ನಾನು ಇನ್ನೇನು ಮಾಡಬೇಕು… ಕೆಎಲ್ ರಾಹುಲ್ ಹತಾಶೆಯ ನುಡಿ
KL Rahul: ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೆಎಲ್ ರಾಹುಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಬಾಂಗ್ಲಾದೇಶ್ ವಿರುದ್ಧದ ಮೊದಲ ಪಂದ್ಯದಲ್ಲಿ 41 ರನ್ ಬಾರಿಸಿದ್ದ ರಾಹುಲ್, ನ್ಯೂಝಿಲೆಂಡ್ ವಿರುದ್ಧ 23 ರನ್ಗಳ ಕೊಡುಗೆ ನೀಡಿದ್ದರು. ಹಾಗೆಯೇ ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅಜೇಯ 42 ರನ್ ಬಾರಿಸಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯ ಫೈನಲ್ಗೆ ತಲುಪಿದೆ. ಹೀಗೆ ಫೈನಲ್ಗೇರುವಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರ ಕೊಡುಗೆ ಕೂಡ ಇದೆ. ಈ ಬಾರಿಯ ಟೂರ್ನಿಯಲ್ಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುತ್ತಿರುವ ರಾಹುಲ್, ಅಂತಿಮ ಹಂತದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇದಾಗ್ಯೂ ರಾಹುಲ್ ಅವರ ಪ್ರದರ್ಶನ ಆಗಾಗ್ಗೆ ಚರ್ಚೆಗೀಡಾಗುತ್ತದೆ.
ಈ ಬಗ್ಗೆ ಮಾತನಾಡಿರುವ ಕೆಎಲ್ ರಾಹುಲ್ ತಮ್ಮ ಹತಾಶೆಯನ್ನು ತೆರೆದಿಟ್ಟಿದ್ದಾರೆ. ನಾನು ಟೀಮ್ ಇಂಡಿಯಾಗೆ ಏನು ಮಾಡಬೇಕು ಅದೆಲ್ಲವನ್ನೂ ಮಾಡಿದ್ದೇನೆ. ಇದಾಗ್ಯೂ ಪ್ರತಿ ಬಾರಿ ನನ್ನನ್ನು ಟ್ರೋಲ್ ಮಾಡಲಾಗುತ್ತಿದೆ. ಇದಕ್ಕಿಂತ ನಾನೇನು ಮಾಡಬೇಕು ಎಂದು ರಾಹುಲ್ ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.
ಪ್ರತಿ ಸರಣಿಯಲ್ಲೂ ನಾನು ಉತ್ತಮವಾಗಿ ಆಡಿದ ಬಳಿಕ ಅಥವಾ ಏಕದಿನ ಕ್ರಿಕೆಟ್ನಿಂದ ಬ್ರೇಕ್ ತೆಗೆದುಕೊಂಡ ಬಳಿಕ, ಇಲ್ಲ ನಾಲ್ಕೈದು ತಿಂಗಳುಗಳ ನಂತರ ಮತ್ತೆ ನಾನು ಏಕದಿನ ಸರಣಿ ಆಡಲು ಮುಂದಾಗುತ್ತಿದ್ದಂತೆ ಅಲ್ಲೊಂದು ಪ್ರಶ್ನೆ ಹುಟ್ಟಿಕೊಂಡಿರುತ್ತದೆ. ರಾಹುಲ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುತ್ತಾನಾ? ಎಂಬುದು.
2020 ರಿಂದ, ನಾನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ಈ ಕ್ರಮಾಂಕದಲ್ಲಿ ನಾನು ಆಡುತ್ತಿದ್ದೆ ಎಂಬುದನ್ನು ಸಹ ಜನರು ಮರೆತುಬಿಡುತ್ತಾರೆ. ಪ್ರತಿ ಬಾರಿ ನಾನು ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುತ್ತಾನಾ ಎಂಬ ಪ್ರಶ್ನೆ ಹುಟ್ಟಿಕೊಂಡಾಗ, ನಾನು ಇನ್ನೇನು ಮಾಡಬೇಕು ಎಂದು ನನ್ನನ್ನೇ ನಾನು ಪ್ರಶ್ನಿಸಿದ್ದೇನೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದಂತೆ ನಾನು ಆಡಿದ್ದೇನೆ ಮತ್ತು ನಾನು ಉತ್ತಮ ಪ್ರದರ್ಶನ ನೀಡಿದ್ದೇನೆ. ಅವರು ಯಾವ ಕ್ರಮಾಂಕದಲ್ಲಿ ಆಡಬೇಕೆಂದು ತಿಳಿಸಿದ್ದಾರೊ ಅದೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದೇನೆ. ಇದಾಗ್ಯೂ ಪ್ಲೇಯಿಂಗ್ ಇಲೆವೆನ್ನಲ್ಲಿ ನನ್ನ ಸ್ಥಾನದ ಬಗ್ಗೆ ಪ್ರಶ್ನೆ ಮೂಡಿದಾಗ, ನಿಜವಾಗಲೂ ನಾನು ಇನ್ನೇನು ಮಾಡಬೇಕು ಎಂದೆನಿಸುತ್ತದೆ ಎಂದು ಕೆಎಲ್ ರಾಹುಲ್ ಹತಾಶೆ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೆಎಲ್ ರಾಹುಲ್ ಅವರನ್ನು 5 ಕ್ರಮಾಂಕದಲ್ಲಿ ಅಲ್ಲ. ಬದಲಾಗಿ 6ನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ. ಅಂದರೆ ಈ ಹಿಂದೆ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ರಾಹುಲ್ ಅವರ ಸ್ಥಾನ ಇದೀಗ 6ನೇ ಕ್ರಮಾಂಕಕ್ಕೆ ಬಂದು ನಿಂತಿದೆ. ಇದಾಗ್ಯೂ ಅವರ ಪ್ರದರ್ಶನವೇನು ಕುಂಠಿತವಾಗಿಲ್ಲ.
ಇದನ್ನೂ ಓದಿ: Virat Kohli: ಮಾಸ್ಟರ್ ಚೇಸ್ ಮಾಸ್ಟರ್ನ ವಿಶ್ವ ದಾಖಲೆ
ಬಾಂಗ್ಲಾದೇಶ್ ವಿರುದ್ಧದ ಮೊದಲ ಪಂದ್ಯದಲ್ಲಿ ರಾಹುಲ್ 41 ರನ್ ಬಾರಿಸಿದ್ದರು. ಇನ್ನು ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಅವರು ಬ್ಯಾಟಿಂಗ್ಗೆ ಇಳಿದಿರಲಿಲ್ಲ. ನ್ಯೂಝಿಲೆಂಡ್ ವಿರುದ್ಧದ ಮ್ಯಾಚ್ನಲ್ಲಿ 23 ರನ್ಗಳ ಕೊಡುಗೆ ನೀಡಿದ್ದರು. ಹಾಗೆಯೇ ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅಜೇಯ 42 ರನ್ ಬಾರಿಸುವ ಮೂಲಕ ಕೆಎಲ್ ರಾಹುಲ್ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದರು. ಇದಾಗ್ಯೂ ಟೀಮ್ ಇಂಡಿಯಾದಲ್ಲಿ ಕೆಎಲ್ ರಾಹುಲ್ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳು ಮೂಡುತ್ತಿದ್ದರೆ, ಅವರು ಇನ್ನೇನು ಮಾಡಬೇಕೆಂಬುದೇ ಪ್ರಶ್ನೆ.
Published On - 6:55 am, Thu, 6 March 25




