ಮತ್ತೆ ತಂಡದ ಸಿಬ್ಬಂದಿಗಳ ಬದಲಾವಣೆಯಾಗುವ ಸಾಧ್ಯತೆಯಿದೆ.