WIPL 2023: ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ ಜೂಲನ್ ಗೋಸ್ವಾಮಿ ನೇಮಕ
Mumbai Indians Womens Team: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂಥ ಬಲಿಷ್ಠ ಹಾಗೂ ಯಶಸ್ವಿ ತಂಡ ಎನಿಸಿಕೊಂಡಿರುವ ಮುಖೇಶ್ ಅಂಬಾನಿ ಮಾಲಕತ್ವದ ಮುಂಬೈ ಇಂಡಿಯನ್ಸ್ ಕೂಡ ಡಬ್ಲ್ಯೂಪಿಎಲ್‌ನಲ್ಲಿ ತಂಡವನ್ನು ಕಣಕ್ಕಿಳಿಸುತ್ತಿದೆ.
ಕ್ರಿಕೆಟ್ ಲೋಕ ಮತ್ತೊಂದು ಚುಟುಕು ಸಮರಕ್ಕೆ ಸಜ್ಜಾಗಿ ನಿಂತಿದೆ. ಭಾರತದಲ್ಲಿ ಚೊಚ್ಚಲ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ (WIPL 2023) ಶುರುವಾಗಲಿದ್ದು ಮಾರ್ಚ್ ಮೊದಲ ವಾರದಲ್ಲಿ ಇದಕ್ಕೆ ಚಾಲನೆ ಸಿಗಲಿದೆ. ಮಹಿಳಾ ಐಸಿಸಿ ಟಿ20 ವಿಶ್ವಕಪ್ (WT20WC) ಮುಗಿದ ಬಳಿಕ ವನಿತೆಯರ ಐಪಿಎಲ್ ಆರಂಭವಾಗಲಿದೆ. ಮಹಿಳಾ ಐಪಿಎಲ್ಗಾಗಿ ಈಗಾಗಲೇ ಐದು ತಂಡಗಳು ಫ್ರಾಂಚೈಸಿ ಹಕ್ಕು ಪಡೆದುಕೊಂಡಿದ್ದು, ನೂರಾರು ಮಹಿಳಾ ಕ್ರಿಕೆಟಿಗರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಹರಾಜು (WIPL Auction) ಪ್ರಕ್ರಿಯೆ ಕೂಡ ನಡೆಯಲಿದ್ದು, ಬಲಿಷ್ಠ ತಂಡಗಳನ್ನು ಕಟ್ಟಲು ವಿವಿಧ ಫ್ರಾಂಚೈಸಿಗಳು ರಣತಂತ್ರ ಹೆಣೆದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂಥ ಬಲಿಷ್ಠ ಹಾಗೂ ಯಶಸ್ವಿ ತಂಡ ಎನಿಸಿಕೊಂಡಿರುವ ಮುಖೇಶ್ ಅಂಬಾನಿ ಮಾಲಕತ್ವದ ಮುಂಬೈ ಇಂಡಿಯನ್ಸ್ ಕೂಡ ಡಬ್ಲ್ಯೂಪಿಎಲ್‌ನಲ್ಲಿ ತಂಡವನ್ನು ಕಣಕ್ಕಿಳಿಸುತ್ತಿದೆ. ಇದೀಗ ಎಂಐ ಮಹಿಳಾ ಐಪಿಎಲ್ ಲೀಗ್‌ನಲ್ಲಿ ಆಡಲಿರುವ ತನ್ನ ಹೊಸ ಫ್ರಾಂಚೈಸಿಯ ಮಹಿಳಾ ಕೋಚಿಂಗ್ ಬಳಗವನ್ನು ಪ್ರಕಟಿಸಿದೆ. ಇತ್ತೀಚೆಗಷ್ಟೇ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ಭಾರತದ ಲೆಜೆಂಡ್ರಿ ವೇಗಿ ಜೂಲನ್ ಗೋಸ್ವಾಮಿ ಅವರಿಗೆ ಮುಂಬೈ ಇಂಡಿಯನ್ಸ್ ಅವಳಿ ಜವಾಬ್ದಾರಿ ನೀಡಿದೆ. ಅವರು ಮುಂಬರುವ ವನಿತಾ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಹಾಗೂ ಬೌಲಿಂಗ್ ಕೋಚ್ ಆಗಿ ಕರ್ತವ್ಯ ನಿಭಾಯಿಸಲಿದ್ದಾರೆ.
ಅಂತೆಯೆ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಚಾರ್ಲೋಟ್ ಎಡ್ವರ್ಡ್ಸ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಸುಮಾರು 20 ವರ್ಷಗಳ ವೃತ್ತಿಜೀವನದ ಮೂಲಕ ಮಹಿಳಾ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರೆನಿಸಿರುವ ಚಾರ್ಲೋಟ್ ಇಂಗ್ಲೆಂಡ್ ತಂಡದ ನಾಯಕಿಯಾಗಿ ಏಕದಿನ ಮತ್ತು ಟಿ20 ವಿಶ್ವಕಪ್ಗಳನ್ನು ಗೆದ್ದುಕೊಟ್ಟಿದ್ದಾರೆ. ಕಳೆದ 5 ವರ್ಷಗಳಿಂದ ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ವಿವಿಧ ತಂಡಗಳ ಕೋಚ್ ಆಗಿ ತೊಡಗಿಸಿಕೊಂಡಿದ್ದಾರೆ. ಭಾರತದ ಮಾಜಿ ಆಲ್‌ರೌಂಡರ್ ದೇವಿಕಾ ಪಾಲ್ಶಿಕಾರ್ ಬ್ಯಾಟಿಂಗ್ ಕೋಚ್ ಹಾಗೂ ತೃಪ್ತಿ ಚಂದಗಡ್ಕರ್ ಭಟ್ಟಾಚಾರ್ಯ ತಂಡದ ಮ್ಯಾನೇಜರ್ ಆಗಿ ಮುಂಬೈ ಇಂಡಿಯನ್ಸ್ ನೇಮಕ ಮಾಡಿದೆ.
?Aali Re?
Presenting our coaching unit for #WPL ?
Head Coach: Charlotte Edwards Bowling Coach and Mentor: Jhulan Goswami Batting Coach: Devieka Palshikaar
Read more ? https://t.co/pZ8WOGDTLj#MumbaiIndians #OneFamily #AaliRe @C_Edwards23 @JhulanG10 pic.twitter.com/zMYXFQGbeF
— Mumbai Indians (@mipaltan) February 5, 2023
ಈ ಬಗ್ಗೆ ಮಾತನಾಡಿರುವ ತಂಡದ ಮಾಲಕಿ ನೀತಾ ಅಂಬಾನಿ, ”ಚಾರ್ಲೋಟ್ ಎಡ್ವರ್ಡ್ಸ್, ಜೂಲನ್ ಗೋಸ್ವಾಮಿ ಮತ್ತು ದೇವಿಕಾ ಪಾಲ್ಶಿಕಾರ್ ಅವರನ್ನು ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಸ್ವಾಗತಿಸಲು ನಾನು ಸಂತಸಪಡುತ್ತೇನೆ. ಕೇವಲ ಆಟಗಾರ್ತಿಯರಾಗಿ ಮಾತ್ರವಲ್ಲದೆ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ಕೋಚ್, ಆಡಳಿತಾಧಿಕಾರಿ ಮತ್ತು ತರಬೇತಿ ಸಿಬ್ಬಂದಿಯಾಗಿ ತೊಡಗಿಸಿಕೊಳ್ಳುತ್ತಿರುವುದು ನಿಜಕ್ಕೂ ಅಮೋಘವೆನಿಸುತ್ತಿದೆ. ಭಾರತದಲ್ಲಿ ಮಹಿಳಾ ಕ್ರೀಡೆಗೆ ಇದೊಂದು ಉತ್ತಮ ಸಮಯವಾಗಿದೆ. ನಮ್ಮ ಮಹಿಳಾ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ದೇಶಕ್ಕೆ ಗೌರವ ತಂದುಕೊಡುತ್ತಿದ್ದಾರೆ. ಕ್ರೀಡಾ ಶಕ್ತಿಯ ಮೂಲಕ ಹೆಚ್ಚಿನ ಸಂತಸ ಮತ್ತು ಸಂಭ್ರಮವನ್ನು ತಂದುಕೊಡಲು ಮಹಿಳೆಯರಿಗೆ ಇನ್ನಷ್ಟು ಶಕ್ತಿ ಲಭಿಸಲಿ,” ಎಂದು ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ಇತ್ತೀಚೆಗೆ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ನಗರದ ತಂಡವನ್ನು ಗರಿಷ್ಠ ಬಿಡ್ ಸಲ್ಲಿಸಿ ಖರೀದಿಸಿದೆ. ಇದು ಮುಂಬೈ ಇಂಡಿಯನ್ಸ್ ಕುಟುಂಬದ 4ನೇ ಫ್ರಾಂಚೈಸಿ ಎನಿಸಿದೆ. ಈ ಫ್ರಾಂಚೈಸಿಯ ಮೂಲಕ ಮುಂಬೈ ಇಂಡಿಯನ್ಸ್, ಭಾರತದಲ್ಲಿ ಮಹಿಳಾ ಕ್ರಿಕೆಟ್ ಅಭಿವೃದ್ಧಿಗೂ ನೆರವಾಗುವ ಪ್ರಯತ್ನವನ್ನು ಮುಂದುವರಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ