ಕಳೆದ ಕೆಲವು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ (India and Pakistan) ನಡುವಿನ ಹದಗೆಟ್ಟ ರಾಜಕೀಯ ಸಂಬಂಧದಿಂದಾಗಿ ಕ್ರಿಕೆಟ್ ಸಂಬಂಧವೂ ಹದಗೆಟ್ಟಿದೆ. ಎರಡು ದೇಶಗಳು ಪರಸ್ಪರ ದ್ವಿಪಕ್ಷೀಯ ಸರಣಿಯನ್ನು ಆಡುವುದನ್ನು ಬಿಟ್ಟು ಬಹಳ ವರ್ಷಗಳೇ ಕಳೆದಿವೆ. ಐಸಿಸಿ ಈವೆಂಟ್ಗಳಲ್ಲಿ ಮಾತ್ರ ಈ ಎರಡು ತಂಡಗಳು ಮುಖಾಮುಖಿಯಾಗುವುದನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಾರೆ. ಆದಾಗ್ಯೂ, ಮುಂಬರುವ ವರ್ಷದಲ್ಲಿ ಈ ಅವಕಾಶಕ್ಕೂ ಕಲ್ಲುಬೀಳುವ ಸಾಧ್ಯತೆ ಇದೆ. ಮುಂದಿನ ವರ್ಷ ಏಷ್ಯಾಕಪ್ (Asia Cup) ಪಾಕಿಸ್ತಾನದಲ್ಲಿ ನಡೆದರೆ, ಏಕದಿನ ವಿಶ್ವಕಪ್ (ODI World Cup) ಭಾರತದಲ್ಲಿ ನಡೆಯಲಿದೆ. ಆದರೆ ಪಾಕಿಸ್ತಾನದಲ್ಲಿ ನಡೆಯಲ್ಲಿರುವ ಏಷ್ಯಾಕಪ್‌ಗೆ ಟೀಂ ಇಂಡಿಯಾ ಹೋಗುವುದಿಲ್ಲ ಎಂಬುದು ಈಗಾಗಲೇ ಧೃಡಪಟ್ಟಿದೆ. ಈಗ ಭಾರತದ ಈ ನಿಲುವಿಗೆ ತಿರುಗೇಟು ನೀಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಮೀಜ್ ರಾಜಾ (Rameez Raja), ಒಂದು ವೇಳೆ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ, ನಾವು ಕೂಡ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಕಳೆದ ಬಾರಿಯೂ ಸಹ ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನಕ್ಕೆ ನೀಡಲಾಗಿತ್ತು. ಆದರೆ ಭಾರತ ಬರುವುದಿಲ್ಲ ಎಂಬ ಕಾರಣಕ್ಕಾಗಿ ಈ ಟೂರ್ನಿಯನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಸರ್ಕಾರದಿಂದ ಅನುಮತಿ ಸಿಗುವವರೆಗೆ ಪಾಕಿಸ್ತಾನ ಪ್ರವಾಸ ಮಾಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿದೆ. ಅದೇ ಸಮಯದಲ್ಲಿ ಪಾಕಿಸ್ತಾನ ಕೂಡ ಟೀಂ ಇಂಡಿಯಾ ಬರದಿದ್ದರೆ ನಮ್ಮ ತಂಡವೂ ಕೂಡ ಏಕದಿನ ವಿಶ್ವಕಪ್‌ಗೆ ಬರುವುದಿಲ್ಲ ಎಂಬ ಬೆದರಿಕೆ ಹಾಕಿದೆ.
ಇದನ್ನೂ ಓದಿ: Shreyas Iyer: ಕಳೆದ 8 ಇನ್ನಿಂಗ್ಸ್ಗಳಲ್ಲಿ ಬರೋಬ್ಬರಿ 512 ರನ್; ಏಕದಿನ ಮಾದರಿಯಲ್ಲಿ ಶ್ರೇಯಸ್ಗಿಲ್ಲ ಸರಿಸಾಟಿ..!
ಪಾಕಿಸ್ತಾನ ತಂಡ ವಿಶ್ವಕಪ್ ಆಡಲು ಭಾರತಕ್ಕೆ ಬರುವುದಿಲ್ಲ
ಈ ಬಗ್ಗೆ ರಮೀಜ್ ರಾಜಾ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸದಿದ್ದರೆ ಅದನ್ನು ಯಾರು ನೋಡುತ್ತಾರೆ?. ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಭಾರತ ತಂಡ ಇಲ್ಲಿಗೆ ಬಂದರೆ ಮಾತ್ರ ಪಾಕಿಸ್ತಾನ ತಂಡ ಭಾರತಕ್ಕೆ ಹೋಗಿ ವಿಶ್ವಕಪ್ ಆಡಲಿದೆ. ಒಂದು ವೇಳೆ ಟೀಂ ಇಂಡಿಯಾ ಬರದಿದ್ದರೆ, ಅವರು ನಾವಿಲ್ಲದೆ (ಪಾಕಿಸ್ತಾನ ತಂಡ) ವಿಶ್ವಕಪ್ ಆಡಬೇಕಾಗುತ್ತದೆ. ನಾವೂ ಕೂಡ ಕಠಿಣ ನಿಲುವು ತೆಗೆದುಕೊಳ್ಳಲು ಬದ್ಧರಿದ್ದೇವೆ. ನಮ್ಮ ತಂಡ ಉತ್ತಮ ಆಟ ಪ್ರದರ್ಶಿಸುತ್ತಿದೆ. ಅಲ್ಲದೆ ನಾವು ನಮ್ಮ ಮಂಡಳಿಯ ಆರ್ಥಿಕ ಸ್ಥಿತಿಯನ್ನು ಸಹ ಸುಧಾರಿಸಬೇಕಾಗಿದೆ. ನಮ್ಮ ತಂಡ ಉತ್ತಮವಾಗಿ ಆಡಿದರೆ ಮಾತ್ರ ಅದು ಸಂಭವಿಸುತ್ತದೆ. ಇದಕ್ಕೆ ಪೂರಕವೆಂಬಂತೆ ನಮ್ಮ ತಂಡ 2021ರ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಿದೆ. 2022 ರ ಏಷ್ಯಾಕಪ್‌ನಲ್ಲಿಯೂ ನಾವು ಭಾರತವನ್ನು ಸೋಲಿಸಿದ್ದೇವೆ. ಒಂದು ವರ್ಷದ ಅವಧಿಯಲ್ಲಿ ನಾವು ಬಿಲಿಯನ್ ಡಾಲರ್ ತಂಡವನ್ನು ಎರಡು ಬಾರಿ ಸೋಲಿಸಿದ್ದೇವೆ ಎಂದಿದ್ದಾರೆ.
2008ರ ನಂತರ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಿಲ್ಲ
ಭಾರತ ಕೊನೆಯ ಬಾರಿಗೆ 2008ರಲ್ಲಿ ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಪಾಕಿಸ್ತಾನಿ ತಂಡ ಕೂಡ 2016 ರಲ್ಲಿ ಐಸಿಸಿ ಟಿ20 ವಿಶ್ವಕಪ್‌ಗಾಗಿ ಕೊನೆಯ ಬಾರಿಗೆ ಭಾರತಕ್ಕೆ ಬಂದಿತ್ತು. ಏಷ್ಯಾಕಪ್ ಹೊರತಾಗಿ 2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸುತ್ತಿರುವುದರಿಂದ ಭಾರತಕ್ಕೆ ಇದು ನುಂಗಲಾರದ ಬಿಸಿ ತುಪ್ಪವಾಗಿದೆ. 2008ರ ನಂತರ ಮೊದಲ ಬಾರಿಗೆ ಪಾಕಿಸ್ತಾನ ಐಸಿಸಿ ಟೂರ್ನಿಯನ್ನು ಆಯೋಜಿಸಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Sat, 26 November 22