
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಕೆಲವು ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಜೂನ್ 17 ರಿಂದ ಪ್ರಾರಂಭವಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ 4ನೇ ಆವೃತ್ತಿಯೊಂದಿಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಚ್, ಸ್ಟಾಪ್ ಗಡಿಯಾರ ಮತ್ತು 2 ಚೆಂಡುಗಳ ಬಳಕೆಯಂತಹ ಬದಲಾವಣೆಗಳು ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಇದರ ಜೊತೆಗೆ ಇದೀಗ ಕನ್ಕ್ಯುಶನ್‌ಗೆ ಸಂಬಂಧಿಸಿದ ನಿಯಮದಲ್ಲೂ ಬದಲಾವಣೆ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, ಪಂದ್ಯದ ನಡುವೆ ಗಾಯಗೊಂಡು ಹೊರನಡೆದ ಆಟಗಾರ ಮುಂದಿನ 7 ದಿನಗಳವರೆಗೆ ಕಣಕ್ಕಿಳಿಯುವಂತಿಲ್ಲ.
ನಿಖರವಾಗಿ 6 ವರ್ಷಗಳ ಹಿಂದೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನ್ಕ್ಯುಶನ್ ನಿಯಮವನ್ನು ಜಾರಿಗೆ ತರಲು ಐಸಿಸಿ ನಿರ್ಧರಿಸಿತ್ತು. ಅಲ್ಲದೆ ಈಗಾಗಲೇ ಈ ನಿಯಮವನ್ನು ಪ್ರಯೋಗಾತ್ಮಕವಾಗಿ ಜಾರಿಗೆ ತರಲಾಗಿದೆ. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2027ರ ಸರಣಿಯೊಂದಿಗೆ ಕನ್ಕ್ಯುಶನ್ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ.
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಫಿಲ್ ಹ್ಯೂಸ್ ತಲೆಗೆ ಚೆಂಡು ಬಡಿದು ಸಾವನ್ನಪ್ಪಿದಾಗಿನಿಂದ, ಕ್ರಿಕೆಟ್‌ನಲ್ಲಿ ಕನ್ಕ್ಯುಶನ್ ಬದಲಿ ನಿಯಮವನ್ನು ಜಾರಿಗೆ ತರುವ ಬೇಡಿಕೆ ಇತ್ತು. ಈ ನಿಯಮದಡಿಯಲ್ಲಿ, ಯಾವುದೇ ಆಟಗಾರನಿಗೆ ತಲೆ ಅಥವಾ ಕುತ್ತಿಗೆಯಲ್ಲಿ ಗಾಯಗೊಂಡ ನಂತರ ತಲೆತಿರುಗುವಿಕೆ, ಮಸುಕಾದ ದೃಷ್ಟಿ ಅಥವಾ ತಲೆನೋವಿನ ಲಕ್ಷಣಗಳು ಕಂಡುಬಂದರೆ, ಆ ತಂಡವು ಆ ಆಟಗಾರನ ಬದಲಿಗೆ ಮತ್ತೋರ್ವ ಆಟಗಾರನನ್ನು ಕಣಕ್ಕಿಳಿಸಬಹುದು.
ಪಂದ್ಯದ ನಡುವೆ ಯಾವುದೇ ಆಟಗಾರನ ತಲೆಗೆ ಅಥವಾ ಕುತ್ತಿಗೆ ಚೆಂಡು ಬಡಿದು, ಅವರು ಹೊರ ನಡೆದರೆ ಅವರ ಬದಲಿಗೆ ಮತ್ತೋರ್ವ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಆದರೆ ಹೀಗೆ ಹೊರ ನಡೆದ ಆಟಗಾರ 7 ದಿನಗಳವರೆಗೆ ಯಾವುದೇ ಪಂದ್ಯವಾಡುವಂತಿಲ್ಲ ಎಂದು ಐಸಿಸಿ ತಿಳಿಸಿದೆ. ಆಟಗಾರರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ.
ಈ ಹಿಂದೆ ಕನ್ಕ್ಯುಶನ್ ಸಬ್ ಆಯ್ಕೆ ಇದ್ದರೂ, ಕೆಲ ತಂಡಗಳು ನಿರ್ಣಾಯಕ ಹಂತದಲ್ಲಿ ಬ್ಯಾಟರ್ ಬದಲಿಗೆ ಬೌಲರ್ನ ಬಳಸಿಕೊಂಡ ನಿದರ್ಶನಗಳಿವೆ. ಇಂತಹ ಮೋಸದಾಟಕ್ಕೆ ಕಡಿವಾಣ ಹಾಕಲು ಕೂಡ ಈ 7 ದಿನಗಳ ನಿಷೇಧ ಸಹಕಾರಿಯಾಗಲಿದೆ ಎಂದು ಐಸಿಸಿ ಅಭಿಪ್ರಾಯಪಟ್ಟಿದೆ.
ಕನ್ಕ್ಯುಶನ್ ಸಬ್ಗಾಗಿ ತಂಡವು ಪ್ಲೇಯಿಂಗ್ ಇಲೆವೆನ್ ಜೊತೆ 5 ಆಟಗಾರರ ಪಟ್ಟಿಯನ್ನು ಸಲ್ಲಿಸುವುದು ಕೂಡ ಕಡ್ಡಾಯ ಮಾಡಲಾಗಿದೆ. ಈಗಾಗಲೇ ಐಪಿಎಲ್ನಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯಂತೆಯೇ ಇಲ್ಲಿ ಕನ್ಕ್ಯುಶನ್ ಸಬ್ ಆಯ್ಕೆ ನೀಡಲಾಗಿದೆ. ಅದರಂತೆ ಪ್ರತಿ ತಂಡಗಳು ಪ್ಲೇಯಿಂಗ್ ಇಲೆವೆನ್ ಜೊತೆ, ಹೆಚ್ಚುವರಿಯಾಗಿ ಒಬ್ಬ ಬ್ಯಾಟ್ಸ್‌ಮನ್, ಒಬ್ಬ ವಿಕೆಟ್ ಕೀಪರ್, ಒಬ್ಬ ಸ್ಪಿನ್ನರ್, ಒಬ್ಬ ಆಲ್-ರೌಂಡರ್ ಮತ್ತು ಒಬ್ಬ ವೇಗದ ಬೌಲರ್ನನ್ನು ಹೆಸರಿಸಬೇಕು.
ಇದನ್ನೂ ಓದಿ: 6,6,6,6,6,6,6,6: ಪೂರನ್ ಪವರ್ಫುಲ್ ಶತಕ
ಇಲ್ಲಿ ಬೌಲರ್ ಬದಲಿಗೆ ಬೌಲರ್ನನ್ನು, ಬ್ಯಾಟ್ಸ್‌ಮನ್ ಬದಲಿಗೆ ಬ್ಯಾಟ್ಸ್ಮನ್ನನ್ನು ಹಾಗೂ ಆಲ್ರೌಂಡರ್ ಬದಲಿಗೆ ಆಲ್ರೌಂಡರ್ನನ್ನು ಕಣಕ್ಕಿಳಿಸಬೇಕು ಎಂದು ಐಸಿಸಿ ಸ್ಪಷ್ಟಪಡಿಸಿದೆ. ಈ ನಿಯಮಗಳು ಪ್ರಸ್ತುತ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯೊಂದಿಗೆ ಜಾರಿಗೆ ಬರಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ.
Published On - 9:03 am, Sat, 28 June 25