ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಏಕಾಂಗಿಯಾಗಿ ವಿಶ್ವಕಪ್ (ICC World Cup 2023) ಆಯೋಜಿಸಲು ಮುಂದಾಗಿರುವ ಭಾರತಕ್ಕೆ ಆರಂಭದಿಂದಲೂ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಿವೆ. ಈ ಮೊದಲು ಹಲವು ಬದಲಾವಣೆಗಳ ನಂತರ ವಿಶ್ವಕಪ್ ವೇಳಾಪಟ್ಟಿಗೆ ಅಂತಿಮ ರೂಪ ಸಿಕ್ಕಿತ್ತು. ಆ ಬಳಿಕ ಭದ್ರತಾ ಸಮಸ್ಯೆಯಿಂದ ಖಾಲಿ ಕ್ರೀಡಾಂಗಣದಲ್ಲಿ (Stadium) ಅಭ್ಯಾಸ ಪಂದ್ಯವನ್ನು ನಡೆಸಲಾಯಿತು. ಇದಲ್ಲದೆ ಮಳೆಯಿಂದಾಗಿ ಹಲವು ಅಭ್ಯಾಸ ಪಂದ್ಯಗಳು ರದ್ದಾಗಿದ್ದವು. ಇದೆಲ್ಲದರ ನಡುವೆ ಇದೀಗ ಟಿಕೆಟ್ ಖರೀದಿಸಿ ವಿಶ್ವಕಪ್ ಅಭ್ಯಾಸ ಪಂದ್ಯವನ್ನು ನೋಡಲು ಕ್ರೀಡಾಂಗಣಕ್ಕೆ ಬಂದ ಅಭಿಮಾನಿಗಳಿಗೆ ಅಲ್ಲಿನ ಅವ್ಯವಸ್ಥೆ ಬ್ರಹ್ಮನಿರಸನವನ್ನುಂಟು ಮಾಡಿದೆ.
ವಾಸ್ತವವಾಗಿ ನಿನ್ನೆ ಅಂದರೆ ಅಕ್ಟೋಬರ್ 3 ರಂದು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಅಭ್ಯಾಸ ಪಂದ್ಯ ಹೈದರಾಬಾದ್ನ ಉಪ್ಪಾಲ್ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯಕ್ಕೆ ಪ್ರೇಕ್ಷಕರಿಗೂ ಅವಕಾಶ ನೀಡಲಾಗಿತ್ತು. ಆದರೆ ಪಂದ್ಯ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರಿಗೆ ಸ್ಟೇಡಿಯಂನಲ್ಲಿನ ಅವ್ಯವಸ್ಥೆ ನೋಡಿ ಕೊಂಚ ನಿರಾಸೆಯಾಗಿದೆ. ಪಂದ್ಯವನ್ನು ಕಣ್ತುಂಬಿಕೊಳ್ಳಲು ಮೈದಾನಕ್ಕೆ ಬಂದಿದ್ದ ಅನೇಕ ಪ್ರೇಕ್ಷಕರಿಗೆ ವ್ಯವಸ್ಥೆ ಮಾಡಿದ್ದ ಕುರ್ಚಿಗಳು ಅನೈರ್ಮಲ್ಯದಿಂದ ಕೂಡಿದ್ದವು. ಹೀಗಾಗಿ ಹಲವು ಪ್ರೇಕ್ಷಕರು ಕುರ್ಚಿಗಳ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದೆ ಇಡೀ ಪಂದ್ಯವನ್ನು ನಿಂತು ವೀಕ್ಷಿಸಿದರು ಎಂದು ವರದಿಯಾಗಿದೆ. ಅಶುಚಿಯಾದ ಕುರ್ಚಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.
This is for those, who said I had posted an old or fake pic. I’m very present at the ground. pic.twitter.com/klMfNCM6VM
— C.VENKATESH (@C4CRICVENKATESH) October 3, 2023
Nothing much has changed in Uppal stadium. Only some window dressing and spectator comfort still not taken care of in full.#worldcup2023 pic.twitter.com/RiPyeRsfEn
— C.VENKATESH (@C4CRICVENKATESH) October 3, 2023
ವಾಸ್ತವವಾಗಿ ವಿಶ್ವಕಪ್ ಆರಂಭಕ್ಕೂ ಮುನ್ನ ಈ ಮೆಗಾ ಈವೆಂಟ್ ನಡೆಯುವ 10 ಕ್ರೀಡಾಂಗಣಗಳ ದುರಸ್ಥಿ ಕಾರ್ಯಕ್ಕಾಗಿ ಬಿಸಿಸಿಐ, ನೂರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಇದರ ಅಡಿಯಲ್ಲಿ ಹೈದರಾಬಾದ್ನ ಉಪ್ಪಾಲ್ ಸ್ಟೇಡಿಯಂನ ದುರಸ್ಥಿ ಕಾರ್ಯಕ್ಕೂ ಬಿಸಿಸಿಐ ಬರೋಬ್ಬರಿ 117 ಕೋಟಿ ರೂ. ಅನುದಾನ ನೀಡಿತ್ತು. ಆದರೆ ಬಹುತೇಕ ಸ್ಟೇಡಿಯಂ ಕೊಂಚ ಸುಧಾರಣೆ ಕಂಡರೂ ಪ್ರೇಕ್ಷಕರು ಕುಳಿತುಕೊಳ್ಳುವ ಆಸನಗಳ ಸ್ವಚ್ಛತೆಯಲ್ಲಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಸರಿಯಾದ ಕ್ರಮಕೈಗೊಂಡಿಲ್ಲ ಎಂಬುದು ಸರಾಸರಿ ಪ್ರೇಕ್ಷಕರ ಅಭಿಪ್ರಾಯವಾಗಿದೆ.
ಇನ್ನು ಐದು ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯವಹಿಸುತ್ತಿರುವ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಬಹಳ ಹಿಂದಿನಿಂದಲೂ ಕೇಳಿಬರುತ್ತಿವೆ. ಈ ಹಿಂದೆ ಮಾಜಿ ಕ್ರಿಕೆಟಿಗ ಅಜರುದ್ದೀನ್ ಈ ಮಂಡಳಿಯ ಅಧ್ಯಕ್ಷರಾಗಿದ್ದರು. ಅವರ ಆಳ್ವಿಕೆಯಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿದ್ದವು. ಆ ಬಳಿಕ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಸಮಿತಿಯನ್ನು ಸಂಪೂರ್ಣವಾಗಿ ವಿಸರ್ಜಿಸಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಲಾವು ನಾಗೇಶ್ವರ ರಾವ್ ನೇತೃತ್ವದಲ್ಲಿ ಏಕಸದಸ್ಯ ಸಮಿತಿಯನ್ನು ರಚಿಸಲಾಯಿತು. ಏಕಸದಸ್ಯ ಸಮಿತಿಯು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನ ಅಧಿಕಾರವನ್ನು ವಹಿಸಿಕೊಂಡ ನಂತರ ಸಮಸ್ಯೆ ಸ್ವಲ್ಪ ಸುಧಾರಿಸಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅಧಿಕಾರ ಬದಲಾದರು ಸ್ಟೇಡಿಯಂನ ಅವ್ಯವಸ್ಥೆ ಹಾಗೇ ಮುಂದುವರೆದಿದೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.
ಈ ಹಿಂದೆ ಐಪಿಎಲ್ ವೇಳೆ ಹೈದರಾಬಾದ್ ಸ್ಟೇಡಿಯಂನಲ್ಲಿ ಆಸನಗಳು ಅತ್ಯಂತ ಕೆಟ್ಟದಾಗಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು. ಆಗ ಅಜರುದ್ದೀನ್ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಆದರೆ ಈಗ ಇಡೀ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಸುಪ್ರೀಂ ಕೋರ್ಟ್ ನೇಮಿಸಿರುವ ಏಕಸದಸ್ಯ ಸಮಿತಿಯ ಕೈಯಲ್ಲಿದೆ. ಸುಪ್ರೀಂ ಕೋರ್ಟ್ ಸಮಿತಿ ಬಂದ ನಂತರ ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೆ ಹಣ ಬಿಡುಗಡೆ ಮಾಡಲಾಗಿದೆ. ಆದರೂ ಸ್ಟೇಡಿಯಂನ ದುರಾವಸ್ಥೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:17 am, Wed, 4 October 23