ಏಷ್ಯಾಕಪ್ 2022 ರ ವೇಳೆ ಗಾಯಗೊಂಡಿದ್ದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಇದೀಗ 5 ತಿಂಗಳ ಬಳಿಕ ಮತ್ತೆ ಟೀಮ್ ಇಂಡಿಯಾ (Team India) ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇದರ ನಡುವೆ ಜಡ್ಡು ಮಿಸ್ ಮಾಡಿಕೊಂಡಿದ್ದು, ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್. ಈ ಎರಡು ಪ್ರಮುಖ ಟೂರ್ನಿಗಳಿಂದ ಹೊರಗುಳಿದಿದ್ದ ಜಡೇಜಾ ಇದೀಗ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂಲಕ ಕಂಬ್ಯಾಕ್ ಮಾಡುತ್ತಿರುವುದು ವಿಶೇಷ. ಏಷ್ಯಾಕಪ್ ವೇಳೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ಜಡೇಜಾ ಕೆಲ ತಿಂಗಳ ಹಿಂದೆಯಷ್ಟೇ ಸಂಪೂರ್ಣವಾಗಿ ಫಿಟ್ ಆಗಿದ್ದರು. ಇದಾಗ್ಯೂ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯಬೇಕಿದ್ದರೆ ಫಿಟ್ನೆಸ್ ಸಾಬೀತುಪಡಿಸುವಂತೆ ಬಿಸಿಸಿಐ ಸೂಚಿಸಿತ್ತು.
ಅದರಂತೆ ರಣಜಿ ಟೂರ್ನಿಯಲ್ಲಿ ಸೌರಾಷ್ಟ್ರ ಪರ ಕಣಕ್ಕಿದಿದ್ದ ಜಡ್ಡು ತಮಿಳುನಾಡು ವಿರುದ್ಧ 7 ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದರು. ಅಲ್ಲದೆ ಫೀಲ್ಡಿಂಗ್, ಬ್ಯಾಟಿಂಗ್ನಲ್ಲೂ ಸಂಪೂರ್ಣ ಫಿಟ್ನೆಸ್ನೊಂದಿಗೆ ಗಮನ ಸೆಳೆದಿದ್ದರು. ಅದರಂತೆ ಇದೀಗ ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಜಡೇಜಾಗೆ ಸ್ಥಾನ ನೀಡಲಾಗಿದೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾದ ಅಭ್ಯಾಸ ಶಿಬಿರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದೀಗ ಐದು ತಿಂಗಳ ಬಳಿಕ ಟೀಮ್ ಇಂಡಿಯಾವನ್ನು ಕೂಡಿಕೊಂಡಿರುವ ಬಗ್ಗೆ ಮಾತನಾಡಿರುವ ಜಡೇಜಾ, ಮತ್ತೊಮ್ಮೆ ಭಾರತ ತಂಡದ ಜೆರ್ಸಿ ಧರಿಸುತ್ತಿರುವುದು ಖುಷಿ ನೀಡಿದೆ. ಐದು ತಿಂಗಳ ನಂತರ ಮತ್ತೆ ಟೀಮ್ ಇಂಡಿಯಾದಲ್ಲಿ ಜೆರ್ಸಿಯಲ್ಲಿ ಕಣಕ್ಕಿಳಿಯಲು ಉತ್ಸುಕನಾಗಿದ್ದೇನೆ. ಈ ಅವಕಾಶ ಮರಳಿ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಭಾವಿಸುವೆ ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ.
ಕ್ರಿಕೆಟ್ ಜೀವನದಲ್ಲಿ ಏರಿಳಿತಗಳಿರುತ್ತವೆ. ಇದರ ನಡುವೆ ಮತ್ತೆ ಟೀಮ್ ಇಂಡಿಯಾ ಪರ ಆಡಬಹುದೆಂಬ ನಿರೀಕ್ಷೆಯಲ್ಲಿದ್ದೆ. ಏಕೆಂದರೆ ಐದಾರು ತಿಂಗಳು ಮೈದಾನದಿಂದ ಹೊರಗುಳಿಯುವುದು ಕಷ್ಟಕರ. ಈ ಸಮಯದಲ್ಲಿ ಮನಸ್ಸಿನಲ್ಲಿ ವಿಭಿನ್ನ ಆಲೋಚನೆಗಳು ಬರುತ್ತವೆ. ಅದರಲ್ಲೂ ಟೀಮ್ ಇಂಡಿಯಾ ವಿಶ್ವಕಪ್ನಲ್ಲಿ ಆಡುವಾಗ ನಾವು ಹೊರಗುಳಿದಿರುವುದು ಬೇಸರ ಮೂಡಿಸುತ್ತದೆ.
ತಂಡದಲ್ಲಿ ನಾನಿಲ್ಲ ಎಂಬ ವಿಷಯಗಳೂ ಕೂಡ ಶೀಘ್ರದಲ್ಲೇ ಫಿಟ್ ಆಗಲು ನಮ್ಮನ್ನು ಪ್ರೇರೇಪಿಸುತ್ತವೆ. ಎನ್‌ಸಿಎಯ ಫಿಸಿಯೋಗಳು ಮತ್ತು ತರಬೇತುದಾರರಿಂದ ನನಗೆ ಉತ್ತಮ ಬೆಂಬಲ ಕೂಡ ಸಿಕ್ಕಿತು. ಅವರು ತಮ್ಮ ಬಿಡುವಿನ ವೇಳೆಯಲ್ಲಿಯೂ ನನ್ನ ಬಗ್ಗೆ ಕಾಳಜಿವಹಿಸಿಕೊಂಡರು. ಅಲ್ಲದೆ ಶೀಘ್ರದಲ್ಲೇ ಚೇತರಿಸಿಕೊಳ್ಳಲು ಸಹಾಯ ಮಾಡಿದರು ಎಂದು ಜಡೇಜಾ ಸ್ಮರಿಸಿದರು.
ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಟೀಮ್ ಇಂಡಿಯಾದ 7 ಬ್ಯಾಟ್ಸ್ಮನ್ಗಳ ಪಟ್ಟಿ ಇಲ್ಲಿದೆ
ಇನ್ನು ಗಾಯದ ನಂತರದ ಎರಡು ತಿಂಗಳು ನನಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಿಯೂ ಹೊರಗೆ ಹೋಗಲು ಸಾಧ್ಯವಾಗದೆ ಅತ್ಯಂತ ಕಷ್ಟಕರವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಸ್ನೇಹಿತರು ಮತ್ತು ಕುಟುಂಬ ಜೊತೆಗಿದ್ದರು. ನನ್ನ ಗಾಯದ ನೋವುಗಳನ್ನು ತೋಡಿಕೊಳ್ಳುತ್ತಿದ್ದರೆ, ಎನ್‌ಸಿಎ ತರಬೇತುದಾರರು ನಿನಗಾಗಿ ಅಲ್ಲ, ದೇಶಕ್ಕಾಗಿ ಫಿಟ್ ಆಗಬೇಕೆಂದು ಪ್ರೇರೆಪಿಸುತ್ತಿದ್ದರು. ಇವರೆಲ್ಲರ ಸಹಕಾರದಿಂದ ಇದೀಗ ಮತ್ತೆ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ.
ಮೊದಲೆರಡು ಟೆಸ್ಟ್‌ಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್ , ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ .