
ಟೀಮ್ ಇಂಡಿಯಾದ ಯುವ ದಾಂಡಿಗ ತಿಲಕ್ ವರ್ಮಾ ಅಬ್ಬರ ಮುಂದುವರೆದಿದೆ. ಏಷ್ಯಾಕಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ಪರ ಅಮೂಲ್ಯ 69 ರನ್ ಬಾರಿಸಿದ್ದ ತಿಲಕ್ ಇದೀಗ ಮತ್ತೊಂದು ಅರ್ಧಶತಕ ಸಿಡಿಸಿದ್ದಾರೆ. ಈ ಬಾರಿ ಅರ್ಧಶತಕ ಬಾರಿಸಿರುವುದು ಏಕದಿನ ಪಂದ್ಯದಲ್ಲಿ ಎಂಬುದಷ್ಟೇ ವ್ಯತ್ಯಾಸ.
ಕಾನ್ಪುರ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ಪರ ಕಣಕ್ಕಿಳಿದ ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡದ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಪ್ರಭ್ಸಿಮ್ರಾನ್ ಸಿಂಗ್ (1) ಹಾಗೂ ಅಭಿಷೇಕ್ ಶರ್ಮಾ (0) ಬೇಗನೆ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಿಲಕ್ ವರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ ತಿಲಕ್ ಆ ಬಳಿಕ ಆಸ್ಟ್ರೇಲಿಯಾ ಬೌಲರ್ಗಳ ಬೆಂಡೆತ್ತಿದರು. ಈ ಮೂಲಕ ಅರ್ಧಶತಕ ಪೂರೈಸಿದರು. ಇನ್ನು ಅರ್ಧಶತಕದ ಬಳಿಕ ಕೂಡ ತಂಡಕ್ಕೆ ಆಸರೆಯಾಗಿ ನಿಂತ ಯುವ ದಾಂಡಿಗ ಟೀಮ್ ಇಂಡಿಯಾ ಸ್ಕೋರ್ 200ರ ಗಡಿದಾಟುವಲ್ಲಿ ಪ್ರಮುಖ ಪಾತ್ರವಹಿಸಿದರು.
ಆದರೆ 122 ಎಸೆತಗಳನ್ನು ಎದುರಿಸಿದ ತಿಲಕ್ ವರ್ಮಾ 4 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 94 ರನ್ ಗಳಿಸಿದ್ದ ವೇಳೆ ಔಟಾದರು. ಈ ಮೂಲಕ ಶತಕ ಬಾರಿಸುವ ಅವಕಾಶವನ್ನು ತಪ್ಪಿಸಿಕೊಂಡರು. ಇನ್ನು ಅಂತಿಮ ಓವರ್ಗಳ ವೇಳೆ ರಿಯಾನ್ ಪರಾಗ್ 58 ರನ್ ಬಾರಿಸುವ ಮೂಲಕ ಮಿಂಚಿದರು. ಈ ಮೂಲಕ ಭಾರತ ಎ ತಂಡವು 45.5 ಓವರ್ಗಳಲ್ಲಿ 246 ರನ್ಗಳಿಸಿ ಆಲೌಟ್ ಆಯಿತು.
ಭಾರತ ಎ ತಂಡದ ಇನಿಂಗ್ಸ್ ಅಂತ್ಯದ ಬೆನ್ನಲ್ಲೇ ಮಳೆ ಬಂದಿದ್ದರಿಂದ ಪಂದ್ಯವು ಕೆಲ ಕಾಲ ಸ್ಥಗಿತಗೊಂಡಿತು. ಆ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಆಸ್ಟ್ರೇಲಿಯಾ ತಂಡಕ್ಕೆ 25 ಓವರ್ಗಳಲ್ಲಿ 160 ರನ್ಗಳ ಗುರಿ ನೀಡಲಾಯಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಪರ ಮೆಕೆಂಝಿ ಹಾರ್ವೆ 49 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ ಅಜೇಯ 70 ರನ್ ಬಾರಿಸಿದರು.
ಇನ್ನು ಕೂಪರ್ ಕೊನೊಲಿ 31 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 50 ರನ್ ಸಿಡಿಸಿದರು. ಈ ಮೂಲಕ 16.4 ಓವರ್ಗಳಲ್ಲಿ 160 ರನ್ ಬಾರಿಸಿ ಆಸ್ಟ್ರೇಲಿಯಾ ಎ ತಂಡವು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಭಾರತ ಎ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ , ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್) , ಶ್ರೇಯಸ್ ಅಯ್ಯರ್ (ನಾಯಕ) , ರಿಯಾನ್ ಪರಾಗ್ , ತಿಲಕ್ ವರ್ಮಾ , ನಿಶಾಂತ್ ಸಿಂಧು , ಸೂರ್ಯಾಂಶ್ ಶೆಡ್ಗೆ , ಹರ್ಷಿತ್ ರಾಣಾ , ಯುಧ್ವೀರ್ ಸಿಂಗ್ ಚರಕ್ , ಅರ್ಷದೀಪ್ ಸಿಂಗ್ , ರವಿ ಬಿಷ್ಣೋಯ್.
ಇದನ್ನೂ ಓದಿ: T20 World Cup 2026: ಟಿ20 ವಿಶ್ವಕಪ್ಗೆ 17 ತಂಡಗಳು ಎಂಟ್ರಿ
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಮೆಕೆಂಝಿ ಹಾರ್ವೆ , ಜೇಕ್ ಫ್ರೇಸರ್-ಮೆಕ್‌ಗುರ್ಕ್ (ವಿಕೆಟ್ ಕೀಪರ್) , ಲಾಚ್ಲಾನ್ ಹರ್ನೆ , ಕೂಪರ್ ಕೊನೊಲಿ , ಜ್ಯಾಕ್ ಎಡ್ವರ್ಡ್ಸ್ (ನಾಯಕ) , ಲಾಚ್ಲಾನ್ ಶಾ , ಹ್ಯಾರಿ ಡಿಕ್ಸನ್ , ಲಿಯಾಮ್ ಸ್ಕಾಟ್ , ವಿಲ್ ಸದರ್ಲ್ಯಾಂಡ್ , ಸ್ಯಾಮ್ ಎಲಿಯಟ್ , ತನ್ವೀರ್ ಸಂಘ.