
ನಾರ್ಥಂಪ್ಟನ್ನಲ್ಲಿ ನಡೆದ ಭಾರತ ಅಂಡರ್-19 ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಅಂಡರ್-19 ತಂಡ ಭರ್ಜರಿ ಜಯ ಸಾಧಿಸಿದೆ. ಕೌಂಟಿ ಗ್ರೌಂಡ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಥಾಮಸ್ ರೆವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ಆಯುಷ್ ಮ್ಹಾತ್ರೆ (0) ಮೊದಲ ಎಸೆತದಲ್ಲೇ ಔಟಾದರು.
ಈ ವೇಳೆ ಜೊತೆಗೂಡಿದ ವೈಭವ್ ಸೂರ್ಯವಂಶಿ ಹಾಗೂ ವಿಹಾನ್ ಮಲ್ಹೋತ್ರ ಅರ್ಧಶತಕದ ಜೊತೆಯಾಟವಾಡಿದರು. ಅಲ್ಲದೆ 10 ಓವರ್ಗಳಲ್ಲಿ ತಂಡದ ಮೊತ್ತವನ್ನು 69 ಕ್ಕೆ ತಂದು ನಿಲ್ಲಿಸಿದರು. ಈ ಹಂತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ವೈಭವ್ (45) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ವಿಹಾನ್ (49) ಕೂಡ ಪೆವಿಲಿಯನ್ಗೆ ಮರಳಿದ್ದರು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ ಕುಮಾರ್ 47 ರನ್ ಬಾರಿಸಿದರೆ, ಕೌಶಿಕ್ ಚೌಹಾನ್ 45 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಟೀಮ್ ಇಂಡಿಯಾ 49 ಓವರ್ಗಳಲ್ಲಿ 290 ರನ್ಗಳಿಸಿ ಆಲೌಟ್ ಆಯಿತು.
50 ಓವರ್ಗಳಲ್ಲಿ 291 ರನ್ಗಳ ಕಠಿಣ ಗುರಿ ಪಡೆದ ಇಂಗ್ಲೆಂಡ್ 47 ರನ್ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರು ಬ್ಯಾಟರ್ಗಳನ್ನು ಕಳೆದುಕೊಂಡರು. ಈ ವೇಳೆ ಆಗಮಿಸಿದ ರಾಕಿ ಫ್ಲಿಂಟಾಫ್ ಹಾಗೂ ಥಾಮಸ್ ರೆವ್ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದರು. ಅಲ್ಲದೆ 4ನೇ ವಿಕೆಟ್ಗೆ 123 ರನ್ಗಳನ್ನು ಪೇರಿಸಿದರು. ಈ ವೇಳೆ ಕೌಶಿಕ್ ಚೌಹಾನ್ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ಎಡವಿ ರಾಕಿ ಫ್ಲಿಂಟಾಫ್ (39) ವಿಕೆಟ್ ಒಪ್ಪಿಸಿದರು.
ಇದಾಗ್ಯೂ ಮತ್ತೊಂದೆಡೆ ಟೀಮ್ ಇಂಡಿಯಾ ಬೌಲರ್ಗಳ ಬೆಂಡೆತ್ತಿದ ಥಾಮಸ್ ರೆವ್ ಕೇವಲ 73 ಎಸೆತಗಳಲ್ಲಿ ಶತಕ ಪೂರೈಸಿದರು. ಸೆಂಚುರಿ ಬಳಿಕ ಕೂಡ ಆರ್ಭಟ ಮುಂದುವರೆಸಿದ ಥಾಮಸ್ 89 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ 131 ರನ್ ಚಚ್ಚಿದರು. ಈ ಭರ್ಜರಿ ಶತಕದ ನೆರವಿನೊಂದಿಗೆ ಇಂಗ್ಲೆಂಡ್ ತಂಡವು 49.3 ಓವರ್ಗಳಲ್ಲಿ 291 ರನ್ಗಳಿಸಿ ಒಂದು ವಿಕೆಟ್ನ ರೋಚಕ ಜಯ ಸಾಧಿಸಿತು.
ಇದನ್ನೂ ಓದಿ: IPL 2026: ಚೆನ್ನೈ ಸೂಪರ್ ಕಿಂಗ್ಸ್ಗೆ ಸಂಜು ಸ್ಯಾಮ್ಸನ್?
ಇದಕ್ಕೂ ಮುನ್ನ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಅಂಡರ್ 19 ತಂಡವು 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ್ದರು. ಇದೀಗ ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ ಅಂಡರ್ 19 ತಂಡ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿದೆ.