ಅಂತು ಇಂತು ಟೀಮ್ ಇಂಡಿಯಾ (Team India) ಟಿ20 ವಿಶ್ವಕಪ್ನಲ್ಲಿ (ICC T20 World Cup 2021) ಗೆಲುವಿನ ಖಾತೆ ತೆರೆದಿದೆ. ಅಫ್ಘಾನಿಸ್ತಾನ್ ವಿರುದ್ದದ ಗೆಲುವಿನೊಂದಿಗೆ ನೆಟ್ ರನ್ ರೇಟ್ ಅನ್ನು ಕೂಡ ಹೆಚ್ಚಿಸಿಕೊಂಡಿದೆ. ಸತತ ಎರಡು ಸೋಲುಗಳಿಂದ -1.609 (NRR) ನೆಟ್ ರನ್ ರೇಟ್ ಹೊಂದಿದ್ದ ಟೀಮ್ ಇಂಡಿಯಾ ಅಫ್ಘಾನ್ ವಿರುದ್ದ 66 ರನ್ಗಳ ಭರ್ಜರಿ ಜಯ ಸಾಧಿಸಿ + 0.073 ನೆಟ್ ರನ್ ರೇಟ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಅತ್ತ ಭಾರತದ ವಿರುದ್ದ ಸೋಲಿನೊಂದಿಗೆ +3.097 ನೆಟ್ ರನ್ ರೇಟ್ ಹೊಂದಿದ್ದ ಅಫ್ಘಾನಿಸ್ತಾನ್ ತಂಡದ NRR +1.481 ಕ್ಕೆ ಕುಸಿದಿದೆ. ಇದರೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವ ಆಸೆ ಕೂಡ ಜೀವಂತವಾಗಿದೆ.
ಏಕೆಂದರೆ ಮುಂದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡ ನಮೀಬಿಯಾ ಹಾಗೂ ಅಫ್ಘಾನಿಸ್ತಾನ್ ವಿರುದ್ದ ಆಡಬೇಕಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಒಂದು ಪಂದ್ಯವನ್ನು ಸೋತರೆ ಟೀಮ್ ಇಂಡಿಯಾಗೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಒಂದು ವೇಳೆ ನ್ಯೂಜಿಲೆಂಡ್ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಸೋತು, ಟೀಮ್ ಇಂಡಿಯಾ ಮುಂದಿನ 2 ಪಂದ್ಯಗಳನ್ನು ಗೆದ್ದರೆ ಉಭಯ ತಂಡಗಳ ಪಾಯಿಂಟ್ 6 ಆಗಲಿದೆ. ಇದರಿಂದ ಸೆಮಿಫೈನಲ್ ಪ್ರವೇಶಿಸಲು ನೆಟ್ ರನ್ ರೇಟ್ ಪರಿಗಣನೆ ಬರಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಕೂಡ ಮುಂದಿನ ಪಂದ್ಯಗಳಲ್ಲಿ ನೆಟ್ ರನ್ ರೇಟ್ ಅನ್ನು ಹೆಚ್ಚಿಸಿಕೊಳ್ಳಬೇಕು.
ಅಷ್ಟೇ ಅಲ್ಲದೆ ನ್ಯೂಜಿಲೆಂಡ್, ಅಫ್ಘಾನಿಸ್ತಾನ್ ಪಂದ್ಯಗಳ ನೆಟ್ ರನ್ ರೇಟ್ ಅನ್ನು ಕೂಡ ಟೀಮ್ ಇಂಡಿಯಾ ಟಾರ್ಗೆಟ್ ಮಾಡಬೇಕಾಗುತ್ತದೆ. ಇದಕ್ಕಾಗಿ ಭಾರತವು ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ದ 60 ಕ್ಕಿಂತ ಹೆಚ್ಚಿನ ರನ್ಗಳ ಅಂತರದಿಂದ ಗೆಲ್ಲಬೇಕು. ಅಥವಾ ಈ ಎರಡೂ ತಂಡಗಳು ನೀಡುವ ಟಾರ್ಗೆಟ್ ಅನ್ನು 13 ಓವರ್ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ.
ಇನ್ನೊಂದೆಡೆ ನ್ಯೂಜಿಲೆಂಡ್ ಸೋಲಿನ ಲೆಕ್ಕಚಾರದಲ್ಲೂ ಟೀಮ್ ಇಂಡಿಯಾ ನೆಟ್ ರನ್ ರೇಟ್ ಅನ್ನು ಎದುರು ನೋಡಬೇಕು. ಅಂದರೆ ಅಫ್ಘಾನಿಸ್ತಾನ್ ತಂಡವು ನ್ಯೂಜಿಲೆಂಡ್ ಅನ್ನು 9 ಕ್ಕಿಂತ ಕಡಿಮೆ ರನ್ಗಳಿಂದ ಸೋಲಿಸಬೇಕು. ಏಕೆಂದರೆ ಇಲ್ಲಿ ಅಫ್ಘಾನ್ ತಂಡದ ನೆಟ್ ರನ್ ರೇಟ್ +1.481 ಇದೆ. ಇಲ್ಲಿ ಅಫ್ಘಾನಿಸ್ತಾನ್ ನ್ಯೂಜಿಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸಿದರೆ 6 ಅಂಕಗಳು+ ಉತ್ತಮ ನೆಟ್ ರನ್ ರೇಟ್ ನೆರವಿನಿಂದ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಅಫ್ಘಾನ್ ತಂಡಕ್ಕೆ ದೊರೆಯಲಿದೆ. ಹೀಗಾಗಿ ಅಫ್ಘಾನ್ ಗೆದ್ದರೂ ಕಡಿಮೆ ಅಂತರದಿಂದ ಗೆಲ್ಲಬೇಕು.
ಒಂದು ವೇಳೆ ಅಫ್ಘಾನಿಸ್ತಾನ್ ನ್ಯೂಜಿಲೆಂಡ್ ವಿರುದ್ದ ಗೆದ್ದರೆ, ಕಿವೀಸ್ ತಂಡ ನಮೀಬಿಯಾ ವಿರುದ್ದ 84 ರನ್ಗಿಂತ ಕಡಿಮೆ ಅಂತರದಿಂದ ಗೆಲ್ಲಬೇಕು. ಅಂದರೆ ನಮೀಬಿಯಾ ನ್ಯೂಜಿಲೆಂಡ್ ವಿರುದ್ದ 84 ರನ್ಗಿಂತ ಕಡಿಮೆ ಅಂತರದಲ್ಲಿ ಸೋಲಬೇಕು. ಇದರಿಂದ ಕೂಡ ನ್ಯೂಜಿಲೆಂಡ್ ನೆಟ್ ರನ್ ರೇಟ್ ಕಡಿಮೆಯಾಗಲಿದೆ. ಹೀಗಾದಲ್ಲಿ ಟೀಮ್ ಇಂಡಿಯಾಗೆ ನೆಟ್ ರನ್ ರೇಟ್ ಮೂಲಕ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಇರಲಿದೆ.
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ
(ICC T20 World Cup: All possible scenarios in which India can qualify for semi-final)