ಬಹುನಿರೀಕ್ಷಿತ ಏಷ್ಯಾಕಪ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಶ್ರೀಲಂಕಾದಲ್ಲಿ ಆಂತರಿಕ ಬಿಕ್ಕಟ್ಟು ಎದುರಾದ ಕಾರಣ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದ್ದು, ಇದೇ ಆಗಸ್ಟ್ 27 ರಂದು ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ.
ಭಾರತ ತನ್ನ ಅಭಿಯಾನವನ್ನು ಆಗಸ್ಟ್ 28ರಂದು ನಡೆಯಲಿರುವ ಹೈ ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಶುರುಮಾಡಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆಯಲಿದ್ದಾರೆ.
ಪಾಕ್ ವಿರುದ್ಧ ತನ್ನ 100ನೇ ಟಿ20 ಅಂತರರಾಷ್ಟ್ರೀಯ ಪಂದ್ಯವನ್ನಾಡಲಿರುವ ಕೊಹ್ಲಿ ಕ್ರಿಕೆಟ್ ನ ಮೂರು ಫಾರ್ಮೆಟ್ ನಲ್ಲಿ 100 ಪಂದ್ಯಗಳನ್ನಾಡಿದ ವಿಶ್ವದ ಎರಡನೇ ಕ್ರಿಕೆಟಿಗ ಎಂಬ ಸಾಧನೆ ಮಾಡಲಿದ್ದಾರೆ. ಕೊಹ್ಲಿಗೂ ಮೊದಲು ನ್ಯೂಜಿಲೆಂಡ್ ನ ಮಾಜಿ ಆಟಗಾರ ರಾಸ್ ಟೇಲರ್ ಮೂರು ಫಾರ್ಮೆಟ್ ನಲ್ಲಿ 100 ಪಂದ್ಯಗಳನ್ನಾಡಿದ ಮೊದಲ ಕ್ರಿಕೆಟಿಗ ಎಂಬ ಸಾಧನೆ ಮಾಡಿದ್ದರು.
33 ವರ್ಷದ ವಿರಾಟ್ ಕೊಹ್ಲಿ 99 ಟಿ20 ಪಂದ್ಯಗಳಲ್ಲಿ 91 ಇನ್ನಿಂಗ್ಸ್‌ಗಳಲ್ಲಿ 50 ಸರಾಸರಿಯಲ್ಲಿ 3308 ರನ್ ಗಳಿಸಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದವರಲ್ಲಿ ವಿರಾಟ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 30 ಅರ್ಧಶತಕಗಳನ್ನು ಗಳಿಸಿದ್ದಾರೆ.
ಕೊಹ್ಲಿ ಪಾಕಿಸ್ತಾನದ ವಿರುದ್ಧ ಈವರೆಗೂ ಉತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದಿದ್ದಾರೆ. ವಿರಾಟ್ ಕೊಹ್ಲಿ ಪಾಕ್ ವಿರುದ್ಧ 7 ಪಂದ್ಯಗಳಲ್ಲಿ 78ರ ಸರಾಸರಿಯಲ್ಲಿ 311 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕ ಸಹ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 118 ಆಗಿದೆ.
ಏಷ್ಯಾ ಕಪ್ ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಏಷ್ಯಾಕಪ್ ನಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಮತ್ತೊಂದು ಕ್ವಾಲಿಫೈಯರ್ ತಂಡವೂ ಭಾಗಿಯಾಗಲಿದೆ. ಆಗಸ್ಟ್ 27ರಿಂದ ಟೂರ್ನಿ ಆರಂಭಗೊಳ್ಳಲಿದ್ದು, ಸೆಪ್ಟೆಂಬರ್ 11ರವರೆಗೆ ನಡೆಯಲಿದೆ.
Published On - 7:26 am, Thu, 11 August 22