ಈ ಬಾರಿಯ ವಿಶ್ವಕಪ್​ನಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿನ ಫಲಿತಾಂಶ ಯಾರ ಪರವಿತ್ತು? ಇಲ್ಲಿದೆ ಮಾಹಿತಿ

| Updated By: ಝಾಹಿರ್ ಯೂಸುಫ್

Updated on: Nov 14, 2023 | 10:55 PM

ICC World Cup 2023: ವಾಂಖೆಡೆ ಸ್ಟೇಡಿಯಂನಲ್ಲಿ ಆಡಲಾದ ನಾಲ್ಕು ಮ್ಯಾಚ್​ಗಳಲ್ಲಿ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 300+ ಸ್ಕೋರ್​ಗಳಿಸಿದೆ. ಹೀಗಾಗಿ ಈ ಸಲ ಕೂಡ ಬೃಹತ್ ಮೊತ್ತದೊಂದಿಗೆ ಪಂದ್ಯ ಗೆಲ್ಲಲು ಉಭಯ ತಂಡಗಳು ಪ್ಲ್ಯಾನ್ ರೂಪಿಸಬಹುದು.

ಈ ಬಾರಿಯ ವಿಶ್ವಕಪ್​ನಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿನ ಫಲಿತಾಂಶ ಯಾರ ಪರವಿತ್ತು? ಇಲ್ಲಿದೆ ಮಾಹಿತಿ
ICC World Cup 2023
Follow us on

ಏಕದಿನ ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಸೆಣಸಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸಲಿದೆ. ಏಕೆಂದರೆ ಈ ಬಾರಿಯ ವಿಶ್ವಕಪ್​ನಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಒಟ್ಟು 4 ಪಂದ್ಯಗಳನ್ನಾಡಲಾಗಿದೆ.

ಈ ನಾಲ್ಕು ಪಂದ್ಯಗಳಲ್ಲಿ ಮೂರು ಮ್ಯಾಚ್​ಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವೇ ಗೆದ್ದಿದೆ. ಇನ್ನು ಒಂದು ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಅಂದರೆ ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.

ಏಕೆಂದರೆ ವಾಂಖೆಡೆ ಸ್ಟೇಡಿಯಂನಲ್ಲಿ ಆಡಲಾದ ನಾಲ್ಕು ಮ್ಯಾಚ್​ಗಳಲ್ಲಿ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 300+ ಸ್ಕೋರ್​ಗಳಿಸಿದೆ. ಹೀಗಾಗಿ ಈ ಸಲ ಕೂಡ ಬೃಹತ್ ಮೊತ್ತದೊಂದಿಗೆ ಪಂದ್ಯ ಗೆಲ್ಲಲು ಉಭಯ ತಂಡಗಳು ಪ್ಲ್ಯಾನ್ ರೂಪಿಸಬಹುದು.

ಈ ಬಾರಿಯ ವಿಶ್ವಕಪ್​ನಲ್ಲಿ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯಗಳ ಫಲಿತಾಂಶ ಹೀಗಿದೆ:

ಸೌತ್ ಆಫ್ರಿಕಾ vs ಇಂಗ್ಲೆಂಡ್: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡ 7 ವಿಕೆಟ್ ಕಳೆದುಕೊಂಡು 399 ರನ್ ಕಲೆಹಾಕಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ 22 ಓವರ್​ಗಳಲ್ಲಿ 170 ರನ್​ಗಳಿಗೆ ಆಲೌಟ್ ಆಗಿತ್ತು. ಅದರಂತೆ ಸೌತ್ ಆಫ್ರಿಕಾ 229 ರನ್​ಗಳ ಭರ್ಜರಿ ಜಯ ಸಾಧಿಸಿತ್ತು.

ಸೌತ್ ಆಫ್ರಿಕಾ vs ಬಾಂಗ್ಲಾದೇಶ್: ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸೌತ್ ಆಫ್ರಿಕಾ ಕಲೆಹಾಕಿದ್ದು ಬರೋಬ್ಬರಿ 382 ರನ್​ಗಳು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಬಾಂಗ್ಲಾದೇಶ್ ತಂಡವು 233 ರನ್​ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲೂ ಸೌತ್ ಆಫ್ರಿಕಾ 149 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು.

ಭಾರತ vs ಶ್ರೀಲಂಕಾ: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ 8 ವಿಕೆಟ್ ನಷ್ಟಕ್ಕೆ 357 ರನ್ ಕಲೆಹಾಕಿತು. ಇನ್ನು ಶ್ರೀಲಂಕಾ ತಂಡವನ್ನು ಕೇವಲ 55 ರನ್​ಗಳಿಗೆ ಆಲೌಟ್ ಮಾಡಿ ಟೀಮ್ ಇಂಡಿಯಾ 302 ರನ್​ಗಳ ಬೃಹತ್ ಅಂತರದ ಜಯ ಸಾಧಿಸಿತು.

ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ್: ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ್ 5 ವಿಕೆಟ್ ಕಳೆದುಕೊಂಡು 291 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 91 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಇದಾಗ್ಯೂ ಗ್ಲೆನ್ ಮ್ಯಾಕ್ಸ್​ವೆಲ್ ಅವರ ದ್ವಿಶತಕದ (201) ನೆರವಿನಿಂದ ರೋಚಕ ಜಯ ಸಾಧಿಸಿತ್ತು.

ಅಂದರೆ ಇಲ್ಲಿ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು 350+ ಸ್ಕೋರ್​ಗಳಿಸಿದರೆ, ಒಂದು ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ದ ಅಫ್ಘಾನಿಸ್ತಾನ್ 291 ರನ್ ಪೇರಿಸಿದೆ. ಅಷ್ಟೇ ಅಲ್ಲದೆ ದ್ವಿತೀಯ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಒಂದು ಹಂತದವರೆಗೆ ಕಟ್ಟಿ ಹಾಕುವಲ್ಲಿ ಅಫ್ಘಾನಿಸ್ತಾನ್ ಯಶಸ್ವಿಯಾಗಿತ್ತು.

ಕೇವಲ 91 ರನ್​ಗಳಿಗೆ 7 ವಿಕೆಟ್ ಉರುಳಿಸಿ ಪಂದ್ಯವನ್ನು ಗೆಲ್ಲುವತ್ತ ಹೊರಟಿದ್ದ ಅಫ್ಘಾನ್ ಪಾಲಿಗೆ ಕಂಟಕವಾಗಿದ್ದು ಗ್ಲೆನ್ ಮ್ಯಾಕ್ಸ್​ವೆಲ್. ಈ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ಮ್ಯಾಕ್ಸ್​ವೆಲ್ ಅಫ್ಘಾನಿಸ್ತಾನ್ ತಂಡದ ಗೆಲುವನ್ನು ಕಸಿದುಕೊಂಡಿದ್ದರು.

ಇದನ್ನೂ ಓದಿ: ದಾಖಲೆಗಳ ಸರದಾರ ಕಿಂಗ್ ಕೊಹ್ಲಿ ಮುಂದಿದೆ ಮೂರು ವಿಶ್ವ ದಾಖಲೆಗಳು

ಆಸ್ಟ್ರೇಲಿಯಾ ತಂಡದ ಈ ಒಂದು ಗೆಲುವನ್ನು ಹೊರತುಪಡಿಸಿದರೆ, ಉಳಿದ ಮೂರು ಮ್ಯಾಚ್​ಗಳಲ್ಲೂ ಮೊದಲು ಬ್ಯಾಟ್ ಮಾಡಿದ ತಂಡವೇ ಗೆದ್ದಿದೆ. ಅದರಲ್ಲೂ ಮೊದಲು ಬ್ಯಾಟಿಂಗ್ ಮಾಡಿದ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಮೊದಲ ಸೆಮಿಫೈನಲ್​ನಲ್ಲಿ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ಕೆ ಮಾಡುವುದು ಖಚಿತ ಎಂದೇ ಹೇಳಬಹುದು.