ಸರ್ಫರಾಝ್ ಖಾನ್ ಬಾರಿಸಿದ ಸೆಂಚುರಿ ಯಾಕೆ ತುಂಬಾ ವಿಶೇಷವಾದದ್ದು ಗೊತ್ತಾ?
Sarfaraz Khan Records: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಯುವ ದಾಂಡಿಗ ಸರ್ಫರಾಝ್ ಖಾನ್ ಆಕರ್ಷಕ ಶತಕ ಬಾರಿಸಿ ಮಿಂಚಿದ್ದಾರೆ. ಈ ಶತಕವು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ ಸೆಂಚುರಿ ಎಂಬುದು ವಿಶೇಷ.
Updated on: Oct 20, 2024 | 8:19 AM

ಬೆಂಗಳೂರಿನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ಸರ್ಫರಾಝ್ ಖಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ 110 ಎಸೆತಗಳಲ್ಲಿ ಶತಕ ಪೂರೈಸಿದರು.

ಈ ಶತಕದ ಬಳಿಕ ಕೂಡ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಸರ್ಫರಾಝ್ ಖಾನ್ 195 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 18 ಫೋರ್ಗಳೊಂದಿಗೆ 150 ರನ್ ಬಾರಿಸಿದರು. ಈ ನೂರೈವತ್ತು ರನ್ಗಳು ಟೀಮ್ ಇಂಡಿಯಾ ಪಾಲಿಗೆ ತುಂಬಾ ವಿಶೇಷವಾದದ್ದು.

ಏಕೆಂದರೆ ಸರ್ಫರಾಝ್ ಖಾನ್ ಬಾರಿಸಿದ ಈ ಶತಕವು ಭಾರತದ ಪಾಲಿನ 550ನೇ ಸೆಂಚುರಿ ಎಂಬುದು ವಿಶೇಷ. ಅಂದರೆ ಟೀಮ್ ಇಂಡಿಯಾ ಪರ ಈವರೆಗೆ 550 ಟೆಸ್ಟ್ ಶತಕಗಳು ಮೂಡಿಬಂದಿವೆ. ಅದರಲ್ಲಿ 550ನೇ ಶತಕ ಬಾರಿಸಿದ್ದು ಸರ್ಫರಾಝ್ ಖಾನ್.

ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಮೊದಲ ಶತಕ ಬಾರಿಸಿದ್ದು ಲಾಲಾ ಅಮರನಾಥ್ (1933), 100ನೇ ಶತಕ ಸಿಡಿಸಿದ್ದು ಸುನಿಲ್ ಗವಾಸ್ಕರ್ (1977). ಹಾಗೆಯೇ 200ನೇ ಶತಕ ಮೂಡಿಬಂದಿದ್ದು ಮೊಹಮ್ಮದ್ ಅಝರುದ್ದೀನ್ (1990) ಬ್ಯಾಟ್ನಿಂದ. ಭಾರತದ 250ನೇ ಮತ್ತು 300ನೇ ಟೆಸ್ಟ್ ಶತಕ ಬಾರಿಸಿದ್ದು ಸಚಿನ್ ತೆಂಡೂಲ್ಕರ್ (1998,2002).

ಟೀಮ್ ಇಂಡಿಯಾದ 350ನೇ ಟೆಸ್ಟ್ ಶತಕ ವಿವಿಎಸ್ ಲಕ್ಷ್ಮಣ್ (2007) ಬ್ಯಾಟ್ನಿಂದ ಮೂಡಿಬಂದರೆ, 400ನೇ ಶತಕ ಬಾರಿಸಿದ್ದು ರಾಹುಲ್ ದ್ರಾವಿಡ್ (2010). ಇನ್ನು 450ನೇ ಸೆಂಚುರಿ ಸಿಡಿಸಿದ ಆಟಗಾರ ಅಜಿಂಕ್ಯ ರಹಾನೆ (2015).

ಭಾರತದ 500 ಟೆಸ್ಟ್ ಶತಕ ಮೂಡಿಬಂದಿದ್ದು ರನ್ ಮೆಷಿನ್ ವಿರಾಟ್ ಕೊಹ್ಲಿಯ (2018) ಬ್ಯಾಟ್ನಿಂದ ಎಂಬುದು ವಿಶೇಷ. ಇದೀಗ ಸರ್ಫರಾಝ್ ಖಾನ್ ಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾ 550 ಟೆಸ್ಟ್ ಶತಕಗಳ ಮೈಲುಗಲ್ಲನ್ನು ಮುಟ್ಟಿದೆ. ಅಂದರೆ ಭಾರತ ತಂಡದ ವಿಶೇಷ ಮೈಲುಗಲ್ಲಿನ ಶತಕ ಸಿಡಿಸುವ ಮೂಲಕ ಸರ್ಫರಾಝ್ ಖಾನ್ ಟೆಸ್ಟ್ನಲ್ಲಿ ತನ್ನ ಸೆಂಚುರಿ ಖಾತೆ ತೆರೆದಿರುವುದು ವಿಶೇಷ.









