IND vs AUS: ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಜಡೇಜಾಗೆ ದಂಡದ ಬರೆ ಎಳೆದ ಐಸಿಸಿ..!
IND vs AUS: ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾಗೂ ಮೊದಲ ಟೆಸ್ಟ್ ಗೆಲುವಿನ ರೂವಾರಿ ರವೀಂದ್ರ ಜಡೇಜಾಗೆ ಐಸಿಸಿ ಶೇ.25ರಷ್ಟು ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಿದೆ.
ನಾಗ್ಪುರದಲ್ಲಿ ನಡೆದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ (India Vs Australia) ತಂಡವನ್ನು ಇನಿಂಗ್ಸ್ ಮತ್ತು 132 ರನ್‌ಗಳಿಂದ ಸೋಲಿಸಿ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಆದರೆ ಈ ಗೆಲುವಿನ ಸಂಭ್ರಮದಲ್ಲಿರುವ ಟೀಂ ಇಂಡಿಯಾ (Team India) ಅಭಿಮಾನಿಗಳು ಹಾಗೂ ತಂಡಕ್ಕೆ ಐಸಿಸಿ ದಂಡದ ಶಾಕ್ ನೀಡಿದೆ. ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾಗೂ ಮೊದಲ ಟೆಸ್ಟ್ ಗೆಲುವಿನ ರೂವಾರಿ ರವೀಂದ್ರ ಜಡೇಜಾಗೆ (Ravindra Jadeja) ಐಸಿಸಿ ಶೇ.25ರಷ್ಟು ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಿದೆ. ಐಸಿಸಿಯ (ICC) ಲೆವೆಲ್-1 ನಿಯಮ ಉಲ್ಲಂಘನೆ ಮಾಡಿದಕ್ಕಾಗಿ ಜಡೇಜಾಗೆ ದಂಡ ವಿಧಿಸಲಾಗಿದೆ ಎಂದು ಐಸಿಸಿ ಮಾಹಿತಿ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಐಸಿಸಿ, ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಜಡೇಜಾ ತನ್ನ ನೀತಿ ಸಂಹಿತೆಯ 2.20 ನೇ ವಿಧಿಯನ್ನು ಉಲ್ಲಂಘಿಸಿದ್ದಾರೆ. ಇದಕ್ಕಾಗಿ ಪಂದ್ಯ ಶುಲ್ಕ ಶೇ.25ರಷ್ಟು ಹಣವನ್ನು ದಂಡವಾಗಿ ವಿಧಿಸಲಾಗಿದೆ ಎಂಬ ಮಾಹಿತಿ ನೀಡಿದೆ.
ದಂಡ ವಿಧಿಸಿದ್ದು ಯಾಕೆ?
ವಾಸ್ತವವಾಗಿ ಜಡೇಜಾಗೆ ತಂಡ ವಿಧಿಸಲು ಅದೊಂದು ಘಟನೆ ಕಾರಣವಾಗಿದೆ. ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್‌ನ 46 ನೇ ಓವರ್ನಲ್ಲಿ ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ ಬಳಿಯಿಂದ ನೋವು ನಿವಾರಕ ಕ್ರೀಮ್ ಪಡೆದುಕೊಂಡು ತಮ್ಮ ಬೆರಳಿಗೆ ಹಚ್ಚಿಕೊಂಡಿದ್ದರು. ಜಡೇಜಾ ತಮ್ಮ ಕೈಗೆ ಮುಲಾಮನ್ನು ಹಚ್ಚಿಕೊಂಡ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದೇ ವಿಡಿಯೋವನ್ನು ಇಟ್ಟುಕೊಂಡು ಆಸ್ಟ್ರೇಲಿಯಾ ಮೀಡಿಯಾಗಳು ಕೂಡ ಮೋಸದಾಟದ ಬಣ್ಣ ಹಚ್ಚಲು ಆರಂಭಿಸಿದ್ದವು. ಆದರೆ ಜಡೇಜಾ ಅವರ ಬೆರಳಿಗೆ ಗಾಯವಾಗಿದ್ದು, ಅವರ ಎಡಗೈಗೆ ನೋವು ನಿವಾರಕ ಕ್ರೀಮ್ ಹಚ್ಚಿಕೊಂಡಿದ್ದಾರೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿತ್ತು. ಆದರೆ ಆನ್ ಫೀಲ್ಡ್ ಅಂಪೈರ್ಗಳ ಅನುಮತಿ ಇಲ್ಲದೆ ಜಡೇಜಾ ಕ್ರೀಮ್ ಹಚ್ಚಿಕೊಂಡಿದಕ್ಕಾಗಿ ಈ ಕ್ರಮ ಕೈಗೊಳ್ಳಲಾಗೊದೆ.
ತಪ್ಪನ್ನು ಒಪ್ಪಿಕೊಂಡ ಜಡೇಜಾ
ಈಗಾಗಲೇ ಜಡೇಜಾ ತಮ್ಮ ತಪ್ಪನ್ನು ಒಪ್ಪಿಕೊಂಡಿರುವುದಲ್ಲದೆ, ಐಸಿಸಿ ಮ್ಯಾಚ್ ರೆಫರಿ ಆಂಡಿ ಪ್ರಿಕ್ರಾಫ್ಟ್ ನೀಡಿದ ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಯಾವುದೇ ಅಧಿಕೃತ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆನ್ಫೀಲ್ಡ್ ಅಂಪೈರ್ಗಳಾದ ನಿತಿನ್ ಮೆನನ್, ರಿಚರ್ಡ್ ಲಿಂಗ್ ವರ್ತ್, ಥರ್ಡ್ ಅಂಪೈರ್ ಮೈಕಲ್ ಗೋಫ್ ಮತ್ತು ನಾಲ್ಕನೇ ಅಂಪೈರ್ ಕೆಎನ್ ಅನಂತಪದ್ಮನಾಭನ್ ಜಡೇಜಾ ವಿರುದ್ಧ ಆರೋಪ ಮಾಡಿದ್ದರು. ಆರೋಪ ಕೇಳಿ ಬಂದ ಬಳಿಕ ಕುಲಂಕಷವಾಗಿ ತನಿಖೆ ಮಾಡಿದ ಮ್ಯಾಚ್ ರೆಫರಿ, ಕೇವಲ ವೈದ್ಯಕೀಯ ಕಾರಣಗಳಿಗಾಗಿ ಜಡೇಜಾ ಬೆರಳಿಗೆ ಕ್ರೀಮ್ ಹಚ್ಚಿಕೊಂಡಿದ್ದು, ಇದರಲ್ಲಿ ಚೆಂಡನ್ನು ವಿರೂಪಗೊಳಿಸುವ ಯಾವುದೇ ಉದ್ದೇಶವಿರಲಿಲ್ಲ ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಜಡೇಜಾ
ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ 22 ಓವರ್ ಬೌಲ್ ಮಾಡಿದ ಜಡೇಜಾ 47 ರನ್ ನೀಡಿ ಐದು ವಿಕೆಟ್ ಪಡೆದರು. ಇದಾದ ಬಳಿಕ ಬ್ಯಾಟಿಂಗ್ನಲ್ಲಿ 70 ರನ್ಗಳ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 185 ಎಸೆತಗಳನ್ನು ಎದುರಿಸಿದ ಜಡೇಜಾ ಒಂಬತ್ತು ಬೌಂಡರಿಗಳನ್ನು ಬಾರಿಸಿದರು. ಬಳಿಕ ಆಸೀಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಜಡೇಜಾ ಎರಡು ವಿಕೆಟ್ ಕೂಡ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Sat, 11 February 23