Explained: ಆಂಗ್ಲರ ದಾರಿ ತಪ್ಪಿಸಿತಾ ಭಾಝ್ ಬಾಲ್ ಕ್ರಿಕೆಟ್? ಹಾಲಿ ಚಾಂಪಿಯನ್ನರು ಎಡವಿದ್ದೆಲ್ಲಿ?

ICC World Cup 2023: ಬರೋಬ್ಬರಿ ನಾಲ್ಕು ವರ್ಷದಿಂದ ಕಟ್ಟಿದ ಬಲಿಷ್ಠ ಇಂಗ್ಲೆಂಡ್‌ ತಂಡ ಕೇವಲ ಐದೇ ಐದು ಪಂದ್ಯದಲ್ಲಿ ತನ್ನ ಬಂಡವಾಳವನ್ನು ಬರಿದು ಮಾಡಿಕೊಂಡಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ ವೈಟ್ ಬಾಲ್​ ಕ್ರಿಕೆಟ್​ನಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟಿ ಹಾಕಿದ್ದ ಆಂಗ್ಲರ ಆರ್ಭಟ ಕೇವಲ ಮೂರು ವಾರಗಳಲ್ಲಿ ಅಂತ್ಯಗೊಂಡಿದೆ.

Explained: ಆಂಗ್ಲರ ದಾರಿ ತಪ್ಪಿಸಿತಾ ಭಾಝ್ ಬಾಲ್ ಕ್ರಿಕೆಟ್? ಹಾಲಿ ಚಾಂಪಿಯನ್ನರು ಎಡವಿದ್ದೆಲ್ಲಿ?
ಇಂಗ್ಲೆಂಡ್ ತಂಡ
Follow us
ಪೃಥ್ವಿಶಂಕರ
|

Updated on:Oct 27, 2023 | 5:51 PM

ವಿಶ್ವಕಪ್‌ (ICC ODI World Cup) ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ (England Cricket Team) ಮತ್ತೊಂದು ಮುಖಭಂಗ ಅನುಭವಿಸಿದೆ. ತಮ್ಮ ಮುಂದೆ ಅಷ್ಟು ಬಲಿಷ್ಠರಲ್ಲದ ಸಿಂಹಳೀಯರ ಮುಂದೆ ಆಂಗ್ಲರು (England vs Sri lanka) ಮತ್ತೊಮ್ಮೆ ಮಂಡಿಯೂರಿದ್ದಾರೆ. ಒಂದೆಡೆ ಶ್ರೀಲಂಕಾ ಸತತ ಎರಡನೇ ಪಂದ್ಯದಲ್ಲಿ ಜಯ ಸಾಧಿಸಿದರೆ, ಇನ್ನೊಂದೆಡೆ 5 ಪಂದ್ಯಗಳಲ್ಲಿ ಇಂಗ್ಲೆಂಡ್‌ಗೆ ಇದು ನಾಲ್ಕನೇ ಸೋಲಾಗಿದೆ. ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಕೇವಲ 156 ರನ್​ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು. ನಂತರ ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೇವಲ 26 ಓವರ್‌ಗಳಲ್ಲಿಯೇ ಗೆಲುವಿನ ನಗೆ ಬೀರಿತು. ಶ್ರೀಲಂಕಾದ ಈ ಗೆಲುವಿನಲ್ಲಿ ವೇಗದ ಬೌಲರ್ ಲಹಿರು ಕುಮಾರ ಮತ್ತು ಆರಂಭಿಕ ಪಾಥುಮ್ ನಿಸ್ಸಾಂಕಾ ಮಹತ್ವದ ಕೊಡುಗೆ ನೀಡಿದರು.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಂದಿನಂತೆ ಅಭಿಮಾನಿಗಳು ರನ್‌ಗಳ ಮಳೆಯನ್ನೇ ನಿರೀಕ್ಷೆಯಲ್ಲಿದ್ದರು. ಇದಕ್ಕೆ ಪೂರಕವಾಗಿ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದಾಗ ಈ ನಿರೀಕ್ಷೆಗಳು ಇನ್ನಷ್ಟು ಹೆಚ್ಚಿದವು. ಆದರೆ ಕಳಪೆ ಫಾರ್ಮ್‌ನಲ್ಲಿರುವ ಇಂಗ್ಲೆಂಡ್‌ಗೆ ಈ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಶ್ವಕಪ್‌ಗೆ ಮೊದಲು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟಿದ್ದ ಇಂಗ್ಲೆಂಡ್ ತಂಡ, ಇಡೀ ಟೂರ್ನಿಯಲ್ಲಿ ಕಳಪೆ ಆಟದಿಂದ ಬೇಸತ್ತಿದೆ. ಆ ಕಳಪೆ ಆಟ ಲಂಕಾ ವಿರುದ್ಧವೂ ಮುಂದುವರೆಯಿತು. ಹಾಗಾದರೆ ಈ ವಿಶ್ವಕಪ್​ ಗೆಲ್ಲುವ ಪ್ರಮುಖ ಸ್ಪರ್ಧಿಯಾಗಿ ಅಖಾಡಕ್ಕೆ ಎಂಟ್ರಿಕೊಟ್ಟಿದ್ದ ಆಂಗ್ಲರು ಎಡವಿದ್ದೆಲ್ಲಿ?.

IND vs ENG, ICC World Cup: ಬೆಂಗಳೂರಿನಿಂದ ಲಕ್ನೋಗೆ ಹೊರಟ ಇಂಗ್ಲೆಂಡ್ ಆಟಗಾರರು: ಮುಂದಿನ ಪಂದ್ಯ ಭಾರತ ವಿರುದ್ಧ

ಮೂರು ವಾರಗಳಲ್ಲಿ ಅಂತ್ಯ

ಬರೋಬ್ಬರಿ ನಾಲ್ಕು ವರ್ಷದಿಂದ ಕಟ್ಟಿದ ಬಲಿಷ್ಠ ಇಂಗ್ಲೆಂಡ್‌ ತಂಡ ಕೇವಲ ಐದೇ ಐದು ಪಂದ್ಯದಲ್ಲಿ ತನ್ನ ಬಂಡವಾಳವನ್ನು ಬರಿದು ಮಾಡಿಕೊಂಡಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ ವೈಟ್ ಬಾಲ್​ ಕ್ರಿಕೆಟ್​ನಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟಿ ಹಾಕಿದ್ದ ಆಂಗ್ಲರ ಆರ್ಭಟ ಕೇವಲ ಮೂರು ವಾರಗಳಲ್ಲಿ ಅಂತ್ಯಗೊಂಡಿದೆ. ಈ ಮೆಗಾ ಟೂರ್ನಿಯಲ್ಲಿ ಈಗಾಗಲೇ ನಾಲ್ಕು ಪಂದ್ಯಗಳನ್ನು ಸೋತಿರುವ ಹಾಲಿ ಚಾಂಪಿಯನ್‌ಗಳ ವಿಶ್ವಕಪ್ ಪ್ರಯಾಣ ಭಾಗಶಃ ಮುಗಿದಂತೆ ತೋರುತ್ತಿದೆ. ಆದರೆ ಒಂದೇ ಒಂದು ಕೊನೆಯ ಅವಕಾಶವನ್ನು ಹಿಡಿದಿಟ್ಟುಕೊಂಡಿರುವ ಇಂಗ್ಲೆಂಡ್ ತಂಡ ಸೆಮಿಫೈನಲ್‌ಗೇರಬೇಕೆಂದರೆ ಪವಾಡವೇ ನಡೆಯಬೇಕಿದೆ.

ವಿಶ್ವಕಪ್ ಗೆಲ್ಲುವ ಬಲಿಷ್ಠ ತಂಡಗಳಲ್ಲಿ ಒಂದಾಗಿ ತನ್ನ ಅಭಿಯಾನವನ್ನು ಆರಂಭಿಸಿದ ಆಂಗ್ಲರಿಗೆ ಆರಂಭವೇ ಸರಿಯಾಗಿರಲಿಲ್ಲ. ಕಳೆದ ಬಾರಿಯ ಫೈನಲ್​ನಲ್ಲಿ ತಮ್ಮ ಕೈಯಿಂದ ಸೋಲಲ್ಪಟ್ಟಿದ್ದ ನ್ಯೂಜಿಲೆಂಡ್ ತಂಡ ಹಾಲಿ ಚಾಂಪಿಯನ್ನರನ್ನು ಮೊದಲ ಪಂದ್ಯದಲ್ಲಿಯೇ ಮಣಿಸಿತು. ಆ ಬಳಿಕ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಳ್ಳಲು ವಿಫಲವಾದ ವಿಶ್ವ ಚಾಂಪಿಯನ್ನರಿಗೆ ಸಾಧ್ಯವಾಗಲೆ ಇಲ್ಲ. ಇದಕ್ಕೆ ಕಾರಣಗಳೇನು?

ತಂಡದಲ್ಲಿ ನಿರಂತರ ಬದಲಾವಣೆ

ವಿಶ್ವಕಪ್ ಮೊದಲ ಪಂದ್ಯವನ್ನು ಸೋತ ಬಳಿಕ ಇಂಗ್ಲೆಂಡ್ ತಂಡ ತನ್ನ ಪ್ರತಿಯೊಂದು ಪಂದ್ಯದಲ್ಲೂ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದೆ. ಮೊದಲ ಪಂದ್ಯದಲ್ಲಿ ಹೆಚ್ಚು ಆಲ್‌ರೌಂಡರ್​ಗಳನ್ನು ಕಣಕ್ಕಿಳಿಸಿ ಕೈಸುಟ್ಟುಕೊಂಡಿದ್ದ ಇಂಗ್ಲೆಂಡ್, ನಂತರದ ಪಂದ್ಯಗಳಲ್ಲಿ ತನ್ನ ಆಲೋಚನೆಯನ್ನು ಬದಲಿಸಿತು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ತಂಡದ ಸಂಯೋಜನೆಯನ್ನು ಬದಲಾಯಿಸಿದ ಇಂಗ್ಲೆಂಡ್ ಮಂಡಳಿ ಆರು ಸ್ಪೆಷಲಿಸ್ಟ್ ಬ್ಯಾಟರ್‌ಗಳು ಮತ್ತು ಐವರು ಸ್ಪೆಷಲಿಸ್ಟ್ ಬೌಲರ್‌ಗಳನ್ನು ಕಣಕ್ಕಿಳಿಸಿತು. ಇದರ ಫಲವಾಗಿ ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್‌ನಲ್ಲಿ ಅತಿದೊಡ್ಡ ಸೋಲನ್ನು ಅನುಭವಿಸಿತು.

ಈ ಸೋಲಿನಿಂದ ಇನ್ನಷ್ಟು ಕಂಗೆಟ್ಟ ಇಂಗ್ಲೆಂಡ್ ಮತ್ತೆ ತಂಡದಲ್ಲಿ ಬದಲಾವಣೆ ಮಾಡಿ, ಶ್ರೀಲಂಕಾ ವಿರುದ್ಧ ತನ್ನ ಹಳೆಯ ಫಾರ್ಮುಲಾವನ್ನು ಬಳಸಿ ಮತ್ತೆ ಆಲ್‌ರೌಂಡರ್​ಗಳನ್ನು ಕಣಕ್ಕಿಳಿಸಿತು. ಇದರಿಂದ ಸಿಕ್ಕ ಫಲಿತಾಂಶವೆಂದರೆ ಐದನೇ ಬಾರಿಗೆ ಐದನೇ ಏಕದಿನ ವಿಶ್ವಕಪ್​ನಲ್ಲಿ ಶ್ರೀಲಂಕಾ ವಿರುದ್ಧ ಸೋಲು.

ಉತ್ತಮ ತಂಡ ಕಟ್ಟಿಲ್ಲ

ವಾಸ್ತವವಾಗಿ ಕ್ರಿಕೆಟ್​ನಲ್ಲಿ ಯಾವುದೇ ದೊಡ್ಡ ಈವೆಂಟ್‌ ನಡೆಯುವ ಮೊದಲ ಪ್ರತಿ ತಂಡಗಳು ತಮ್ಮ ಅತ್ಯುತ್ತಮ ಪ್ಲೇಯಿಂಗ್ ಇಲೆವೆನ್ ಆಯ್ಕೆಯ ಕಡೆ ಹೆಚ್ಚು ಗಮನ ನೀಡುತ್ತವೆ. ಆದರೆ ಹಾಲಿ ಚಾಂಪಿಯನ್ನರು ಈ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ತಂಡದಲ್ಲಿ ಆಗಾಗ್ಗೆ ಬದಲಾವಣೆಗಳನ್ನು ಮಾಡುತ್ತ ಹೆಚ್ಚು ಗೊಂದಲಕ್ಕೊಳಗಾಯಿತು. ಇದಕ್ಕೆ ಪೂರಕವಾಗಿ ಮಾರ್ಚ್ ಮತ್ತು ಸೆಪ್ಟೆಂಬರ್ ನಡುವೆ ಈಗ ವಿಶ್ವಕಪ್ ಆಡುತ್ತಿರುವ ತಂಡದ ಹಲವು ಸದಸ್ಯರು ಏಕದಿನ ಪಂದ್ಯವನ್ನು ಹೊರತುಪಡಿಸಿ ಒಂದೇ ಒಂದು ಲಿಸ್ಟ್ ಎ ಪಂದ್ಯವನ್ನು ಆಡಲಿಲ್ಲ. 2015 ರಿಂದ 2019 ರವರೆಗೆ ಇಂಗ್ಲೆಂಡ್ 88 ಏಕದಿನ ಪಂದ್ಯಗಳನ್ನು ಆಡಿತ್ತು. ಇದರಿಂದ ಸಿಕ್ಕ ಪ್ರತಿಫಲವೆಂದರೆ 2019ರ ವಿಶ್ವಕಪ್ ಚಾಂಪಿಯನ್ ಪಟ್ಟ. ಆದರೆ 2019 ರಿಂದ 23ರವರೆಗೆ ತಂಡ ಕೇವಲ 42 ಏಕದಿನ ಪಂದ್ಯಗಳನ್ನು ಮಾತ್ರ ಆಡಿದೆ. ಇದರಲ್ಲಿ ಬರೋಬ್ಬರಿ 44 ಆಟಗಾರರನ್ನು ಕಣಕ್ಕಿಳಿಸಿದೆ. ಅವರಲ್ಲಿ ಕೇವಲ ಎಂಟು ಆಟಗಾರರು ಮಾತ್ರ 50 ಪ್ರತಿಶತ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಸ್ಮಯಕಾರಿಯೆಂದರೆ ಈ ಅವಧಿಯಲ್ಲಿ ಅತಿ ಹೆಚ್ಚು ಬಾರಿ ತಂಡದಲ್ಲಿ ಕಾಣಿಸಿಕೊಂಡ ಜೇಸನ್ ರಾಯ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಗೊಂದಲದ ಆಲೋಚನೆ

ಇಂಗ್ಲೆಂಡ್‌ ತಂಡ ತನ್ನ ಆಯ್ಕೆ ಮತ್ತು ಸಂಯೋಜನೆಯ ಗೊಂದಲದಿಂದಲೇ ತನ್ನ ಅಭಿಯಾನವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಆರಂಭಿಸಿತು. ಇದಕ್ಕೆ ಉದಾಹರಣೆ ಎಂದರೆ ವಿಶ್ವಕಪ್​ಗೆ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಹ್ಯಾರಿ ಬ್ರೂಕ್ ಅವರನ್ನು ತಂಡದ ಭಾಗವಾಗಿ ಚಿಂತಿಸದೆ ಆಯ್ಕೆ ಮಂಡಳಿ ಕೊನೆಯ ಕ್ಷಣದಲ್ಲಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿತು. ಇದು ತಂಡದಲ್ಲಿನ ಸ್ಪಷ್ಟತೆಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ. ಇದರೊಂದಿಗೆ ಇಂಜುರಿಯಿಂದಾಗಿ ಬಹಳ ದಿನಗಳಿಂದ ತಂಡದಿಂದ ದೂರವಿದ್ದ ಜೋಫ್ರಾ ಆರ್ಚರ್‌ ಅವರನ್ನು ತಂಡಕ್ಕೆ ಆಯ್ಕೆ ಮಾಡಿತ್ತಾದರೂ ಅವರಿಗೆ ಆಡುವ ಅವಕಾಶ ಸಿಗಲಿಲ್ಲ. ಇದು ಇಂಗ್ಲೆಂಡ್‌ ಮಂಡಳಿ ಎಷ್ಟು ಗೊಂದಲಮಯದಿಂದ ಕೂಡಿದೆ ಎಂಬುದನ್ನು ಸ್ಪಷ್ಟಪಡಿಸಿತು.

ಸೋಲಿಗೆ ಕಾರಣವಾಯ್ತ ಭಾಝ್ ಬಾಲ್ ಕ್ರಿಕೆಟ್?

ವಾಸ್ತವವಾಗಿ ನ್ಯೂಜಿಲೆಂಡ್ ತಂಡದ ಮಾಜಿ ಸ್ಟಾರ್ ಓಪನರ್ ಬ್ರೆಂಡನ್ ಮೆಕಲಮನ್ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಆದ ಬಳಿಕ ತಂಡದಲ್ಲಿ ಆಟಗಾರರು ಆಡುವ ಶೈಲಿಯೇ ಬದಲಾಗಿ ಹೋಯಿತು. ಮೆಕಲಮ್ ತರಬೇತಿಯಡಿಯಲ್ಲಿ ಇಂಗ್ಲೆಂಡ್ ಆಟಗಾರರು ಪಿಚ್​ನಲ್ಲಿ ನಿಂತು ಆಡುವ ಕಲೆಯನ್ನೇ ಮರೆತು ಬಿಟ್ಟರು. ಟೆಸ್ಟ್ ಕ್ರಿಕೆಟ್​ ಶೈಲಿಯನ್ನು ಬದಲಿಸುವ ಯೋಚನೆಯಲ್ಲಿದ್ದ ಮೆಕಲಮ್ ಟೆಸ್ಟ್ ತಂಡದಲ್ಲಿ ಅಂತಹ ಯೋಚನೆಯಿಂದ ಕೊಂಚ ಯಶಸ್ವಿ ಕೂಡ ಆದರು. ಈ ರೀತಿಯ ಹೊಡಿಬಡಿ ಆಟ ಟಿ20 ಮಾದರಿಯಲ್ಲೂ ಉತ್ತಮ ಫಲಿತಾಂಶ ನೀಡಿತು. ಆದರೆ ಏಕದಿನ ಮಾದರಿಗೆ ಬಂದಾಗ ಇಂಗ್ಲೆಂಡ್ ಕ್ರಿಕೆಟ್​ ಮೇಲೆ ಈ ಭಾಝ್ ಬಾಲ್ ಕ್ರಿಕೆಟ್ ಎಷ್ಟು ಪರಿಣಾಮ ಬೀರಿದೆ ಎಂಬುದನ್ನು ಗಮನಿಸಬಹುದಾಗಿದೆ.

ಈ ವಿಶ್ವಕಪ್​ನಲ್ಲೇ ಕೆಲವು ಪಂದ್ಯಗಳಲ್ಲಿ ಉತ್ತಮ ಆರಂಭ ಪಡೆದುಕೊಂಡಿದ್ದ ಇಂಗ್ಲೆಂಡ್ ತಂಡ ಆ ಬಳಿಕ ನಿರಂತರವಾಗಿ ವಿಕೆಟ್ ಕೈಚೆಲ್ಲಿತು. ಯಾವೊಬ್ಬ ಆಟಗಾರನು ಕ್ರೀಸ್​ನಲ್ಲಿ ನಿಂತು ತಾಳ್ಮೆ ಪ್ರದರ್ಶಿಸಿ ಬಿಗ್ ಇನ್ನಿಂಗ್ಸ್ ಕಟ್ಟುವ ಯೋಚನೆಯನ್ನೇ ಮಾಡುತ್ತಿಲ್ಲ. ಸತತ ವಿಕೆಟ್​ಗಳ ಪತನದ ನಡುವೆಯೂ ಮೈದಾನಕ್ಕೆ ಬರುವ ಹೊಸ ಬ್ಯಾಟರ್ ಎಂದಿನಂತೆ ತನ್ನ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ವಿಕೆಟ್ ಕೈಚೆಲ್ಲುತ್ತಿದ್ದಾರೆ. ಈ ವಿಶ್ವಕಪ್​ನಲ್ಲಿ ಇಂಗ್ಲೆಂಡ್‌ ತಂಡ ಈ ರೀತಿಯ ಕಳಪೆ ಪ್ರದರ್ಶನ ನೀಡಲು ತಂಡದ ಬ್ಯಾಟರ್​ಗಳ ಆಕ್ರಮಣಕಾರಿ ಚಿಂತನೆಯೇ ಪ್ರಮುಖ ಕಾರಣವಾಗಿದೆ ಎಂತಲೇ ಹೇಳಬಹುದು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:37 pm, Fri, 27 October 23