IND vs AUS: ಆಸೀಸ್ ಪೆವಿಲಿಯನ್ ಪರೇಡ್; ಭಾರತಕ್ಕೆ ಇನ್ನಿಂಗ್ಸ್ ಹಾಗೂ 132 ರನ್‌ಗಳ ಭಾರಿ ಜಯ
IND vs AUS: ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 132 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ರೋಹಿತ್ ಪಡೆ 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ (Nagpur Test) ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ (Border-Gavaskar Trophy) ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 132 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ರೋಹಿತ್ ಪಡೆ 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ನಾಗ್ಪುರ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 223 ರನ್‌ಗಳ ಮುನ್ನಡೆ ಸಾಧಿಸಿದ ಭಾರತ, ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್ ಅನ್ನು ಕೇವಲ 91 ರನ್‌ಗಳಿಗೆ ಅಂತ್ಯಗೊಳಿಸಿತು. ಟೀಂ ಇಂಡಿಯಾ ಪರ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ ರವೀಂದ್ರ ಜಡೇಜಾ (Ravindra Jadeja) 70 ರನ್ ಹಾಗೂ 7 ವಿಕೆಟ್ ಪಡೆದು ಮಿಂಚಿದರೆ, ಅಕ್ಷರ್ ಪಟೇಲ್ (Axar Patel) 84 ರನ್ ಹಾಗೂ 1 ವಿಕೆಟ್ ಪಡೆದರು. ಹಾಗೆಯೇ ಈ ಇಬ್ಬರಲ್ಲದೆ ಬೌಲಿಂಗ್ನಲ್ಲಿ ಮ್ಯಾಜಿಕ್ ಮಾಡಿದ ರವಿಚಂದ್ರನ್ ಅಶ್ವಿನ್ (Ravichandran Ashwin) ಎರಡೂ ಇನ್ನಿಂಗ್ಸ್ಗಳಿಂದ ಒಟ್ಟು 8 ವಿಕೆಟ್ ಪಡೆದು ಗೆಲುವಿನ ಹೀರೋ ಎನಿಸಿಕೊಂಡರು.
ಮೊದಲ ಇನ್ನಿಂಗ್ಸ್‌ನಲ್ಲಿ ಜಡೇಜಾ ಹೀರೋ
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ತಂಡ ಭಾರತದ ಸ್ಪಿನ್ ದಾಳಿಗೆ ಸಿಲುಕಿ ಕೇವಲ 177 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಜಡೇಜಾ ಸ್ಪಿನ್ ದಾಳಿಗೆ ನಲುಗಿದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಬರೋಬ್ಬರಿ 5 ತಿಂಗಳ ನಂತರ ಮೈದಾನಕ್ಕೆ ಮರಳಿದ ಜಡೇಜಾ 5 ವಿಕೆಟ್ ಪಡೆದು ಮಿಂಚಿದರು. ಹಾಗೆಯೇ ಜಡೇಜಾ ಜೊತೆ ಕೈ ಜೋಡಿಸಿದ ಅಶ್ವಿನ್ ಕೂಡ 3 ಬಲಿ ಪಡೆದಿದ್ದರು.
ಇದಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ರೋಹಿತ್ ಶರ್ಮಾ ಅವರ ಶತಕ (120 ರನ್) ಹಾಗೂ ರವೀಂದ್ರ ಜಡೇಜಾ (70 ರನ್) ಮತ್ತು ಅಕ್ಷರ್ ಪಟೇಲ್ (84 ರನ್) ಅವರ ಅರ್ಧಶತಕದ ನೆರವಿನಿಂದ 400 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದ ಟಾಡ್ ಮರ್ಫಿ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು.
IND vs AUS: ಟೆಸ್ಟ್ ಕ್ರಿಕೆಟ್ನಲ್ಲಿ ಕಿಂಗ್ ಕೊಹ್ಲಿಗಿಂತ ಮೊಹಮ್ಮದ್ ಶಮಿಯೇ ಬೆಸ್ಟ್..!
ಎರಡನೇ ಇನ್ನಿಂಗ್ಸ್‌ನಲ್ಲಿ ತತ್ತರಿಸಿದ ಆಸೀಸ್
ಮೊದಲ ಇನಿಂಗ್ಸ್‌ನಂತೆ ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಓಪನರ್ ಉಸ್ಮಾನ್ ಖವಾಜಾ ಮತ್ತೊಮ್ಮೆ ನಿರಾಸೆ ಮೂಡಿಸಿದಲ್ಲದೆ, ಸತತ ಎರಡನೇ ಇನ್ನಿಂಗ್ಸ್‌ನಲ್ಲಿ ಸಿಂಗಲ್ ಡಿಜಿಟ್‌ಗೆ ವಿಕೆಟ್ ಒಪ್ಪಿಸಿದರು. ಅಶ್ವಿನ್, ಖವಾಜಾ ವಿಕೆಟ್ ಪಡೆದರು. ಇದಾದ ನಂತರ ಬಂದ ಜಡೇಜಾ, ವಿಶ್ವದ ನಂಬರ್ ಒನ್ ಟೆಸ್ಟ್ ಬ್ಯಾಟ್ಸ್‌ಮನ್ ಮಾರ್ನಸ್ ಲಬುಶೆನ್ರನ್ನು ಕೇವಲ 17 ರನ್‌ಗಳಿಗೆ ಪೆವಿಲಿಯನ್ಗಟ್ಟಿದರು. ಇದಾದ ಬಳಿಕ ಆಸ್ಟ್ರೇಲಿಯದ ಬ್ಯಾಟಿಂಗ್ ಬೆನ್ನೆಲುಬು ಮುರಿಯಲ್ಲಾರಂಭಿಸಿದ ಅಶ್ವಿನ್ ಒಂದರ ಹಿಂದೆ ಒಂದರಂತೆ ವಿಕೆಟ್ ಕೀಳಲಾರಂಭಿಸಿದರು. ಇತ್ತ ಅಶ್ವಿನ್ ಸ್ಪಿನ್ ಜಾದು ಅರಿಯುವಲ್ಲಿ ವಿಫಲರಾದ ಆಸೀಸ್ ಬ್ಯಾಟರ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ತಂಡದ ಪರ ಸ್ಟೀವ್ ಸ್ಮಿತ್ (25) ಕೊಂಚ ಪ್ರತಿರೋಧ ತೋರಿದ್ದು ಬಿಟ್ಟರೆ, ಮತ್ತ್ಯಾವ ಆಟಗಾರನಿಗೂ ಭಾರತದ ಸ್ಪಿನ್ ದಾಳಿ ಮುಂದೆ ನೆಲಕಚ್ಚಿ ನಿಲ್ಲಲು ಸಾಧ್ಯವಾಗಲಿಲ್ಲ. ಇದರಿಂದ ಕಾಂಗರೂ ತಂಡ ಕೇವಲ 91 ರನ್‌ಗಳಿಗೆ ಆಲೌಟ್ ಆಯಿತು.
ಎರಡನೇ ಇನ್ನಿಂಗ್ಸ್‌ನಲ್ಲಿ ಮಿಂಚಿದ ಅಶ್ವಿನ್
ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಅಶ್ವಿನ್ ಭಾರತದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಇದು ತವರು ನೆಲದಲ್ಲಿ ಅಶ್ವಿನ್ ಅವರ 25ನೇ ಬಾರಿಗೆ 5 ವಿಕೆಟ್ ಸಾಧನೆಯಾಗಿದ್ದು, ವೃತ್ತಿಜೀವನದಲ್ಲಿ ಇದು ಅಶ್ವಿನ್ ಅವರ 31 ನೇ ಬಾರಿಯ 5 ವಿಕೆಟ್ ಸಾಧನೆಯಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:21 pm, Sat, 11 February 23