
ICC ODI Rankings: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಏಕದಿನ ಆಲ್ರೌಂಡರ್ಗಳ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಶ್ರೇಯಾಂಕ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ಯುವ ಆಲ್ರೌಂಡರ್ ಅಝ್ಮತುಲ್ಲಾ ಒಮರ್ಝಾಹಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅಫ್ಘಾನ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಅಝ್ಮತ್ ಇದೇ ಮೊದಲ ಬಾರಿಗೆ ಅಗ್ರ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಅಗ್ರಸ್ಥಾನದಲ್ಲಿ ಅಫ್ಘಾನಿಸ್ತಾನ್ ತಂಡದ ಹಿರಿಯ ಆಟಗಾರ ಮೊಹಮ್ಮದ್ ನಬಿ ಕಾಣಿಸಿಕೊಂಡಿದ್ದರು. ಇದೀಗ ನಬಿ ಅವರನ್ನು ಹಿಂದಿಕ್ಕಿ 24 ವರ್ಷ ಅಝ್ಮತ್ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ 296 ಅಂಕಗಳನ್ನು ಹೊಂದಿರುವ ಅಝ್ಮತುಲ್ಲಾ ಒಮರ್ಝಾಹಿ ಮೊದಲ ಸ್ಥಾನದಲ್ಲಿದ್ದರೆ, ಮೊಹಮ್ಮದ್ ನಬಿ (292) ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ಝಿಂಬಾಬ್ವೆಯ ಆಲ್ರೌಂಡರ್ ಸಿಕಂದರ್ ರಾಝ (290) ಮೂರನೇ ಸ್ಥಾನ ಅಲಂಕರಿಸಿದ್ದಾರೆ.
ನಾಲ್ಕನೇ ಸ್ಥಾನದಲ್ಲಿ ಬಾಂಗ್ಲಾದೇಶ್ ತಂಡ ಮೆಹದಿ ಹಸನ್ (248) ಮಿರಾಝ್ ಕಾಣಿಸಿಕೊಂಡಿದ್ದು, ಐದನೇ ಸ್ಥಾನದಲ್ಲಿ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ (246) ಇದ್ದಾರೆ.
ಹಾಗೆಯೇ ಅಫ್ಘಾನಿಸ್ತಾನ್ ತಂಡದ ಸ್ಟಾರ್ ಆಲ್ರೌಂಡರ್ ರಶೀದ್ ಖಾನ್ (238) ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಅಂದರೆ ಟಾಪ್-10 ಪಟ್ಟಿಯಲ್ಲಿ ಅಫ್ಘಾನಿಸ್ತಾನ್ ತಂಡದ ಮೂವರು ಆಲ್ರೌಂಡರ್ಗಳು ಕಾಣಿಸಿಕೊಂಡಿರುವುದು ವಿಶೇಷ.
ಇನ್ನು ಆಸ್ಟ್ರೇಲಿಯಾ ತಂಡದ ಗ್ಲೆನ್ ಮ್ಯಾಕ್ಸ್ವೆಲ್ 222 ಅಂಕಗಳೊಂದಿಗೆ ಈ ಏಳನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಕಾಟ್ಲೆಂಡ್ನ ಬ್ರೆಂಡನ್ ಮೆಕ್ಮುಲ್ಲನ್ (219) ಎಂಟನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಗೆಯೇ ಟಾಪ್-10 ಆಲ್ರೌಂಡರ್ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಏಕೈಕ ಭಾರತೀಯ ಆಟಗಾರನೆಂದರೆ ರವೀಂದ್ರ ಜಡೇಜಾ. ಒಟ್ಟು 213 ಅಂಕಗಳನ್ನು ಹೊಂದಿರುವ ಜಡೇಜಾ 9ನೇ ಸ್ಥಾನ ಅಲಂಕರಿಸಿದ್ದಾರೆ. 10ನೇ ಸ್ಥಾನದಲ್ಲಿ ನಮೀಬಿಯಾದ ಗೆರಾಡ್ ಎರಾಸ್ಮಸ್ ಇದ್ದು, ಒಟ್ಟು 209 ಅಂಕಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: Virat Kohli: ಮಾಸ್ಟರ್ ಚೇಸ್ ಮಾಸ್ಟರ್ನ ವಿಶ್ವ ದಾಖಲೆ