
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಆತಿಥ್ಯವಹಿಸಬೇಕೆಂಬ ಭಾರತೀಯ ಕ್ರಿಕೆಟ್ ಮಂಡಳಿಯ ಕನಸು ಕಮರಿದೆ. ಏಕೆಂದರೆ ಮುಂದಿನ ಮೂರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವು ಇಂಗ್ಲೆಂಡ್ನಲ್ಲೇ ಜರುಗಲಿದೆ. ಇದಕ್ಕೂ ಮುನ್ನ WTC ಫೈನಲ್ ಪಂದ್ಯದ ಆತಿಥ್ಯಕ್ಕಾಗಿ ಬಿಸಿಸಿಐ ತೆರೆಮರೆಯ ಪ್ರಯತ್ನ ನಡೆಸಿತ್ತು. ಆದರೀಗ ಮುಂದಿನ ಮೂರು ಆವೃತ್ತಿಗಳ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವನ್ನು ಇಂಗ್ಲೆಂಡ್ನಲ್ಲೇ ಆಯೋಜಿಸಲು ಐಸಿಸಿ ನಿರ್ಧರಿಸಿದೆ.
ಟೀಮ್ ಇಂಡಿಯಾ ಫೈನಲ್ನಲ್ಲಿ ಇಲ್ಲದಿದ್ದರೆ, ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರ ಅಭಾವ ಎದುರಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇಂಗ್ಲೆಂಡ್‌ನ ಕ್ರಿಕೆಟ್ ಪ್ರೇಮಿಗಳು ಈ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ್ದರು. ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಣ ಫೈನಲ್ ಫೈಟ್ ವೀಕ್ಷಿಸಲು ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದರು.
ಅಂದರೆ ಇಂಗ್ಲೆಂಡ್ ತಂಡವು ಫೈನಲ್ನಲ್ಲಿ ಇಲ್ಲದಿದ್ದರೂ, ಭಾರತ ಫೈನಲ್ಗೆ ಪ್ರವೇಶಿಸದಿದ್ದರೂ, ಇಂಗ್ಲೆಂಡ್‌ನ ಕ್ರಿಕೆಟ್ ಪ್ರೇಮಿಗಳಿಂದ ಉತ್ತಮ ಸ್ಪಂದನೆ ದೊರೆತಿದೆ. ಹೀಗಾಗಿ ಮುಂಬರುವ ಮೂರು WTC ಫೈನಲ್ ಪಂದ್ಯಗಳ ಆಯೋಜನೆಯ ಹಕ್ಕುಗಳನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ಗೆ ನೀಡಲಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಈವರೆಗೆ ಮೂರು ಫೈನಲ್ ಆಡಲಾಗಿದೆ. 2021 ರಲ್ಲಿ ನಡೆದ ಮೊದಲ WTC ಫೈನಲ್ ಪಂದ್ಯಕ್ಕೆ ಇಂಗ್ಲೆಂಡ್‌ನ ಸೌತಾಂಪ್ಟನ್ ಆತಿಥ್ಯವಹಿಸಿತ್ತು. ಇನ್ನು 2023ರ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಲಂಡನ್‌ನಲ್ಲಿರುವ ಐತಿಹಾಸಿಕ ಮೈದಾನವಾದ ದಿ ಓವಲ್‌ನಲ್ಲಿ ಆಯೋಜಿಸಲಾಗಿತ್ತು. ಅಲ್ಲದೆ 2025ರ WTC ಫೈನಲ್ ಪಂದ್ಯ ನಡೆದಿರುವುದು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ. ಈ ಮೂಲಕ ಇಂಗ್ಲೆಂಡ್ ಹ್ಯಾಟ್ರಿಕ್ ಫೈನಲ್ ಆಯೋಜಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: 5 ವರ್ಷಗಳಲ್ಲಿ 9 ಐಸಿಸಿ ಟೂರ್ನಿ: 3 ಪಂದ್ಯಾವಳಿಗಳಿಗೆ ಭಾರತ ಆತಿಥ್ಯ..!
ಇದೀಗ 2027, 2029 ಮತ್ತು 2031ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಗಳ ಆಯೋಜನೆಯ ಹಕ್ಕುಗಳನ್ನು ಐಸಿಸಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ಗೆ ನೀಡಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವನ್ನು ಆಯೋಜಿಸಲು ಭಾರತ 8 ವರ್ಷಗಳವರೆಗೆ ಕಾಯಲೇಬೇಕು. ಅಂದರೆ ಬಿಸಿಸಿಐ 2033ರ ಫೈನಲ್ ಆಯೋಜನೆಯ ಹಕ್ಕುಗಳನ್ನು ಪಡೆಯುವಲ್ಲಿ ಯಶಸ್ವಿಯಾದರೆ ಮಾತ್ರ WTC ಸರಣಿಯ ಅಂತಿಮ ಪಂದ್ಯ ಭಾರತದಲ್ಲಿ ಜರುಗಲಿದೆ.