VIDEO: ಮಿಂಚಿನ ವೇಗ, ಹದ್ದಿನ ಕಣ್ಣು… ರಮಣ್​ದೀಪ್ ಹಿಡಿದ ಕ್ಯಾಚ್ ನೋಡಿ ದಂಗಾದ ಪ್ರೇಕ್ಷಕರು..!

|

Updated on: Oct 20, 2024 | 8:55 AM

India A vs Pakistan A: ಉದಯೋನ್ಮುಖ ತಂಡಗಳ ನಡುವಣ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಎ ತಂಡ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ಎ ತಂಡವನ್ನು 7 ರನ್​ಗಳಿಂದ ಸೋಲಿಸುವ ಮೂಲಕ ಟೀಮ್ ಇಂಡಿಯಾ 2 ಅಂಕಗಳನ್ನು ಕಲೆಹಾಕಿದೆ.

VIDEO: ಮಿಂಚಿನ ವೇಗ, ಹದ್ದಿನ ಕಣ್ಣು... ರಮಣ್​ದೀಪ್ ಹಿಡಿದ ಕ್ಯಾಚ್ ನೋಡಿ ದಂಗಾದ ಪ್ರೇಕ್ಷಕರು..!
Ramandeep Singh
Follow us on

ಒಮಾನ್​ನಲ್ಲಿ ನಡೆಯುತ್ತಿರುವ ಎಮರ್ಜಿಂಗ್ ಏಷ್ಯಾಕಪ್ ಟಿ20 ಟೂರ್ನಿಯ 4ನೇ ಪಂದ್ಯದಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದು ಟೀಮ್ ಇಂಡಿಯಾದ ರಮಣ್​ದೀಪ್ ಸಿಂಗ್ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಭಾರತ ಎ ಮತ್ತು ಪಾಕಿಸ್ತಾನ್ ಎ ತಂಡಗಳ ನಡುವಣ ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ತಿಲಕ್ ವರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡಕ್ಕೆ ಅಭಿಷೇಕ್ ಶರ್ಮಾ (35) ಹಾಗೂ ಪ್ರಭ್​ಸಿಮ್ರಾನ್ (36) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ 44 ರನ್ ಬಾರಿಸಿದರು. ಈ ಮೂಲಕ ಭಾರತ ಎ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು.

184 ರನ್​ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಎ ತಂಡವು ಉತ್ತಮ ಆರಂಭವೇನು ಪಡೆದಿರಲಿಲ್ಲ. ಇದಾಗ್ಯೂ ಯಾಸಿರ್ ಖಾನ್ ಕ್ರೀಸ್ ಕಚ್ಚಿ ನಿಲ್ಲುವ ಮೂಲಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಇದರ ನಡುವೆ ನಿಶಾಂತ್ ಸಿಂಧು ಎಸೆದ 9ನೇ ಓವರ್​ನ ಮೊದಲ ಎಸೆತದಲ್ಲಿ ಯಾಸಿರ್ ಖಾನ್ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿಯಾಗಿ ಬಾರಿಸಿದ್ದರು. ಇನ್ನೇನು ಚೆಂಡು ಬೌಂಡರಿ ಲೈನ್ ದಾಟಲಿದೆ ಅನ್ನುವಷ್ಟರಲ್ಲಿ ಮಿಂಚಿನ ವೇಗದಲ್ಲಿ ಬಂದ ರಮಣ್​ದೀಪ್ ಸಿಂಗ್ ಅದ್ಭುತ ಡೈವಿಂಗ್​ನೊಂದಿಗೆ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದರು.

ರಮಣ್​ದೀಪ್ ಅವರ ಈ ಮಿಂಚಿನ ಫೀಲ್ಡಿಂಗ್ ನೋಡಿ ಇಡೀ ಪ್ರೇಕ್ಷಕರು ಮೂಕವಿಸ್ಮಿತರಾದರು. ಇದೀಗ ಈ ಅದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಕ್ಯಾಚ್​ಗಳಲ್ಲಿ ಇದು ಕೂಡ ಒಂದು ಎಂದು ಅನೇಕರು ಬಣ್ಣಿಸಿದ್ದಾರೆ.

ರಮಣ್​ದೀಪ್ ಸಿಂಗ್ ಕ್ಯಾಚ್ ವಿಡಿಯೋ:

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 184 ರನ್​​ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ ಎ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ಎ ತಂಡ 7 ರನ್​ಗಳ ರೋಚಕ ಜಯ ಸಾಧಿಸಿದೆ.