ಭಾರತೀಯ ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಗೆ ದಿನಗಣನೆ ಶುರುವಾಗಿದೆ. ಇದೇ ಫೆಬ್ರವರಿ 9 ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ಟೀಮ್ ಇಂಡಿಯಾ ಆಟಗಾರರು ಎರಡು ದಿನಗಳ ಹಿಂದೆಯೇ ನಾಗ್ಪುರಕ್ಕೆ ಬಂದರೆ ಆಸ್ಟ್ರೇಲಿಯಾ ಪ್ಲೇಯರ್ಸ್ ಇಂದು ಸೋಮವಾರ ಇಲ್ಲಿದೆ ಪ್ರಯಾಣ ಬೆಳೆಸಲಿದ್ದಾರೆ. ಆಸೀಸ್ ಆಟಗಾರರು ಭಾನುವಾರದ ವರೆಗೆ ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದರು.
ಭಾರತೀಯ ಆಟಗಾರರು ಬಲಿಷ್ಠ ಆಸ್ಟ್ರೇಲಿಯಾ ಪಡೆಯನ್ನು ಎದುರಿಸಲು ವಿಶೇಷ ರಣತಂತ್ರ ಹೇರಿ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದೆ. ಭಾರತದ ಸ್ಕ್ವಾಡ್‌ಗೆ ನಾಲ್ವರು ಸ್ಪಿನ್ನರ್‌ಗಳನ್ನು ನೆಟ್ ಬೌಲರ್‌ಗಳಾಗಿ ಸೇರ್ಪಡೆಗೊಳಿಸಲಾಗಿದ್ದು ಅದರಲ್ಲಿ ವಾಶಿಂಗ್ಟನ್ ಸುಂದರ್ ಕೂಡ ಇದ್ದಾರೆ. ಇವರ ಜೊತೆಗೆ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್, ರಿಸ್ಟ್ ಸ್ಪಿನ್ನರ್ ರಾಹುಲ್ ಚಹರ್ ಹಾಗೂ ಮತ್ತೋರ್ವ ಎಡಗೈ ಸ್ಪಿನ್ನರ್ ಆರ್ ಸಾಯಿ ಕಿಶೋರ್ ಇದ್ದಾರೆ.
ಟೀಮ್ ಇಂಡಿಯಾ ಮಾಜಿ ನಾಯಕ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು ದೊಡ್ಡ ಇನ್ನಿಂಗ್ಸ್ ಬರಬೇಕಿದೆ. ಇದಕ್ಕಾಗಿ ಕೊಹ್ಲಿ ಮೈದಾನದಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ವಿರಾಟ್ ಬ್ಯಾಟಿಂಗ್ ಪ್ರ್ಯಾಕ್ಟೀಸ್ ನಡೆಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಭಾನುವಾರ ರಜೆ: ಭಾನುವಾರ ಭಾರತ ತಂಡದ ಆಟಗಾರರ ಅಭ್ಯಾಸಕ್ಕೆ ಕೋಚ್ ರಾಹುಲ್ ದ್ರಾವಿಡ್ ವಿರಾಮ ನೀಡಿದ್ದರು. ಹೀಗಾಗಿ ಟೀಮ್ ಇಂಡಿಯಾ ಆಟಗಾರರ ಅಭ್ಯಾಸ ಸೋಮವಾರದಿಂದ ಪುನಃ ಆರಂಭವಾಗಲಿದೆ. ಇಂದು ರೋಹಿತ್ ಪಡೆ ಜಾಮ್ತಾದಲ್ಲಿರುವ ಹೊಸ ವಿಸಿಎ ಸ್ಟೇಡಿಯಂಗೆ ತೆರಳಲಿದ್ದು ಮೊದಲ ಟೆಸ್ಟ್ ಪಂದ್ಯಕ್ಕೆ ಇಲ್ಲಿ ಅಭ್ಯಾಸ ನಡೆಸಲಿದೆ.
ಫೆಬ್ರವರಿ 9 ರಿಂದ ಟೆಸ್ಟ್ ಸರಣಿ ಶುರುವಾಗಲಿದೆ. ಇದು ಒಟ್ಟು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಾಗಿದೆ. ಇದಾದ ಬಳಿಕ ಮಾರ್ಚ್ 17 ರಿಂದ ಏಕದಿನ ಸರಣಿ ನಡೆಯಲಿದೆ. ಟೆಸ್ಟ್ ಪಂದ್ಯಗಳು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದಾಗಿದ್ದು, ಇದರಲ್ಲಿ ಸರಣಿ ಜಯಿಸುವ ಮೂಲಕ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರಬಹುದು.
ಮೊದಲೆರಡು ಟೆಸ್ಟ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್.
Published On - 8:56 am, Mon, 6 February 23