IND vs ENG: 4ನೇ ಟೆಸ್ಟ್ನಲ್ಲಿ ರಿಷಭ್ ಪಂತ್ ಕೇವಲ ಬ್ಯಾಟರ್
India vs England 4th Test: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಮ್ಯಾಚ್ ಜುಲೈ 23 ರಿಂದ ಶುರುವಾಗಲಿದೆ. ಮ್ಯಾಚೆಂಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಜರುಗಲಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಈಗಾಗಲೇ ಇಂಗ್ಲೆಂಡ್ ತಂಡವು ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದ್ದು, ಹೀಗಾಗಿ ಸರಣಿಯಲ್ಲಿ ಸಮಬಲ ಸಾಧಿಸಲು ಭಾರತ ತಂಡವು ಮ್ಯಾಂಚೆಸ್ಟರ್ನಲ್ಲಿ ಗೆಲ್ಲಲೇಬೇಕು,

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ. ಮ್ಯಾಚೆಂಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಪಂತ್ ವಿಕೆಟ್ ಕೀಪಿಂಗ್ ಮಾಡುವ ಸಾಧ್ಯತೆಯಿಲ್ಲ. ಅವರ ಬದಲಿಗೆ ಧ್ರುವ್ ಜುರೇಲ್ ಅವರನ್ನು ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿಸಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತಿಸಿದೆ.
ಲಾರ್ಡ್ಸ್ ಮೈದಾನದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ ವೇಳೆ ಕೀಪಿಂಗ್ ಮಾಡುವಾಗ ರಿಷಭ್ ಪಂತ್ ಅವರ ಬೆರಳಿಗೆ ಗಾಯವಾಗಿತ್ತು. ಡೈವ್ ಹೊಡೆದು ಚೆಂಡು ಹಿಡಿಯುವ ಯತ್ನದಲ್ಲಿ ಅವರ ಎಡಗೈನ ತೋರು ಬೆರಳಿಗೆ ಗಾಯವಾಗಿದ್ದು, ಹೀಗಾಗಿ ಅವರು ಅರ್ಧದಲ್ಲೇ ಮೈದಾನ ತೊರೆದಿದ್ದರು. ಅಲ್ಲದೆ ಪಂತ್ ಬದಲಿಗೆ ಎರಡು ಇನಿಂಗ್ಸ್ಗಳಲ್ಲಿ ಧ್ರುವ್ ಜುರೇಲ್ ವಿಕೆಟ್ ಕೀಪಿಂಗ್ ಮಾಡಿದ್ದರು.
ಇದಾಗ್ಯೂ ರಿಷಭ್ ಪಂತ್ ಮೂರನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾತ್ರ ಮಾಡಿದ್ದರು. ಅಂದರೆ ಇಲ್ಲಿ ಪಂತ್ಗೆ ಬ್ಯಾಟಿಂಗ್ ಮಾಡುವುದು ಕಷ್ಟಕರವಲ್ಲ. ಆದರೆ ಗಾಯದ ಕಾರಣ ವಿಕೆಟ್ ಕೀಪಿಂಗ್ ಮಾಡುವುದೇ ದೊಡ್ಡ ಸವಾಲಾಗಲಿದೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಅವರನ್ನು ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಸಲು ಪ್ಲ್ಯಾನ್ ರೂಪಿಸಲಾಗಿದೆ.
ಇತ್ತ ರಿಷಭ್ ಪಂತ್ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿದರೆ, ವಿಕೆಟ್ ಕೀಪಿಂಗ್ ಜವಾಬ್ದಾರಿ ಧ್ರುವ್ ಜುರೇಲ್ ಅಥವಾ ಕೆಎಲ್ ರಾಹುಲ್ ಹೆಗಲೇರಲಿದೆ. ಆದರೆ ಧ್ರುವ್ ಜುರೇಲ್ ಅವರನ್ನು ಕಣಕ್ಕಿಳಿಸಬೇಕಿದ್ದರೆ ಓರ್ವ ಬ್ಯಾಟರ್ನನ್ನು ಆಡುವ ಬಳಗದಿಂದ ಕೈ ಬಿಡಬೇಕಾಗುತ್ತದೆ. ಅದರಂತೆ ಕರುಣ್ ನಾಯರ್ ಬದಲಿಗೆ ಧ್ರುವ್ಗೆ ಅವಕಾಶ ಸಿಕ್ಕರೆ, ಅವರೇ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಒಂದು ವೇಳೆ ಧ್ರುವ್ ಜುರೇಲ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳದಿದ್ದರೆ, ಕೆಎಲ್ ರಾಹುಲ್ ಗ್ಲೌಸ್ ತೊಡುವುದು ಖಚಿತ. ಈ ಹಿಂದೆ ಟೀಮ್ ಇಂಡಿಯಾ ಪರ ವಿಕೆಟ್ ಕೀಪಿಂಗ್ ಮಾಡಿದ ಅನುಭವ ಕೆಎಲ್ ರಾಹುಲ್ ಜೊತೆಗಿದೆ. ಅಷ್ಟೇ ಅಲ್ಲದೆ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಅವರು ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದ್ದರು. ಹೀಗಾಗಿ ಧ್ರುವ್ ಜುರೇಲ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳದಿದ್ದರೆ, ಕೆಎಲ್ ರಾಹುಲ್ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 13 ಸಿಕ್ಸ್: ಟಿ10 ಪಂದ್ಯದಲ್ಲಿ ತೂಫಾನ್ ಸೆಂಚುರಿ ಸಿಡಿಸಿದ ಜೋಶ್
