ಕಿವೀಸ್ ವಿರುದ್ಧ ಪವರ್ ಪ್ಲೇನಲ್ಲೇ ಅಬ್ಬರಿಸಿದ ಭಾರತದ ಆರಂಭಿಕರು..!

ಭಾರತ vs ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ, ನ್ಯೂಜಿಲೆಂಡ್ 225 ರನ್ ಗಳಿಸಿ 226 ಗುರಿ ನೀಡಿತು. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಭಾರತ 6 ಓವರ್‌ಗಳಲ್ಲಿ 94 ರನ್ ಗಳಿಸಿ ಭರ್ಜರಿ ಆರಂಭ ಪಡೆಯಿತು. ಅಭಿಷೇಕ್ ಔಟಾದರೂ, ಆರಂಭಿಕರು ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು.

ಕಿವೀಸ್ ವಿರುದ್ಧ ಪವರ್ ಪ್ಲೇನಲ್ಲೇ ಅಬ್ಬರಿಸಿದ ಭಾರತದ ಆರಂಭಿಕರು..!
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್
Image Credit source: BCCI X

Updated on: Oct 22, 2026 | 3:58 PM

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 225 ರನ್ ಗಳಿಸಿ, ಭಾರತಕ್ಕೆ ಗೆಲ್ಲಲು 226 ರನ್‌ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಭರ್ಜರಿ ಆರಂಭ ಸಿಕ್ಕಿದೆ. ಆರಂಭಿಕರಾದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಮೊದಲ 6 ಓವರ್​ಗಳಲ್ಲೇ ತಂಡವನ್ನು 94 ರನ್​ಗಳಿಗೆ ಕೊಂಡೊಯ್ದಿದ್ದಾರೆ. ಆದರೆ ಪವರ್​ಪ್ಲೇಯ ಕೊನೆಯ ಓವರ್​ನಲ್ಲಿ ಅಂದರೆ 6ನೇ ಓವರ್​ನ 5ನೇ ಎಸೆತದಲ್ಲಿ ಅಭಿಷೇಕ್ ಶರ್ಮಾ ರೂಪದಲ್ಲಿ ಟೀಂ ಇಂಡಿಯಾ ತನ್ನ ಮೊದಲ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಆದಾಗ್ಯೂ ಆರಂಭಿಕರಿಬ್ಬರು ತಂಡಕ್ಕೆ ಭದ್ರ ಬುನಾದಿ ಹಾಕಿಕೊಡುವುಲ್ಲಿ ಯಶಸ್ವಿಯಾಗಿದ್ದಾರೆ.

ಭಾರತಕ್ಕೆ ಸ್ಫೋಟಕ ಆರಂಭ

225 ರನ್​ಗಳ ಗುರಿ ಬೆನ್ನಟ್ಟಿದ ಭಾರತ ಮೊದಲ ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 11 ರನ್ ಗಳಿಸಿ ಉತ್ತಮ ಆರಂಭ ಪಡೆಯಿತು. ಅಭಿಷೇಕ್ ಶರ್ಮಾ ಒಂದು ಸಿಕ್ಸರ್ ಮತ್ತು ಸಂಜು ಕೂಡ ಒಂದು ಬೌಂಡರಿ ಬಾರಿಸಿದರು. ಲಾಕಿ ಫರ್ಗುಸನ್ ಬೌಲ್ ಮಾಡಿದ ಮೂರನೇ ಓವರ್​ನಲ್ಲಿ ಒಟ್ಟು 22 ರನ್‌ಗಳು ಬಂದವು. ಇದರ ಫಲವಾಗಿ ಭಾರತ 3.1 ಓವರ್‌ಗಳಲ್ಲಿ 50 ರನ್‌ಗಳನ್ನು ತಲುಪಿತು. ಆ ಬಳಿಕ ಹೊಡಿಬಡಿ ಆಟ ಮುಂದುವರೆಸಿದ ಆರಂಭಿಕರು 5 ಓವರ್‌ಗಳಲ್ಲಿ ತಂಡವನ್ನು ವಿಕೆಟ್ ನಷ್ಟವಿಲ್ಲದೆ 82 ರನ್​ಗಳಿಗೆ ಕೊಂಡೊಯ್ದರು.

6 ಓವರ್​ಗಳಲ್ಲಿ 94 ರನ್

ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಸಂಜು ಸ್ಯಾಮ್ಸನ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ನ್ಯೂಜಿಲೆಂಡ್‌ನಲ್ಲಿ ಅವರ ಮೊದಲ ಮತ್ತು ಸತತ ಮೂರನೇ ಟಿ20 ಅರ್ಧಶತಕವಾಗಿತ್ತು. ಇತ್ತ ಸಂಜುಗೆ ಉತ್ತಮ ಸಾಥ್ ನೀಡುತ್ತಿದ್ದ ಅಭಿಷೇಕ್ ಶರ್ಮಾ 12 ಎಸೆತಗಳಲ್ಲಿ 29 ರನ್ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಮೈಕೆಲ್ ಬ್ರೇಸ್‌ವೆಲ್ ನ್ಯೂಜಿಲೆಂಡ್‌ಗೆ ಮೊದಲ ಬ್ರೇಕ್‌ಥ್ರೂ ನೀಡಿದರು. ಹೀಗಾಗಿ ಭಾರತ 93 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು.

ಕೈಕೊಟ್ಟ ಮಧ್ಯಮ ಕ್ರಮಾಂಕ

ಇವರಿಬ್ಬರ ಈ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ಭಾರತ 6.5 ಓವರ್‌ಗಳಲ್ಲಿ 1 ವಿಕೆಟ್‌ಗೆ 100 ರನ್‌ಗಳ ಗಡಿ ದಾಟಿತು. ಆದರೆ ಮೊದಲ ವಿಕೆಟ್ ಪತನದ ಬಳಿಕ ಭಾರತದ ಬ್ಯಾಟಿಂಗ್ ವಿಭಾಗ ಹಳಿ ತಪ್ಪಿತು. ಅಭಿಷೇಕ್ ವಿಕೆಟ್ ಬಳಿಕ ಮತ್ತೊಬ್ಬ ಆರಂಭಿಕ ಸಂಜು ಸ್ಯಾಮ್ಸನ್ ಕೂಡ ವಿಕೆಟ್ ಒಪ್ಪಿಸಿದರು. ಭಾರತ 115 ರನ್‌ಗಳಿಗೆ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. ಸಂಜು ಸ್ಯಾಮ್ಸನ್ 33 ಎಸೆತಗಳಲ್ಲಿ 67 ರನ್ ಗಳಿಸಿ ಔಟಾದರು. ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದಿದ್ದ ತಿಲಕ್ ವರ್ಮಾ 6 ರನ್ ಬಾರಿಸಿ ಔಟಾದರೆ, ಇಶಾನ್ ಕಿಶನ್ ಕೇವಲ 1 ರನ್​ಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಉತ್ತಮ ಆರಂಭದ ಹೊರತಾಗಿಯೂ ಭಾರತ ಇದೀಗ ಒತ್ತಡಕ್ಕೆ ಸಿಲುಕಿದೆ. ಎಲ್ಲಾ ಜವಾಬ್ದಾರಿ ನಾಯಕ ಶ್ರೇಯಸ್ ಅಯ್ಯರ್ ಮೇಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:33 pm, Thu, 22 October 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us