ಮುಂದಿನ ವರ್ಷ ಜನವರಿ 6 ರಿಂದ ಯುಎಇಯಲ್ಲಿ ನಡೆಯಲಿರುವ ಇಂಟರ್ನ್ಯಾಷನಲ್ ಲೀಗ್ ಟಿ20 (ILT20) ಗಾಗಿ ಭರ್ಜರಿ ಸಿದ್ದತೆಗಳು ಶುರುವಾಗಿದೆ. ಈಗಾಗಲೇ ಈ ಲೀಗ್ಗಾಗಿ 6 ತಂಡಗಳನ್ನು ಘೋಷಿಸಲಾಗಿದೆ. ವಿಶೇಷ ಎಂದರೆ ಈ ಆರು ತಂಡಗಳಲ್ಲಿ ಮೂರು ತಂಡಗಳನ್ನು ಕ್ರಮವಾಗಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗಳು ಖರೀದಿಸಿದೆ. ಇನ್ನು ಒಂದು ತಂಡವನ್ನು ಅದಾನಿ ಗ್ರೂಪ್ ತನ್ನದಾಗಿಸಿಕೊಂಡಿದೆ. ಅಂದರೆ ಯುಎಇ ಟಿ20 ಲೀಗ್ನ 4 ತಂಡಗಳಿಗೆ ಭಾರತೀಯ ಫ್ರಾಂಚೈಸಿಗಳೇ ಬಂಡವಾಳ ಹೂಡಲಿದ್ದಾರೆ. ಇದೇ ಕಾರಣದಿಂದಾಗಿ ಇದೀಗ ಇಂಟರ್ನ್ಯಾಷನಲ್ ಲೀಗ್ ಟಿ20 ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ಈ ಲೀಗ್ಗಾಗಿ ಇದೀಗ ಆಟಗಾರರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಅದರ ಮೊದಲ ಹಂತವಾಗಿ ಆಟಗಾರರ ಮಾರ್ಕ್ಯೂ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಯಾವುದೇ ಆಟಗಾರರಿಲ್ಲ ಎಂಬುದು ವಿಶೇಷ. ಬಿಸಿಸಿಐ ತನ್ನ ಆಟಗಾರರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶ ನೀಡುವುದಿಲ್ಲ. ಮತ್ತೊಂದೆಡೆ ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ಮತ್ತು ಬಿಸಿಬಿ (ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ) ಯುಎಇ ಟಿ20 ಲೀಗ್‌ನಲ್ಲಿ ಭಾಗವಹಿಸಲು ಅನುಮತಿ ನಿರಾಕರಿಸಿವೆ. ಇನ್ನು ಆಸ್ಟ್ರೇಲಿಯಾ ಆಟಗಾರರು ಭಾಗವಹಿಸಲಿದ್ದಾರಾ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಈಗಾಗಲೇ ಮಾರ್ಕ್ಯೂ ಲೀಸ್ಟ್ ಸಿದ್ಧವಾಗಿದ್ದು, ಈ ಪಟ್ಟಿಯಲ್ಲಿ ಸ್ಟಾರ್ ಆಟಗಾರರ ದಂಡೇ ಇರುವುದು ವಿಶೇಷ. ಈ ಪಟ್ಟಿಯಲ್ಲಿರುವ ಆಟಗಾರರು ಯಾರೆಲ್ಲಾ ನೋಡೋಣ…
ಮೊಯಿನ್ ಅಲಿ, ಆಂಡ್ರೆ ರಸೆಲ್, ಡೇವಿಡ್ ಮಲಾನ್, ವನಿಂದು ಹಸರಂಗ, ಸುನಿಲ್ ನರೈನ್, ಎವಿನ್ ಲೂಯಿಸ್, ಕಾಲಿನ್ ಮುನ್ರೊ, ಫ್ಯಾಬಿಯನ್ ಅಲೆನ್, ಸ್ಯಾಮ್ ಬಿಲ್ಲಿಂಗ್ಸ್, ಟಾಮ್ ಕರ್ರನ್, ಅಲೆಕ್ಸ್ ಹೇಲ್ಸ್, ದುಷ್ಮಂತ ಚಮೀರಾ, ಶಿಮ್ರಾನ್ ಹೆಟ್ಮೆಯರ್, ಅಕೆಲ್ ಹೊಸೈಲ್ , ಕ್ರಿಸ್ ಜೋರ್ಡಾನ್, ಟಾಮ್ ಬ್ಯಾಂಟನ್, ಸಂದೀಪ್ ಲಾಮಿಚಾನೆ, ಕ್ರಿಸ್ ಲಿನ್, ರೋವ್ಮನ್ ಪೊವೆಲ್, ಭಾನುಕಾ ರಾಜಪಕ್ಸೆ. ಪ್ರಸ್ತುತ ಮಾಹಿತಿ ಪ್ರಕಾರ ಈ ಸ್ಟಾರ್ ಆಟಗಾರರನ್ನು ಮೊದಲ ಸುತ್ತಿನ ಹರಾಜಿನಲ್ಲಿ ಖರೀದಿಸಲಾಗುತ್ತದೆ. ಇದಾದ ಬಳಿಕ ಉಳಿದ ಆಟಗಾರರ ಖರೀದಿ ಪ್ರಕ್ರಿಯೆಗಳು ನಡೆಯಲಿದೆ.
6 ತಂಡ 34 ಪಂದ್ಯ:
ಯುಎಇ ಟಿ20 ಲೀಗ್‌ನಲ್ಲಿ 6 ತಂಡಗಳ ನಡುವೆ ಒಟ್ಟು 34 ಪಂದ್ಯಗಳನ್ನು ಆಡಲಾಗುತ್ತದೆ . ಈ ತಂಡಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅದಾನಿ ಸ್ಪೋರ್ಟ್ಸ್‌ಲೈನ್, ಕೋಲ್ಕತ್ತಾ ನೈಟ್ ರೈಡರ್ಸ್, ಲ್ಯಾನ್ಸರ್ ಕ್ಯಾಪಿಟಲ್, ಜಿಎಂಆರ್ ಗ್ರೂಪ್ ಮತ್ತು ಕ್ಯಾಪ್ರಿ ಗ್ಲೋಬಲ್ ಕಂಪೆನಿಗಳು ಖರೀದಿಸಿದೆ.