IND vs AUS: ‘ಯಾರಿಗೂ ಇಷ್ಟು ಅವಕಾಶ ಸಿಕ್ಕಿಲ್ಲ’..! ರಾಹುಲ್ ಆಯ್ಕೆಯ ಬಗ್ಗೆ ಕೆಂಡಕಾರಿದ ಕನ್ನಡಿಗ ವೆಂಕಟೇಶ್

| Updated By: ಪೃಥ್ವಿಶಂಕರ

Updated on: Feb 11, 2023 | 5:53 PM

IND vs AUS: 46 ಟೆಸ್ಟ್ ಪಂದ್ಯಗಳನ್ನಾಡಿರುವ ರಾಹುಲ್ ರನ್ ಸರಾಸರಿ ಕೇವಲ 34 ಆಗಿದೆ. ಅದು ಕೂಡ ಎಂಟು ವರ್ಷಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳೆದ ನಂತರ. ಬೇರೆ ಯಾರಿಗೂ ಇಷ್ಟೊಂದು ಅವಕಾಶಗಳು ಸಿಕ್ಕಿದ್ದೇ ಎಂಬುದು ನನಗೆ ನೆನಪಿಲ್ಲ ಎಂದು ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

IND vs AUS: ‘ಯಾರಿಗೂ ಇಷ್ಟು ಅವಕಾಶ ಸಿಕ್ಕಿಲ್ಲ’..! ರಾಹುಲ್ ಆಯ್ಕೆಯ ಬಗ್ಗೆ ಕೆಂಡಕಾರಿದ ಕನ್ನಡಿಗ ವೆಂಕಟೇಶ್
ಕೆಎಲ್ ರಾಹುಲ್, ವೆಂಕಟೇಶ್ ಪ್ರಸಾದ್
Follow us on

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ (India Vs Australia) ಏಕಪಕ್ಷೀಯ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 132 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಈ ಗೆಲುವಿನ ನಂತರವೂ ಟೀಂ ಇಂಡಿಯಾದ (Team India) ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್​ (Venkatesh Prasad) ಆಯ್ಕೆ ಸಮಿತಿಯ ವಿರುದ್ಧ ಉರಿದು ಬೀಳುವುದನ್ನು ಕಡಿಮೆ ಮಾಡಿದಂತೆ ಕಾಣುತ್ತಿಲ್ಲ. ಕರ್ನಾಟಕ ಮೂಲದ ವೆಂಕಟೇಶ್ ಪ್ರಸಾದ್, ಟೀಂ ಇಂಡಿಯಾದಲ್ಲಿ ತಮ್ಮದೇ ರಾಜ್ಯದ ಆಟಗಾರ ಪದೇ ಪದೇ ಅವಕಾಶ ಪಡೆಯುತ್ತಿರುವುದರ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ವಾಸ್ತವವಾಗಿ ಟೀಂ ಇಂಡಿಯಾದಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul) ತಂಡದಲ್ಲಿರುವ ಬಗ್ಗೆ ವೆಂಕಟೇಶ್ ಪ್ರಶ್ನೆಗಳನ್ನು ಎತ್ತಿದ್ದಾರೆ.

ಯಾರಿಗೂ ಇಷ್ಟು ಅವಕಾಶಗಳು ಸಿಕ್ಕಿಲ್ಲ

ತಂಡದಲ್ಲಿ ಕೆಎಲ್ ರಾಹುಲ್​ಗೆ ಸಿಗುತ್ತಿರುವ ಅವಕಾಶಗಳ ಬಗ್ಗೆ ಟ್ವಿಟರ್​​ನಲ್ಲಿ ಆಕ್ರೋಶ ಹೊರಹಾಕಿರುವ ಪ್ರಸಾದ್, ಕೆಎಲ್ ರಾಹುಲ್ ಮತ್ತು ಅವರ ಪ್ರತಿಭೆಯ ಬಗ್ಗೆ ನನಗೆ ತುಂಬಾ ಗೌರವವಿದೆ. ಆದರೆ ದುರದೃಷ್ಟವಶಾತ್ ಅವರ ಪ್ರದರ್ಶನ ತುಂಬಾ ಸಾಧಾರಣವಾಗಿದೆ. 46 ಟೆಸ್ಟ್ ಪಂದ್ಯಗಳನ್ನಾಡಿರುವ ರಾಹುಲ್ ರನ್  ಸರಾಸರಿ ಕೇವಲ 34 ಆಗಿದೆ. ಅದು ಕೂಡ ಎಂಟು ವರ್ಷಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳೆದ ನಂತರ. ಇಷ್ಟು ಕಳಪೆ ಪ್ರದರ್ಶನದ ನಂತರ ಬೇರೆ ಯಾರಿಗೂ ಇಷ್ಟೊಂದು ಅವಕಾಶಗಳು ಸಿಕ್ಕಿದ್ದೇ ಎಂಬುದು ನನಗೆ ನೆನಪಿಲ್ಲ.

ರಾಹುಲ್ ಅವರನ್ನು ಅವರ ಪ್ರದರ್ಶನದ ಮೇಲೆ ಆಯ್ಕೆ ಮಾಡಿಲ್ಲ, ಬದಲಿಗೆ ಫೆವರಿಸಂ ಮಾಡಲಾಗುತ್ತಿದೆ. ಎಂಟು ವರ್ಷಗಳಿಂದ ತಂಡದಲ್ಲಿರುವ ರಾಹುಲ್​ಗೆ ತಮ್ಮ ಪ್ರತಿಭೆಗೆ ತಕ್ಕಂತೆ ಆಡಲು ಸಾಧ್ಯವಾಗುತ್ತಿಲ್ಲ. ಅನೇಕ ಮಾಜಿ ಕ್ರಿಕೆಟಿಗರು ಈ ಬಗ್ಗೆ ಮಾತನಾಡುತ್ತಿಲ್ಲ. ಏಕೆಂದರೆ ಐಪಿಎಲ್‌ನಲ್ಲಿ ಒಂದು ತಂಡದ ನಾಯಕನಾಗಿರುವವನ ಬಗ್ಗೆ ಮಾತನಾಡಲು ಯಾರು ಬಯಸುವುದಿಲ್ಲ.

ಉಪನಾಯಕ ಸ್ಥಾನದ ಬಗ್ಗೆಯೂ ಪ್ರಶ್ನೆ

ರಾಹುಲ್ ಉಪನಾಯಕರಾಗುವ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿರುವ ಪ್ರಸಾದ್, ರಾಹುಲ್ ಟೆಸ್ಟ್ ತಂಡದ ಉಪನಾಯಕರಾಗಿರುವುದು ಕೂಡ ಅತ್ಯಂತ ಹೀನಾಯವಾಗಿದೆ. ಅಶ್ವಿನ್ ಅದ್ಭುತ ಕ್ರಿಕೆಟ್ ಮನಸ್ಸನ್ನು ಹೊಂದಿದ್ದು, ಅವರು ಟೆಸ್ಟ್ ತಂಡದ ಉಪನಾಯಕನಾಗಬೇಕಿತ್ತು. ಅವರಿಲ್ಲದಿದ್ದರೆ ಪೂಜಾರ, ಜಡೇಜಾ ಕೂಡ ಉಪನಾಯಕತ್ವವಹಿಸಿಕೊಳ್ಳಲು ಸೂಕ್ತರು. ಮಯಾಂಕ್ ಅಗರ್ವಾಲ್ ಟೆಸ್ಟ್‌ನಲ್ಲಿ ರಾಹುಲ್‌ಗಿಂತ ಹೆಚ್ಚು ಪ್ರಭಾವ ಬೀರಿದ್ದಾರೆ. ಉತ್ತಮ ಫಾರ್ಮ್‌ನಲ್ಲಿರುವ ಅನೇಕ ಆಟಗಾರರು ತಂಡದ ಹೊರಗೆ ಕಾಯುತ್ತಿದ್ದಾರೆ. ಶುಭ್​ಮನ್ ಗಿಲ್ ಕೂಡ ಇದ್ದಾರೆ. ಅಲ್ಲದೆ ಸರ್ಫರಾಜ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಸಾಕಷ್ಟು ರನ್ ಗಳಿಸುತ್ತಿದ್ದಾರೆ. ಹೀಗಾಗಿ ರಾಹುಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಆಟಗಾರರು ಅರ್ಹರಾಗಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಕನ್ನಡಿಗ ವೆಂಕಟೇಶ್ ಪ್ರಸಾದ್ ಆಯ್ಕೆ ಸಮಿತಿ ಹಾಗೂ ರಾಹುಲ್ ವಿರುದ್ಧ ಬೆಂಕಿ ಉಗುಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:49 pm, Sat, 11 February 23