
ಟಿ20 ವಿಶ್ವಕಪ್ ಬಳಿಕ ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆ ನಡೆದಿದೆ. 2025 ರ ಫೆಬ್ರವರಿ 19 ರಿಂದ ಮಾರ್ಚ್ 9 ರ ನಡುವೆ ನಡೆಯಲ್ಲಿರುವ ಈ ಸಮರಕ್ಕೆ ಪಾಕಿಸ್ತಾನ ಆತಿಥ್ಯವಹಿಸುತ್ತಿದೆ. ಆದರೆ, ಈ ಟೂರ್ನಿಯಲ್ಲಿ ಭಾಗವಹಿಸಲು ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದು ಖಚಿತವಾಗಿಲ್ಲ. ಹೀಗಾಗಿ ಏಷ್ಯಾಕಪ್ನಂತೆಯೇ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಅಂದರೆ ಭಾರತದ ಪಂದ್ಯಗಳನ್ನು ದುಬೈ ಅಥವಾ ಶ್ರೀಲಂಕಾದಂತಹ ತಟಸ್ಥ ಸ್ಥಳಗಳಲ್ಲಿ ನಡೆಸಬೇಕೆಂದು ಬಿಸಿಸಿಐ ಕೋರಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಮಾಜಿ ನಾಯಕ ಶಾಹಿದ್ ಅಫ್ರಿದಿ ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾ ಬಗ್ಗೆ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ.
ಮೊದಲು ಚಾಂಪಿಯನ್ಸ್ ಟ್ರೋಫಿಯ ಬಗ್ಗೆ ಮಾತನಾಡಿದ ಶಾಹಿದ್ ಅಫ್ರಿದಿ, ‘ನಾನು ಭಾರತ ತಂಡವನ್ನು ಸ್ವಾಗತಿಸುತ್ತೇನೆ. ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಬೇಕು. ಪಾಕಿಸ್ತಾನ ತಂಡವೂ ಪ್ರವಾಸ ಕೈಗೊಂಡಾಗ ಭಾರತದಲ್ಲಿ ಗೌರವ ಮತ್ತು ಪ್ರೀತಿ ಸಿಗುತ್ತಿತ್ತು. ಅದೇ ರೀತಿ ಭಾರತ ತಂಡ ಪಾಕಿಸ್ತಾನಕ್ಕೆ ಬಂದಾಗ ಅವರಿಗೂ ಪ್ರೀತಿ, ಗೌರವ ಸಿಕ್ಕಿತು. ಎಲ್ಲರೂ ತುಂಬಾ ಎಂಜಾಯ್ ಮಾಡಿದರು. ಕ್ರಿಕೆಟಿಗರ ಪ್ರವಾಸಗಳನ್ನು ರಾಜಕೀಯದಿಂದ ದೂರವಿಡಬೇಕು. ದೇಶದಲ್ಲಿ ಪರಸ್ಪರ ಕ್ರಿಕೆಟ್ ಆಡುವುದಕ್ಕಿಂತ ಉತ್ತಮ ರಾಜಕೀಯ ಮತ್ತೊಂದಿಲ್ಲ. ಕ್ರಿಕೆಟ್‌ಗಿಂತ ಉತ್ತಮ ರಾಜತಾಂತ್ರಿಕತೆ ಇನ್ನೊಂದಿಲ್ಲ ಎಂದು ನಾನು ಯಾವಾಗಲೂ ಹೇಳುತ್ತೇನೆ’ ಎಂದರು.
ಇನ್ನು ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ಶಾಹಿದ್, ‘ವಿರಾಟ್ ಕೊಹ್ಲಿ ಪಾಕಿಸ್ತಾನದಲ್ಲಿ ಆಡಿದರೆ ಭಾರತದಲ್ಲಿ ಸಿಕ್ಕ ಪ್ರೀತಿಯನ್ನು ಮರೆತು ಬಿಡುತ್ತಾರೆ. ವಿರಾಟ್ ಕೊಹ್ಲಿಗೆ ಭಾರತದಲ್ಲಿ ಸಾಕಷ್ಟು ಕ್ರೇಜ್ ಇದೆ. ಪಾಕಿಸ್ತಾನದ ಜನರು ಅವರನ್ನು ತುಂಬಾ ಇಷ್ಟಪಡುತ್ತಾರೆ. ಅವರು ನನ್ನ ನೆಚ್ಚಿನ ಆಟಗಾರ ಕೂಡ. ಆದರೆ ಕೊಹ್ಲಿ ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತಿಯಾಗಬಾರದಿತ್ತು. ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದು ಫಿಟ್ ಕೂಡ ಆಗಿದ್ದಾರೆ. ಹೀಗಾಗಿ ಅವರು ಟಿ20 ಆಡಬೇಕು. ಅವರ ಉಪಸ್ಥಿತಿಯು ಇತರ ಆಟಗಾರರಿಗೆ ಬೆಂಬಲವನ್ನು ನೀಡುತ್ತದೆ. ವಿರಾಟ್‌ನಿಂದ ಕಲಿಯಬಲ್ಲವರು ಬೇರೆಯವರಿಂದ ಕಲಿಯಲು ಸಾಧ್ಯವಿಲ್ಲ’ ಎಂದಿದ್ದಾರೆ.
2008 ರ ಏಷ್ಯಾಕಪ್ ಮತ್ತು ಕಳೆದ ವರ್ಷ ನಡೆದ ಏಷ್ಯಾಕಪ್ನ ಕೆಲವು ಪಂದ್ಯಗಳನ್ನು ಆತಿಥ್ಯ ವಹಿಸಿದ್ದರೂ, 1996 ರ ನಂತರ ಪಾಕಿಸ್ತಾನವು ಪ್ರಮುಖ ಐಸಿಸಿ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದು ಇದೇ ಮೊದಲು. ಐಸಿಸಿ ಟೂರ್ನಿಗಾಗಿ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಬಿಸಿಸಿಐ ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ. ಮಂಡಳಿಯ ಈ ನಿರ್ಧಾರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಬಿಸಿಸಿಐ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ, ಆದರೆ ತಂಡವು ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ