‘ಅಶ್ವಿನ್ಗೆ ನಾಯಕತ್ವ ನೀಡಿ’; ತಂಡದ ಆಯ್ಕೆಗೆ ನಾನು ಕೂಡ ಲಭ್ಯನಿದ್ದೇನೆ ಎಂದ ಡಿಕೆ
Dinesh Karthik: ದಿನೇಶ್ ಕಾರ್ತಿಕ್ ಕಳೆದ ಹಲವು ತಿಂಗಳುಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸುವುದಾದರೆನ ಕಾರ್ತಿಕ್ಗೆ ಮತ್ತೆ ಟೀಂ ಇಂಡಿಯಾದ ಕದ ತೆರೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಟೀಂ ಇಂಡಿಯಾದ (Team India) ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಟೀಂ ಇಂಡಿಯಾ ಆಟಗಾರರು ಈಗಾಗಲೇ ವೆಸ್ಟ್ ಇಂಡೀಸ್ಗೆ (IND vs WI) ತೆರಳಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸವನ್ನು ಟೀಂ ಇಂಡಿಯಾ ಟೆಸ್ಟ್ ಸರಣಿಯೊಂದಿಗೆ ಆರಂಭಿಸಲಿದ್ದು, ಈ ಟೆಸ್ಟ್ ಸರಣಿಯು ಒಟ್ಟು 2 ಪಂದ್ಯಗಳದ್ದಾಗಿದೆ. ಅದರ ನಂತರ ವೆಸ್ಟ್ ಇಂಡೀಸ್ ಪ್ರವಾಸವು 3 ಪಂದ್ಯಗಳ ಏಕದಿನ ಸರಣಿ ಮತ್ತು 5 ಪಂದ್ಯಗಳ ಟಿ20 ಸರಣಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಜೂನ್ 23 ರಂದು ಟೆಸ್ಟ್ ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಬಿಸಿಸಿಐ (BCCI) ಪ್ರಕಟಿಸಿದ್ದು, ಇದೀಗ ಈ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾದ ಅನುಭವಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ (dinesh karthik) ಮತ್ತೆ ತಾನು ಕ್ರಿಕೆಟ್ ಆಡಬೇಕೆಂಬ ಬಯಕೆಯನ್ನು ಹೊರಹಾಕಿದ್ದಾರೆ.
ದಿನೇಶ್ ಕಾರ್ತಿಕ್ ಕಳೆದ ಹಲವು ತಿಂಗಳುಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸುವುದಾದರೆ ಕಾರ್ತಿಕ್ಗೆ ಮತ್ತೆ ಟೀಂ ಇಂಡಿಯಾದ ಕದ ತೆರೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ. ಕಳೆದ ನವೆಂಬರ್ನಲ್ಲಿ ತಂಡದ ಪರ ಟಿ20 ಪಂದ್ಯವನ್ನಾಡಿದ್ದ ಕಾರ್ತಿಕ್, ಕೊನೆಯ ಬಾರಿಗೆ ಟೆಸ್ಟ್ ಮತ್ತು ಏಕದಿನ ಪಂದ್ಯವನ್ನು ಆಡಿ 3 ವರ್ಷವೇ ಆಗಿದೆ. ಆದರೆ ಇದೀಗ ದೇಶೀ ಟೂರ್ನಿಯತ್ತ ಮುಖ ಮಾಡಿರುವ ಕಾರ್ತಿಕ್, ಮುಂಬರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವುದಾಗಿ ಹೇಳಿಕೆ ನೀಡಿದ್ದಾರೆ.
ODI World Cup 2023: ‘ನಾವು ಯಾವ ಪಂದ್ಯದಲ್ಲೂ’; ತಂಡದ ಸೋಲಿಗೆ ವಿಂಡೀಸ್ ನಾಯಕ ದೂರಿದ್ದು ಯಾರನ್ನು ಗೊತ್ತಾ?
ದಿನೇಶ್ ಕಾರ್ತಿಕ್ ಹೇಳಿದ್ದೇನು?
ದಿನೇಶ್ ಕಾರ್ತಿಕ್ ದೇಶೀಯ ಕ್ರಿಕೆಟ್‌ನಲ್ಲಿ ತಮಿಳುನಾಡು ಪರ ಆಡುತ್ತಿದ್ದಾರೆ. ವಿಜಯ್ ಹಜಾರೆ ಟ್ರೋಫಿಗೆ ತಂಡದ ಆಯ್ಕೆಗೆ ನಾನು ಕೂಡ ಲಭ್ಯವಿರುತ್ತೇನೆ ಎಂದು ಕಾರ್ತಿಕ್ ಹೇಳಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಆಯ್ಕೆಗೆ ನಾನು ಲಭ್ಯವಿರುತ್ತೇನೆ ಎಂದು ತಮಿಳುನಾಡು ಆಯ್ಕೆ ಸಮಿತಿಗೆ ತಿಳಿಸುತ್ತೇನೆ. ನಾನು ಈ ಟೂರ್ನಿಯಲ್ಲಿ ಆಡಲು ಎದುರು ನೋಡುತ್ತಿದ್ದೇನೆ ಎಂದು ದಿನೇಶ್ ಕಾರ್ತಿಕ್ ಹೇಳಿರುವುದಾಗಿ ಸ್ಪೋರ್ಟ್ಸ್‌ಸ್ಟಾರ್ ವರದಿ ಮಾಡಿದೆ.
ಅಷ್ಟೇ ಅಲ್ಲ, ವಿಜಯ್ ಹಜಾರೆ ಟ್ರೋಫಿ ಜೊತೆಗೆ ಕಾರ್ತಿಕ್ ಸೈಯದ್ ಮುಷ್ತಾಕ್ ಅಲಿ ಟೂರ್ನಮೆಂಟ್‌ನಲ್ಲಿ ಆಡಲು ಬಯಸಿದ್ದಾರೆ. ಈ ಎರಡೂ ಟೂರ್ನಿಗಳಲ್ಲಿ ಆಡುವ ಮೂಲಕ ಮುಂಬರುವ ಐಪಿಎಲ್ ಟೂರ್ನಿಗೆ ಅಭ್ಯಾಸ ನಡೆಸುವುದಾಗಿ ಕಾರ್ತಿಕ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಅಶ್ವಿನ್ ನಾಯಕನಾಗಬೇಕು
ಅಲ್ಲದೆ ಏಷ್ಯನ್ ಗೇಮ್ಸ್ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿರುವ ಕಾರ್ತಿಕ್, ಏಷ್ಯನ್ ಗೇಮ್ಸ್‌ನಲ್ಲಿ ಆಶ್ವಿನ್ಗೆ ತಂಡದ ನಾಯಕತ್ವ ನೀಡಬೇಕು ಎಂದಿದ್ದಾರೆ. ವಾಸ್ತವವಾಗಿ ಈ ವರ್ಷ ಏಕದಿನ ವಿಶ್ವಕಪ್ ಇರುವುದರಿಂದ ಭಾರತ ಬಿ ತಂಡವನ್ನು ಏಷ್ಯನ್ ಗೇಮ್ಸ್‌ಗೆ ಕಳುಹಿಸಲು ಬಿಸಿಸಿಐ ಚಿಂತಿಸಿದೆ. ಸದ್ಯದ ವರದಿ ಪ್ರಕಾರ ತಂಡದ ನಾಯಕತ್ವವನ್ನು ಶಿಖರ್ ಧವನ್ಗೆ ನೀಡಲಾಗುವುದು ಎಂಬ ಮಾತು ಕೂಡ ಕೇಳಿಬರುತ್ತಿದೆ. ಆದರೆ ಬಿಸಿಸಿಐ ತಂಡ ಪ್ರಕಟಿಸುವುದಕ್ಕೂ ಮುನ್ನ ಈ ಬಗ್ಗೆ ಮಾತನಾಡಿರುವ ದಿನೇಶ್ ಕಾರ್ತಿಕ್, ಏಷ್ಯನ್ ಗೇಮ್ಸ್‌ನಲ್ಲಿ ಆರ್. ಅಶ್ವಿನ್ ತಂಡದ ನಾಯಕನಾಗಲು ಅರ್ಹರು. “ಬಿಸಿಸಿಐ ಏಷ್ಯನ್ ಗೇಮ್ಸ್‌ಗೆ ಬಿ ತಂಡವನ್ನು ಕಳುಹಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ ಅಶ್ವಿನ್ ಏಕದಿನ ವಿಶ್ವಕಪ್ನ ಭಾಗವಾಗಿರದಿದ್ದರೆ, ಬಿಸಿಸಿಐ ಏಷ್ಯನ್ ಗೇಮ್ಸ್‌ನಲ್ಲಿ ಅಶ್ವಿನ್ ಅವರನ್ನು ನಾಯಕನನ್ನಾಗಿ ಮಾಡುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ” ಎಂದು ಹೇಳುವ ಮೂಲಕ ಅಶ್ವಿನ್ ಪರ ಕಾರ್ತಿಕ್ ಬ್ಯಾಟ್ ಬೀಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:01 am, Sun, 2 July 23