ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆ ಇಂಜುರಿಗೆ ತುತ್ತಾಗಿ ಟೀಂ ಇಂಡಿಯಾದಿಂದ (Team India) ಹೊರಗುಳಿದಿರುವ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಆದಷ್ಟು ಬೇಗ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ಪಾಂಡ್ಯ ಈ ವಾರಾಂತ್ಯದಿಂದ ಅಂದರೆ ಶನಿವಾರ ಅಥವಾ ಭಾನುವಾರದಿಂದ ಅಭ್ಯಾಸ ಆರಂಭಿಸುವ ಸಾಧ್ಯತೆ ಇದೆ. ವಾಸ್ತವವಾಗಿ ಅಕ್ಟೋಬರ್ 19 ರಂದು ಪುಣೆಯಲ್ಲಿ ನಡೆದ ಬಾಂಗ್ಲಾದೇಶ (Bangladesh) ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆ ಪಾಂಡ್ಯ ಹಿಮ್ಮಡಿ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಪಾಂಡ್ಯ ಪಂದ್ಯದ ಮಧ್ಯದಲ್ಲೇ ಮೈದಾನ ತೊರೆದಿದ್ದರು.
ಆ ನಂತರ ಪಾಂಡ್ಯ ಅವರ ಗಾಯದ ಬಗ್ಗೆ ಅಪ್‌ಡೇಟ್ ನೀಡಿದ್ದ ಬಿಸಿಸಿಐ, ಅಕ್ಟೋಬರ್ 22 ರಂದು ಧರ್ಮಶಾಲಾದಲ್ಲಿ ನಡೆಯಲ್ಲಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಆಡುವುದಿಲ್ಲ. ಹಾಗೆಯೇ ಅಕ್ಟೋಬರ್ 29 ರಂದು ಲಕ್ನೋದಲ್ಲಿ ನಡೆಯಲ್ಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮೊದಲು ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಿತ್ತು.
ICC World Cup 2023: ಟೀಂ ಇಂಡಿಯಾಗೆ ಬಿಗ್ ಶಾಕ್; ಮುಂದಿನ 2 ಪಂದ್ಯಗಳಿಗೆ ಹಾರ್ದಿಕ್ ಅಲಭ್ಯ..!
ಇದರಿಂದಾಗಿ ಪಾಂಡ್ಯ ತಂಡದೊಂದಿಗೆ ಪ್ರಯಾಣಿಸುವ ಬದಲು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ರಿಹ್ಯಾಬ್ಗೆ ತೆರಳಿದ್ದರು. ಆದರೆ ಇದೀಗ ಎನ್‌ಸಿಎಯಲ್ಲಿ ಚೇತರಿಸಿಕೊಳ್ಳುತ್ತಿರುವ ಪಾಂಡ್ಯ ಇಂಗ್ಲೆಂಡ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಆಡುವುದಿಲ್ಲ ಎಂಬುದು ಕನ್ಫರ್ಮ್ ಆಗಿದೆ.
ಹಾರ್ದಿಕ್ ಪಾಂಡ್ಯ ಅವರ ಗಾಯದ ಬಗ್ಗೆ ಇತ್ತೀಚಿಗೆ ಹೊರಬಿದ್ದಿರುವ ಮಾಹಿತಿ ಪ್ರಕಾರ, ಈ ಸ್ಟಾರ್ ಆಲ್ ರೌಂಡರ್ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದು, ಈ ವಾರದ ಅಂತ್ಯದ ವೇಳೆಗೆ ಎನ್‌ಸಿಎಯಲ್ಲಿ ಲಘು ತರಬೇತಿಯನ್ನು ಪ್ರಾರಂಭಿಸಬಹುದು. ಹಾರ್ದಿಕ್ ತಾನಾಗಿಯೇ ಚೇತರಿಸಿಕೊಳ್ಳಲು ಬಿಸಿಸಿಐ ಸಮಯ ನೀಡಿದೆ. ಹಾಗಾಗಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಲು ಮಂಡಳಿ ಚಿಂತಿಸಿಲ್ಲ. ಅಲ್ಲದೆ ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಈಗಾಗಲೇ ಸೆಮಿಫೈನಲ್‌ಗೇರುವ ಹಂತದಲ್ಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಪಾಂಡ್ಯಗೆ ತಾನಾಗಿಯೇ ಚೇತರಿಸಿಕೊಳ್ಳಲು ಸಮಯ ನೀಡಿದೆ. ಭಾರತದ ಮುಂದಿನ ಕೆಲವು ಪಂದ್ಯದಲ್ಲಿ ಪಾಂಡ್ಯ ಆಡುವ ಸಾಧ್ಯತೆ ಕಡಿಮೆ.
ಪಾಂಡ್ಯ ಪ್ರಸ್ತುತ ಬೆಂಗಳೂರಿನ ಎನ್‌ಸಿಎಯಲ್ಲಿದ್ದು, ಮುಂದಿನ ಕೆಲವು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಆದರೆ ನಾಕ್ ಔಟ್ ಹಂತಕ್ಕೂ ಮುನ್ನ ಫಿಟ್ ಆಗುವ ಸಾಧ್ಯತೆ ಇದ್ದು, ತಂಡವನ್ನು ಸೇರಿಕೊಳ್ಳಲಿದ್ದಾರೆ. ಸೆಮಿಫೈನಲ್‌ಗೂ ಮುನ್ನ ಟೀಂ ಇಂಡಿಯಾ ಅಕ್ಟೋಬರ್ 29 ರಂದು ಇಂಗ್ಲೆಂಡ್, ನವೆಂಬರ್ 2 ರಂದು ಶ್ರೀಲಂಕಾ, ನವೆಂಬರ್ 5 ರಂದು ದಕ್ಷಿಣ ಆಫ್ರಿಕಾ ಮತ್ತು ನವೆಂಬರ್ 12 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಆಡಬೇಕಿದೆ. ಮಾಧ್ಯಮ ವರದಿಗಳ ಪ್ರಕಾರ, ನವೆಂಬರ್ 5 ರಂದು ನಡೆಯಲ್ಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದೊಂದಿಗೆ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾಗೆ ಮರಳುವ ಸಾಧ್ಯತೆಯಿದೆ.