ODI World Cup 2023: ‘ನಾವು ಯಾವ ಪಂದ್ಯದಲ್ಲೂ’; ತಂಡದ ಸೋಲಿಗೆ ವಿಂಡೀಸ್ ನಾಯಕ ದೂರಿದ್ದು ಯಾರನ್ನು ಗೊತ್ತಾ?
ICC World Qualifier 2023: ಒಟ್ಟು 4 ವಿಶ್ವಕಪ್ ಗೆದ್ದ ತಂಡ ಅರ್ಹತಾ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ನಂಬಲಾಸಾಧ್ಯವಾಗಿದೆ.
ವಿಶ್ವಕಪ್ (ODI World Cup 2023) ಇತಿಹಾಸದಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್ (West Indies) ಇಲ್ಲದೆ ಟೂರ್ನಿ ನಡೆಯಲಿದೆ. 48 ವರ್ಷಗಳ ಹಿಂದೆ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ಮೊದಲ ಬಾರಿಗೆ ವಿಶ್ವಕಪ್‌ನ ಭಾಗವಾಗದಿರುವುದು ತಂಡದ ಕಳಪೆ ಪ್ರದರ್ಶನಕ್ಕೆ ಕೈಗನ್ನಡಿಯಾಗಿದೆ. ವಿಶ್ವಕಪ್ ಕ್ವಾಲಿಫೈಯರ್ನಲ್ಲಿ ಸ್ಕಾಟ್ಲೆಂಡ್ ವಿರುದ್ಧ 7 ವಿಕೆಟ್ಗಳ ಹೀನಾಯ ಸೋಲಿನೊಂದಿಗೆ ವೆಸ್ಟ್ ಇಂಡೀಸ್ ವಿಶ್ವಕಪ್ ತಲುಪುವ ಮುನ್ನವೇ ಟೂರ್ನಿಯಿಂದ ಹೊರಬಿದ್ದಿದೆ. ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ವಿಶ್ವಕಪ್ ಅರ್ಹತಾ (ICC World Qualifier 2023) ಪಂದ್ಯಾವಳಿಯಲ್ಲಿ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ರೂಪದಲ್ಲಿ ಎರಡು ಮಾಜಿ ಚಾಂಪಿಯನ್ ಮತ್ತು ಬಲಿಷ್ಠ ತಂಡಗಳು ಅನೇಕ ಸಣ್ಣ ತಂಡಗಳನ್ನು ಎದುರಿಸಬೇಕಾಯಿತು. ಟೂರ್ನಿ ಆರಂಭಕ್ಕೂ ಮುನ್ನ ಉಭಯ ತಂಡಗಳು ಸುಲಭವಾಗಿ ಅರ್ಹತೆ ಪಡೆಯಲಿವೆ ಎಂಬ ನಂಬಿಕೆ ಇತ್ತು. ಒಂದೆಡೆ ಶ್ರೀಲಂಕಾ ವಿಶ್ವಕಪ್ ಟಿಕೆಟ್ ಪಡೆಯುವ ಸನಿಹದಲ್ಲಿದ್ದರೆ, ಬಲಿಷ್ಠ ಪಡೆಯನ್ನೇ ಹೊಂದಿರುವ ವಿಂಡೀಸ್ ತಂಡವು ಅರ್ಹತಾ ಸುತ್ತಿನಲ್ಲೇ ಸೋತು ಹೊರಬಿದ್ದಿದೆ. ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ನಾಯಕ ಶಾಯ್ ಹೋಪ್ ಸಿದ್ಧತೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ದೈತ್ಯ ವಿಂಡೀಸ್ ತಂಡ 1975 ಮತ್ತು 1979 ರಲ್ಲಿ ಸತತ ಎರಡನೇ ಬಾರಿಗೆ ವಿಶ್ವಕಪ್ ಗೆದ್ದಿತು. ಅಲ್ಲದೆ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿದೆ. ಒಟ್ಟು 4 ವಿಶ್ವಕಪ್ ಗೆದ್ದ ತಂಡ ಅರ್ಹತಾ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ನಂಬಲಾಸಾಧ್ಯವಾಗಿದೆ.
World Cup 2023: ವಿಶ್ವಕಪ್ ವೇಳಾಪಟ್ಟಿ; ಟೀಂ ಇಂಡಿಯಾಕ್ಕೆ ಮುಳುವಾಗಲಿವೆ ಈ 4 ಸವಾಲುಗಳು..!
ಶಾಯ್ ಹೋಪ್ ಹೇಳಿದ್ದೇನು?
ಶಾಯ್ ಹೋಪ್ ನಾಯಕತ್ವದ ವಿಂಡೀಸ್ ತಂಡ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸ್ಕಾಟ್ಲೆಂಡ್ ಗೆಲುವಿಗೆ ಕೇವಲ 182 ರನ್ಗಳ ಸವಾಲು ನೀಡಿತ್ತು. ಈ ಸವಾಲನ್ನು ಸ್ಕಾಟ್ಲೆಂಡ್ ತಂಡ 43.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಪೂರ್ಣಗೊಳಿಸಿತು. ಸೋಲಿನ ನಂತರ ಮಾತನಾಡಿದ ವಿಂಡೀಸ್ ನಾಯಕ ಶಾಯ್ ಹೋಪ್, “ಪಂದ್ಯವು ಸವಾಲಿನದ್ದಾಗಿದೆ ಎಂದು ನಾವು ನಿರೀಕ್ಷಿಸಿದ್ದೇವು. ಇಂತಹ ಪಂದ್ಯಗಳಲ್ಲಿ ಟಾಸ್ ಅತ್ಯಂತ ನಿರ್ಣಾಯಕ. ಈ ಮೈದಾನದಲ್ಲಿ, ಟಾಸ್ ಗೆದ್ದ ತಂಡವು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತದೆ. ಹೀಗಾಗಿ ಟಾಸ್ ಸೋತ ನಾವು ಬ್ಯಾಟಿಂಗ್ ಮಾಡಬೇಕಾಯಿತು. ಪಂದ್ಯದಲ್ಲಿ ಕ್ಯಾಚ್ ಡ್ರಾಪ್ ಮತ್ತು ಮಿಸ್ ಫೀಲ್ಡಿಂಗ್ ಸಹಜ. ಆದರೆ ಇದು ಆಗಬಾರದು” ಎಂದು ಶಾಯ್ ಹೋಪ್ ಹೇಳಿದ್ದಾರೆ.
“ನಾವು ಯಾವುದೇ ಪಂದ್ಯದಲ್ಲಿ 100 ಪ್ರತಿಶತ ಪ್ರಯತ್ನವನ್ನು ನೀಡಿಲ್ಲ. ನಮ್ಮ ಪ್ರಯತ್ನ ವಿಫಲವಾಯಿತು. ಅಭ್ಯಾಸವಿಲ್ಲದೆ ಇಂತಹ ಟೂರ್ನಿಯಲ್ಲಿ ಆಡುವ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ನಮಗೆ ಇನ್ನೂ 2 ಪಂದ್ಯಗಳು ಬಾಕಿ ಇವೆ. ಈ 2 ಪಂದ್ಯಗಳಲ್ಲಿ ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇವೆ. ನಮ್ಮಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ. ಅವರು ಆಟದಲ್ಲಿ ಸ್ಥಿರವಾಗಿರಬೇಕು” ಎಂದು ಶಾಯ್ ಹೋಪ್ ಸೇರಿಸಿದರು.
ವಿಂಡೀಸ್ ತಂಡ: ಶಾಯ್ ಹೋಪ್ (ನಾಯಕ ಮತ್ತು ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ಶಮರಾ ಬ್ರೂಕ್ಸ್, ನಿಕೋಲಸ್ ಪೂರನ್, ಕೈಲ್ ಮೇಯರ್ಸ್, ಕೆವಿನ್ ಸಿಂಕ್ಲೇರ್, ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಅಕೆಲ್ ಹೊಸೈನ್ ಮತ್ತು ಅಲ್ಜಾರಿ ಜೋಸೆಫ್.
ಸ್ಕಾಟ್ಲೆಂಡ್ ತಂಡ: ರಿಚಿ ಬೆರಿಂಗ್ಟನ್ (ನಾಯಕ), ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ಕ್ರಿಸ್ಟೋಫರ್ ಮೆಕ್‌ಬ್ರೈಡ್, ಬ್ರಾಂಡನ್ ಮೆಕ್‌ಮುಲ್ಲೆನ್, ಜಾರ್ಜ್ ಮುನ್ಸಿ, ತೋಮಸ್ ಮೆಕಿಂತೋಷ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಸುಫಿಯಾನ್ ಷರೀಫ್ ಮತ್ತು ಕ್ರಿಸ್ ಸೋಲ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ