AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ಕೆಲಸ ನೀವು ನೋಡಿಕೊಳ್ಳಿ’; ಪಾಕ್ ಮಂಡಳಿ ಅಧ್ಯಕ್ಷರ ವಿರುದ್ಧ ಅಫ್ರಿದಿ ಗರಂ

ICC World Cup 2023: ಪಾಕಿಸ್ತಾನದ ನಾಯಕ ಬಾಬರ್ ಆಝಂ ಹಾಗೂ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಝಾಕ ಅಶ್ರಫ್ ನಡುವಿನ ವಾಟ್ಸ್​ ಅಪ್ ಚಾಟ್ ಸೋರಿಕೆ ಪ್ರಕರಣ ಪಾಕ್ ಕ್ರಿಕೆಟ್​ನಲ್ಲಿ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿರುವುದಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

‘ನಿಮ್ಮ ಕೆಲಸ ನೀವು ನೋಡಿಕೊಳ್ಳಿ’; ಪಾಕ್ ಮಂಡಳಿ ಅಧ್ಯಕ್ಷರ ವಿರುದ್ಧ ಅಫ್ರಿದಿ ಗರಂ
ಅಫ್ರಿದಿ, ಬಾಬರ್, ಝಾಕಾ ಅಶ್ರಫ್
ಪೃಥ್ವಿಶಂಕರ
|

Updated on:Nov 01, 2023 | 12:13 PM

Share

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಝಂ (Babar Azam) ಹಾಗೂ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಝಾಕ ಅಶ್ರಫ್ (Zaka Ashraf) ನಡುವಿನ ವಾಟ್ಸ್​ ಅಪ್ ಚಾಟ್ ಸೋರಿಕೆ ಪ್ರಕರಣ ಪಾಕ್ ಕ್ರಿಕೆಟ್​ನಲ್ಲಿ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿರುವುದಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅದರಲ್ಲೂ ಪಾಕ್ ಮಂಡಳಿ ಅಧ್ಯಕ್ಷ ಝಾಕ ಅಶ್ರಫ್​ ಅವರ ಈ ನಡೆಗೆ ಪಾಕ್ ತಂಡದ ಮಾಜಿ ಆಟಗಾರರು ಆಕ್ರೋಶ ಹೊರಹಾಕುತ್ತಿದ್ದಾರೆ. ಈಗ ಅವರ ಸಾಲಿಗೆ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ಕೂಡ ಸೇರಿದ್ದು, ಝಾಕಾ ಅಶ್ರಫ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಶ್ರಫ್ ಯಾವುದೋ ಕ್ಲಬ್ ಅಧ್ಯಕ್ಷರಲ್ಲ

ಪಾಕಿಸ್ತಾನದ ಟಿವಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ, ‘ಝಾಕಾ ಅಶ್ರಫ್ ಯಾವುದೋ ಕ್ಲಬ್ ಅಧ್ಯಕ್ಷರಲ್ಲ. ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು. ಅವರು ಅನೇಕ ವಿಷಯಗಳನ್ನು ಗಮನಿಸಬೇಕು. ಅಶ್ರಫ್ ಅವರೇ ಮಾಧ್ಯಮ ಸಂಸ್ಥೆಗಳ ಮಾಲೀಕರಿಗೆ ಫೋನ್ ಮಾಡಿ ವಾಟ್ಸಪ್ ಸಂದೇಶಗಳನ್ನು ಬಹಿರಂಗಗೊಳಿಸುವಂತೆ ಹೇಳಿದ್ದಾರೆ ಎಂಬುದು ನನಗೆ ಆಶ್ಚರ್ಯ ತರಿಸಿದೆ. ಜನರು ನಿಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಅದಕ್ಕೆ ಅವಕಾಶ ಮಾಡಿಕೊಟ್ಟಿರುವುದು ನೀವೇ’.

ICC World Cup 2023: ಪಾಕಿಸ್ತಾನ ತಂಡಕ್ಕೆ ಇನ್ನೂ ಇದೆ ಸೆಮಿಫೈನಲ್‌ಗೇರುವ ಅವಕಾಶ..!

ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ

ಮುಂದುವರೆದು ಮಾತನಾಡಿರುವ ಅಫ್ರಿದಿ, ‘ನೀವು ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ. ತಂಡವು ವಿಶ್ವಕಪ್ ಆಡುತ್ತಿರುವಾಗ ನೀವು ತಂಡದ ನಾಯಕನ ಬಗ್ಗೆ ಆಟಗಾರರ ಬಗ್ಗೆ ಹೇಳಿಕೆಗಳ ಮೇಲೆ ಹೇಳಿಕೆ ನೀಡುತ್ತಿದ್ದೀರಿ. ಮೊದಲು ನೀವು ನಿಮ್ಮ ಘನತೆಗೆ ತಕ್ಕಂತೆ ನೆಡೆದುಕೊಳ್ಳಿ. ಕ್ರಿಕೆಟಿಗರಾದ ನಾವು ನಿಮ್ಮಿಂದ ನಿರೀಕ್ಷಿಸುವುದು ಇದನ್ನೇ. ಜನರು ನಿಮ್ಮ ವಿರುದ್ಧ ಏನು ಹೇಳುತ್ತಿದ್ದಾರೆ ಎಂಬುದನ್ನು ಬದಿಗಿಟ್ಟು, ನೀವೇ ಅವರಿಗೆ ಮಾತನಾಡಲು ಅವಕಾಶವನ್ನು ನೀಡುತ್ತಿದ್ದೀರಿ. ದಯವಿಟ್ಟು ನೀವು ನಿಮ್ಮದು ಎಷ್ಟಿದೆಯೋ ಅಷ್ಟನ್ನು ನೋಡಿಕೊಳ್ಳಿ ಎಂದು ಝಾಕಾ ಅಶ್ರಫ್ ಮೇಲೆ ಅಫ್ರಿದಿ ವಾಗ್ದಾಳಿ ನಡೆಸಿದ್ದಾರೆ.

ಏನಿದು ವಿವಾದ?

ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ತಂಡದ ಸೋಲಿನ ನಂತರ, ಬಾಬರ್ ಅಝಂ ಹಾಗೂ ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಅವರ ನಡುವೆ ಎಲ್ಲವೂ ಸರಿ ಇಲ್ಲ.  ಪಿಸಿಬಿ ಮುಖ್ಯಸ್ಥ ಝಾಕಾ ಅಶ್ರಫ್, ನಾಯಕ ಬಾಬರ್‌ ಅವರ ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ ರಶೀದ್‌ ಲತೀಫ್‌ ಟಿವಿ ಚರ್ಚೆಯೊಂದರಲ್ಲಿ ಹೇಳಿದ್ದರು. ಈ ಹೇಳಿಕೆ ನಂತರ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆ ಶುರುವಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಝಾಕಾ ಅಶ್ರಫ್ ಪಾಕಿಸ್ತಾನದ ವಾಹಿನಿಯೊಂದರ ಸಂದರ್ಶನದಲ್ಲಿ ಈ ಸುದ್ದಿಯನ್ನು ನಿರಾಕರಿಸಿದ್ದರು. ‘ಬಾಬರ್ ಎಂದಿಗೂ ನನ್ನನ್ನು ನೇರವಾಗಿ ಸಂಪರ್ಕಿಸಿಲ್ಲ. ಅವರು ಸಾಮಾನ್ಯವಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಅಂತರಾಷ್ಟ್ರೀಯ ಕ್ರಿಕೆಟ್ ನಿರ್ದೇಶಕರೊಂದಿಗೆ ಮಾತನಾಡುತ್ತಾರೆ” ಎಂದು ಅಶ್ರಫ್ ಹೇಳಿದರು. ಅಲ್ಲದೆ ತನ್ನ ಹೇಳಿಕೆಗೆ ಪೂರಕವಾಗಿ, ಬಾಬರ್ ಮತ್ತು ಪಿಸಿಬಿ ಸಿಒಒ ನಡುವಿನ ವಾಟ್ಸಾಪ್ ಚಾಟ್ ಅನ್ನು ಮಾಧ್ಯಮದ ಮುಂದೆ ಬಹಿರಂಗಪಡಿಸಿದ್ದರು.

ಚಾಟ್‌ನಲ್ಲಿ ಏನಿದೆ?

ಪಿಸಿಬಿ ಸಿಒಒ ಸಲ್ಮಾನ್ ನಸೀರ್ ಹಾಗೂ ಬಾಬರ್ ನಡೆಸಿರುವ ವಾಟ್ಸಾಪ್ ಚಾಟ್​ನಲ್ಲಿ ‘ಬಾಬರ್.. ನೀವು ಫೋನ್ ಮಾಡಿ, ಮೆಸೇಜ್ ಮಾಡಿದರೂ ಅಶ್ರಫ್ ಅವರು ನಿಮಗೆ ಸ್ಪಂದಿಸುತ್ತಿಲ್ಲ ಎಂದು ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ನೀವು ಅವರಿಗೆ ಫೋನ್ ಮಾಡಿದ್ರಾ?’ ಎಂದು ನಾಸಿರ್, ಬಾಬರ್​ ಅವರನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಬಾಬರ್, ‘ಸಲಾಂ ಸಲ್ಮಾನ್ ಭಾಯ್, ನಾನು ಅಶ್ರಫ್ ಅವರಿಗೆ ಕರೆ ಮಾಡಿಲ್ಲ ಸರ್..’ ಎಂದು ಉತ್ತರಿಸಿದ್ದಾರೆ ಎಂದು ಆ ಚಾಟ್‌ನಲ್ಲಿ ಹೇಳಲಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:03 pm, Wed, 1 November 23