IND vs AUS: ನಾಗ್ಪುರ ಪಿಚ್ನಲ್ಲಿ ಅಂದಿಗೂ ಇಂದಿಗೂ ಟೀಮ್ ಇಂಡಿಯಾದ್ದೇ ದರ್ಬಾರ್
IND vs AUS 1st Test: ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ತಂಡಗಳು ವಿಸಿಎ ಮೈದಾನದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ರವೀಂದ್ರ ಜಡೇಜಾ ಅವರ ಸ್ಪಿನ್ ದಾಳಿಗೆ ನಲುಗಿ ಕೇವಲ 177 ರನ್ಗಳಿಗೆ ಆಲೌಟ್ ಆಯಿತು.
India vs Australia 1st Test: ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಇನಿಂಗ್ಸ್ ಹಾಗೂ 131 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ವಿದರ್ಭ ಕ್ರಿಕೆಟ್ ಮೈದಾನದಲ್ಲಿ ಮತ್ತೊಮ್ಮೆ ಜಯದ ಪಾತಾಕೆಯನ್ನು ಹಾರಿಸಿದೆ. ವಿಶೇಷ ಎಂದರೆ ಭಾರತದ ಪಾಲಿಗೆ ಇದು ನಿರೀಕ್ಷಿತ ಗೆಲುವು. ಏಕೆಂದರೆ ವಿದರ್ಭ ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡ ಟೆಸ್ಟ್ನಲ್ಲಿ ಸೋತಿದ್ದು ಕೇವಲ 1 ಬಾರಿ ಮಾತ್ರ. ಅಂದರೆ 2008 ರಲ್ಲಿ ನವೀಕರಣಗೊಂಡ ವಿದರ್ಭ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಪಾರುಪತ್ಯ ಮೆರೆಯುತ್ತಾ ಬಂದಿದೆ. ವಿದರ್ಭ ಮೈದಾನದಲ್ಲಿ ಟೀಮ್ ಇಂಡಿಯಾದ ಇದುವರೆಗಿನ ಪ್ರದರ್ಶನ ಹೇಗಿತ್ತು ಎಂಬುದರ ಸಂಕ್ತಿಪ್ತ ನೋಟ ಇಲ್ಲಿದೆ…
ಭಾರತ-ಆಸ್ಟ್ರೇಲಿಯಾ: ವಿದರ್ಭ ಮೈದಾನ ನವೀಕರಣಗೊಂಡ ಬಳಿಕ ಮೊದಲ ಬಾರಿಗೆ ಮುಖಾಮುಖಿಯಾಗಿದ್ದು ಭಾರತ-ಆಸ್ಟ್ರೇಲಿಯಾ ತಂಡಗಳು. ಅಂದು ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 441 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 355 ರನ್ ಪೇರಿಸಿತ್ತು. ಇನ್ನು 2ನೇ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 295 ರನ್ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಬೃಹತ್ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 209 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಟೀಮ್ ಇಂಡಿಯಾ 172 ರನ್ಗಳ ಭರ್ಜರಿ ಜಯ ಸಾಧಿಸಿತು. ಅಂದು ಟೀಮ್ ಇಂಡಿಯಾ ಪರ ಸಚಿನ್ ತೆಂಡೂಲ್ಕರ್ ಶತಕ ಬಾರಿಸಿ ಮಿಂಚಿದರೆ, ಹರ್ಭಜನ್ ಸಿಂಗ್ 7 ವಿಕೆಟ್ ಕಬಳಿಸಿದ್ದರು.
ಭಾರತ-ಸೌತ್ ಆಫ್ರಿಕಾ: ಫೆಬ್ರವರಿ 6, 2010 ರಲ್ಲಿ ಇದೇ ಮೈದಾನದಲ್ಲಿ ಭಾರತ-ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 6 ವಿಕೆಟ್ ನಷ್ಟಕ್ಕೆ 558 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಕೇವಲ 233 ರನ್ಗಳಿಗೆ ಆಲೌಟ್ ಆಯಿತು. ಆ ಬಳಿಕ ಫಾಲೋಆನ್ ಹೇರಿದ ಸೌತ್ ಆಫ್ರಿಕಾ ಭಾರತ ತಂಡವನ್ನು ಮತ್ತೆ ದ್ವಿತೀಯ ಇನಿಂಗ್ಸ್ಗೆ ಆಹ್ವಾನಿಸಿತು. ಆದರೆ 2ನೇ ಇನಿಂಗ್ಸ್ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ತಂಡವು 319 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಸೌತ್ ಆಫ್ರಿಕಾ ತಂಡವು ಇನಿಂಗ್ಸ್ ಹಾಗೂ 6 ರನ್ಗಳ ಭರ್ಜರಿ ಜಯ ಸಾಧಿಸಿತು. ವಿಶೇಷ ಎಂದರೆ ಇದು ವಿದರ್ಭ ಮೈದಾನದಲ್ಲಿ ಟೀಮ್ ಇಂಡಿಯಾ ಕಂಡಂತಹ ಮೊದಲ ಸೋಲಾಗಿದೆ.
ಭಾರತ-ನ್ಯೂಜಿಲೆಂಡ್: 2010 ರಲ್ಲಿ ಇದೇ ಮೈದಾನದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು 193 ರನ್ಗಳಿಗೆ ಆಲೌಟ್ ಆಗಿತ್ತು. ಇನ್ನು ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 566 ರನ್ಗಳ ಬೃಹತ್ ಮೊತ್ತ ಪೇರಿಸಿತು. ದ್ವಿತೀಯ ಇನಿಂಗ್ಸ್ನಲ್ಲೂ ಟೀಮ್ ಇಂಡಿಯಾ ಬೌಲರ್ಗಳ ದಾಳಿಗೆ ತತ್ತರಿಸಿದ ಕಿವೀಸ್ ಪಡೆ ಕೇವಲ 175 ರನ್ಗಳಿಗೆ ಸರ್ವಪತನ ಕಂಡಿತು. ಅಂದು ಭಾರತ ತಂಡವು ಇನಿಂಗ್ಸ್ ಹಾಗೂ 198 ರನ್ಗಳ ಭರ್ಜರಿ ಜಯ ಸಾಧಿಸಿ ದಾಖಲೆ ಬರೆಯಿತು.
ಭಾರತ-ಇಂಗ್ಲೆಂಡ್: 2012 ರಲ್ಲಿ ಇದೇ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 330 ರನ್ ಪೇರಿಸಿದರೆ, ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 326 ರನ್ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವು 4 ವಿಕೆಟ್ ನಷ್ಟಕ್ಕೆ 352 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಅಷ್ಟರಲ್ಲಿ 5ನೇ ದಿನದಾಟದ ಮುಕ್ತಾಯವಾಗಿದ್ದರಿಂದ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು.
ಭಾರತ-ಸೌತ್ ಆಫ್ರಿಕಾ: ಇಂಗ್ಲೆಂಡ್ ವಿರುದ್ಧ ಡ್ರಾ ಮಾಡಿಕೊಂಡ ಬಳಿಕ 2015 ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ-ಸೌತ್ ಆಫ್ರಿಕಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 215 ರನ್ ಪೇರಿಸಿದರೆ, ಸೌತ್ ಆಫ್ರಿಕಾ ತಂಡವು ಕೇವಲ 79 ರನ್ಗಳಿಗೆ ಆಲೌಟ್ ಆಗಿತ್ತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಭಾರತ ತಂಡವು 173 ರನ್ ಕಲೆಹಾಕಿತು. ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಸವಾಲಿನ ಮೊತ್ತ ಪಡೆದ ಸೌತ್ ಆಫ್ರಿಕಾ ತಂಡವು 185 ರನ್ಗಳಿಗೆ ಸರ್ವಪತನ ಕಂಡಿತು. ಪರಿಣಾಮ ಟೀಮ್ ಇಂಡಿಯಾ 124 ರನ್ಗಳ ಭರ್ಜರಿ ಜಯ ಸಾಧಿಸಿತು.
ಭಾರತ-ಶ್ರೀಲಂಕಾ: 2017 ರಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಣ 2ನೇ ಟೆಸ್ಟ್ ಪಂದ್ಯವು ನಾಗ್ಪುರದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 205 ರನ್ಗಳಿಗೆ ಆಲೌಟಾದರೆ, ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 610 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ ದ್ವಿತೀಯ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡವನ್ನು ಭಾರತೀಯ ಬೌಲರ್ಗಳು ಕೇವಲ 166 ರನ್ಗಳಿಗೆ ಆಲೌಟ್ ಮಾಡಿದರು. ಇದರೊಂದಿಗೆ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 239 ರನ್ಗಳ ಭರ್ಜರಿ ಜಯ ಸಾಧಿಸಿ ವಿದರ್ಭ ಮೈದಾನದಲ್ಲಿ ಹೊಸ ಇತಿಹಾಸ ನಿರ್ಮಿಸಿತು.
ಭಾರತ-ಆಸ್ಟ್ರೇಲಿಯಾ: 6 ವರ್ಷಗಳ ಬಳಿಕ ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ತಂಡಗಳು ವಿಸಿಎ ಮೈದಾನದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ರವೀಂದ್ರ ಜಡೇಜಾ ಅವರ ಸ್ಪಿನ್ ದಾಳಿಗೆ ನಲುಗಿ ಕೇವಲ 177 ರನ್ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಅವರ ಶತಕ ಸಿಡಿಸಿದರು. ಇನ್ನು ಜಡೇಜಾ, ಅಕ್ಷರ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 400 ರನ್ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 91 ರನ್ಗಳಿಗೆ ಆಲೌಟ್ ಆಗುವುದರೊಂದಿಗೆ ಆಸ್ಟ್ರೇಲಿಯಾ ತಂಡವು ಹೀನಾಯವಾಗಿ ಸೋಲನುಭವಿಸಿದೆ. ಇದರೊಂದಿಗೆ 4 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 132 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಅಂದರೆ 2008 ರಿಂದ ವಿದರ್ಭ ಕ್ರಿಕೆಟ್ ಮೈದಾನದಲ್ಲಿ ಆಡಲಾದ 7 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋತಿರುವುದು ಕೇವಲ 1 ಪಂದ್ಯದಲ್ಲಿ ಮಾತ್ರ. ಇನ್ನು 1 ಮ್ಯಾಚ್ ಡ್ರಾನಲ್ಲಿ ಅಂತ್ಯ ಕಂಡಿದೆ. ಹಾಗೆಯೇ ಇನ್ನುಳಿದ 5 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಅಮೋಘ ಗೆಲುವಿನ ನಾಗಾಲೋಟ ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂಲಕ ಮುಂದುವರೆದಿರುವುದು ವಿಶೇಷ.