IND vs AUS Predicted Playing XI: ಮೊದಲ ಚುಟುಕು ಸಮರಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI

IND vs AUS Predicted Playing XI: ಟಿ20 ವಿಶ್ವಕಪ್​ ತಂಡದಲ್ಲಿ ಆರಂಭಿಕರು ಯಾರಾಗಲಿದ್ದಾರೆ ಎಂಬುದಕ್ಕೆ ಉತ್ತರಿಸಿರುವ ನಾಯಕ ರೋಹಿತ್, ರಾಹುಲ್​ಗೆ ಹೆಚ್ಚಿನ ಆದ್ಯತೆ ನೀಡಿ, ಕೊಹ್ಲಿಗೆ 3ನೇ ಕ್ರಮಾಂಕ ಫಿಕ್ಸ್ ಎಂದಿದ್ದರು.

IND vs AUS Predicted Playing XI: ಮೊದಲ ಚುಟುಕು ಸಮರಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
Ind Vs Aus
Edited By:

Updated on: Sep 19, 2022 | 2:44 PM

ಏಷ್ಯಾಕಪ್ (Asia Cup) ಬಳಿಕ ಇದೀಗ ಟೀಂ ಇಂಡಿಯಾ (Team India) ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಚುಟುಕು ಮಾದರಿಯಲ್ಲಿ ಎದುರಿಸುತ್ತಿದೆ. ಮೂರು ಪಂದ್ಯಗಳ ಟಿ20 ಸರಣಿ ಮಂಗಳವಾರದಿಂದ ಮೊಹಾಲಿಯಲ್ಲಿ ಆರಂಭವಾಗಲಿದ್ದು, ಟಿ20 ವಿಶ್ವಕಪ್‌ (T20 World Cup) ದೃಷ್ಟಿಯಿಂದ ಭಾರತಕ್ಕೆ ಈ ಟಿ20 ಸರಣಿ ಅತ್ಯಂತ ಮಹತ್ವದ್ದಾಗಿದೆ. ಈ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾಗೆ (Rohit Sharma) ಕಾಡುತ್ತಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅವಕಾಶವಿದೆ. ಆದಾಗ್ಯೂ, ಆಡುವ XI ನಲ್ಲಿ ಹಿಟ್​ಮ್ಯಾನ್ ಯಾರಿಗೆ ಅವಕಾಶ ನೀಡುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.ಈ ಸರಣಿಯಲ್ಲಿ ಈ ಬಾರಿಯೂ ದಿನೇಶ್ ಕಾರ್ತಿಕ್‌ಗಿಂತ ರಿಷಬ್ ಪಂತ್‌ಗೆ (Rishabh Pant) ಪ್ರಾಶಸ್ತ್ಯ ಸಿಗುತ್ತದೆಯೇ ಎಂಬ ಪ್ರಶ್ನೆ ಕಾಡಲಿದೆ. ಜೊತೆಗೆ ಅಕ್ಷರ್ ಪಟೇಲ್ ಮತ್ತು ದೀಪಕ್ ಹೂಡಾ, ಈ ಇಬ್ಬರಲ್ಲಿ ಯಾರು ಆಡುತ್ತಾರೆ? ಎಂಬುದು ಕೂಡ ಕುತೂಹಲಕಾರಿಯಾಗಿದೆ.

ಬ್ಯಾಟಿಂಗ್ ಆರ್ಡರ್ ಹೇಗಿರಲಿದೆ?

ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಟಿ20 ವಿಶ್ವಕಪ್​ ತಂಡದಲ್ಲಿ ಆರಂಭಿಕರು ಯಾರಾಗಲಿದ್ದಾರೆ ಎಂಬುದಕ್ಕೆ ಉತ್ತರಿಸಿರುವ ನಾಯಕ ರೋಹಿತ್, ರಾಹುಲ್​ಗೆ ಹೆಚ್ಚಿನ ಆದ್ಯತೆ ನೀಡಿ, ಕೊಹ್ಲಿಗೆ 3ನೇ ಕ್ರಮಾಂಕ ಫಿಕ್ಸ್ ಎಂದಿದ್ದರು. ಹೀಗಾಗಿ ಈ ಸರಣಿಯಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್ ಅವರನ್ನು ಕಣಕ್ಕಿಳಿಸುವುದಂತೂ ಖಚಿತ. ಹೀಗಾಗಿ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಯಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆಡಿದರೆ, ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಭಾರತದ ಆಲ್ ರೌಂಡರ್ ಕೋಟಾದಲ್ಲಿ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ
ಶಕ ಬೂಮ್ ಹಾಡಿಗೆ ತಮ್ಮದೇ ಸ್ಟೈಲ್​ನಲ್ಲಿ ಸ್ಟೆಪ್ ಹಾಕಿದ ಹಾರ್ದಿಕ್- ಕೊಹ್ಲಿ; ವಿಡಿಯೋ ನೋಡಿ
IND vs AUS: ಆಸೀಸ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಭರ್ಜರಿ ತಯಾರಿ; ಫೋಟೋ ನೋಡಿ
Virat Kohli: 98 ರನ್​ಗಳಷ್ಟೇ ಬೇಕು; ಟಿ20 ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಪರ ವಿಶ್ವ ದಾಖಲೆ ಬರೆಯಲಿದ್ದಾರೆ ಕೊಹ್ಲಿ..!

ವಿಕೆಟ್ ಕೀಪರ್ ಯಾರು?

ಏಷ್ಯಾಕಪ್ ಸಮಯದಲ್ಲಿ ರೋಹಿತ್ ಶರ್ಮಾ ಆಡುವ XI ನಲ್ಲಿ ದಿನೇಶ್ ಕಾರ್ತಿಕ್‌ಗಿಂತ ಪಂತ್‌ಗೆ ಹೆಚ್ಚಿ ಆದ್ಯತೆ ನೀಡಿದರು. ಮೊದಲ ಪಂದ್ಯವನ್ನು ಬಿಟ್ಟರೆ ಮಿಕ್ಕ ಪಂದ್ಯಗಳಲ್ಲಿ ಕಾರ್ತಿಕ್​ಗೆ ಅವಕಾಶವೇ ಸಿಗಲಿಲ್ಲ. ಇತ್ತ ಸ್ಥಾನ ಗಿಟ್ಟಿಸಿಕೊಂಡ ಪಂತ್ ಕೂಡ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದರು. ಆದ್ದರಿಂದ ರೋಹಿತ್ ಶರ್ಮಾ ಈಗ ಕಾರ್ತಿಕ್‌ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಹಸ್ತಾಂತರಿಸುತ್ತಾರೆಯೇ? ಎಂಬುದು ನಾಳಿನ ಪಂದ್ಯದಲ್ಲಿಯೇ ಗೊತ್ತಾಗಲಿದೆ. ಇದರ ಹೊರತಾಗಿ, ಸ್ಪಿನ್ ಆಲ್​ರೌಂಡರ್ ಕೋಟಾದಲ್ಲಿ ಅಕ್ಷರ್ ಪಟೇಲ್ ಮತ್ತು ದೀಪಕ್ ಹೂಡಾ ನಡುವೆ ಫೈಪೋಟಿ ಹೆಚ್ಚಾಗಿದ್ದು, ಅಕ್ಷರ್ ಪಟೇಲ್​ಗೆ ಇಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ಧಟ್ಟವಾಗಿವೆ.

ಬುಮ್ರಾ-ಹರ್ಷಲ್​ಗೆ ಸ್ಥಾನ ಖಚಿತ

ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡುವುದಾದರೆ, ಇಂಜುರಿಯಿಂದ ಚೇತರಿಸಿಕೊಂಡು ತಂಡಕ್ಕೆ ಎಂಟ್ರಿಕೊಟ್ಟಿರುವ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್​ಗೆ ಅವಕಾಶ ಸಿಗುವುದಂತೂ ಖಚಿತ. ಇವರ ಜೊತೆಗೆ 2022ರ ಏಷ್ಯಾಕಪ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಕೂಡ ತಂಡದ ಭಾಗವಾಗಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಯುಜುವೇಂದ್ರ ಚಹಾಲ್‌ಗೆ ಅವಕಾಶ ನೀಡಬಹುದು.

ಆಸೀಸ್ ತಂಡ ಹೇಗಿರಲಿದೆ?

ಮೊದಲ ಹಣಾಹಣಿಗೆ ಆಸ್ಟ್ರೇಲಿಯಾ ತಂಡ ಕೂಡ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಆದರೆ ಕಾಂಗರೂಗಳ ಪ್ರಮುಖ ಹಿನ್ನಡೆಯೆಂದರೆ, ಈ ತಂಡದಲ್ಲಿ ವಾರ್ನರ್ ಹಾಗೂ ಸ್ಟಾರ್ಕ್​ ಇಲ್ಲದಿರುವುದು. ಡೇವಿಡ್ ವಾರ್ನರ್ ಮತ್ತು ಮಿಕ್ಥೆಲ್ ಸ್ಟಾರ್ಕ್ ಇಂಜುರಿಯಿಂದಾಗಿ ಈ ಸರಣಿಯಲ್ಲಿ ತಂಡದ ಭಾಗವಾಗಿಲ್ಲ. ಇನ್ನುಳಿದಂತೆ ತಂಡದ ಪ್ರಮುಖ ಅಸ್ತ್ರವೆಂದರೆ ಅದು ಪವರ್-ಹಿಟ್ಟರ್ ಆಗಿರುವ ಟಿಮ್ ಡೇವಿಡ್. ಈ ಸರಣಿಯಲ್ಲಿ ಅಬ್ಬರಿಸುವ ಮೂಲಕ ಟಿ20 ವಿಶ್ವಕಪ್​ಗೆ ನಾನು ಸಿದ್ದ ಎನ್ನುವ ಸಿಗ್ನಲ್ ಕೊಡುವ ಕಾತುರದಲ್ಲಿ ಡೇವಿಡ್ ಇದ್ದಾರೆ. ಇವರನ್ನು ಹೊರತುಪಡಿಸಿ ಜೋಶ್ ಇಂಗ್ಲಿಸ್, ನಾಥನ್ ಎಲ್ಲಿಸ್ ತಂಡದಲ್ಲಿ ಸ್ಥಾನ ಪಡೆದಿರುವ ಹೊಸ ಮುಖಗಳಾಗಿದ್ದು, ಈ ಸರಣಿಯಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗಿಳಿಯಲ್ಲಿದ್ದಾರೆ.

ಉಭಯ ತಂಡಗಳ ಸಂಭಾವ್ಯ ಇಲೆವೆನ್

ಟೀಂ ಇಂಡಿಯಾದ ಸಂಭಾವ್ಯ XI – ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ ಮತ್ತು ಯುಜ್ವೇಂದ್ರ ಚಹಾಲ್

ಆಸೀಸ್ ಸಂಭಾವ್ಯ ತಂಡ: ಆರನ್ ಫಿಂಚ್, ಮ್ಯಾಥ್ಯೂ ವೇಡ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಟಿಮ್ ಡೇವಿಡ್, ಆಡಮ್ ಝಂಪಾ, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್, ಸೀನ್ ಅಬಾಟ್, ಆಸ್ಟನ್ ಅಗರ್

Published On - 2:40 pm, Mon, 19 September 22