Updated on:Feb 07, 2023 | 2:27 PM
ವೆಸ್ಟ್ ಇಂಡೀಸ್ ಆರಂಭಿಕ ಆಟಗಾರರು ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ 33 ವರ್ಷಗಳ ಐತಿಹಾಸಿಕ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
ಹೌದು, ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆರಂಭಿಕರಾದ ಕ್ರೇಗ್ ಬ್ರಾಥ್ವೈಟ್ ಹಾಗೂ ಟಾಗೆನರೈನ್ ಚಂದ್ರಪಾಲ್ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದ್ದರು. ಈ ಜೋಡಿಯು ಮೊದಲ ವಿಕೆಟ್ಗೆ 336 ರನ್ಗಳನ್ನು ಕಲೆಹಾಕುವ ಮೂಲಕ ಹೊಸ ದಾಖಲೆಯನ್ನೂ ಬರೆದರು.
ಅಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ಪರ ಮೊದಲ ವಿಕೆಟ್ನಲ್ಲಿ 300 ರನ್ ಕಲೆಹಾಕಿದ ಮೊದಲ ಜೋಡಿ ಎಂಬ ದಾಖಲೆ ಬ್ರಾಥ್ವೈಟ್ ಹಾಗೂ ಟಾಗೆನರೈನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಗ್ರೀನಿಡ್ಜ್ ಮತ್ತು ಡೆಸ್ಮಂಡ್ ಹೇನ್ಸ್ ಹೆಸರಿನಲ್ಲಿತ್ತು.
1990 ರಲ್ಲಿ ಸೇಂಟ್ ಜಾನ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವಿಂಡೀಸ್ ಆರಂಭಿಕರಾದ ಗಾರ್ಡನ್ ಗ್ರೀನಿಡ್ಜ್ ಮತ್ತು ಡೆಸ್ಮಂಡ್ ಹೇನ್ಸ್ 298 ರನ್ಗಳ ಜೊತೆಯಾಟವಾಡಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಬ್ರಾಥ್ವೈಟ್ ಹಾಗೂ ಟಾಗೆನರೈನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಅಷ್ಟೇ ಅಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಬಾಲ್ ಎದುರಿಸಿದ ಆರಂಭಿಕ ಜೋಡಿಗಳ ದಾಖಲೆಯಲ್ಲೂ ಈ ಇಬ್ಬರು ಸ್ಥಾನ ಪಡೆದಿದ್ದಾರೆ. ಇದಕ್ಕೂ ಮುನ್ನ ಇಂತಹದೊಂದು ವಿಶೇಷ ದಾಖಲೆಯನ್ನು ಶ್ರೀಲಂಕಾದ ಅಟ್ಟಾಪಟ್ಟು ಹಾಗೂ ಜಯಸೂರ್ಯ ನಿರ್ಮಿಸಿದ್ದರು.
2000 ರಲ್ಲಿ ಪಾಕಿಸ್ತಾನ್ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದ ಮರ್ವಾನ್ ಅಟ್ಟಾಪಟ್ಟು ಹಾಗೂ ಸನತ್ ಜಯಸೂರ್ಯ ಬರೋಬ್ಬರಿ 686 ಎಸೆತಗಳನ್ನು ಎದುರಿಸಿ 335 ರನ್ಗಳ ಜೊತೆಯಾಟವಾಡಿದ್ದರು.
ಇದೀಗ ಟಾಗೆನರೈನ್ ಚಂದ್ರಪಾಲ್ ಹಾಗೂ ಕ್ರೇಗ್ ಬ್ರಾಥ್ವೈಟ್ ಜಿಂಬಾಬ್ವೆ ವಿರುದ್ಧ ಮೊದಲ ವಿಕೆಟ್ನಲ್ಲಿ 685 ಎಸೆತಗಳನ್ನು ಎದುರಿಸಿ 336 ರನ್ ಕಲೆಹಾಕಿದ್ದಾರೆ. ಈ ಮೂಲಕ 21ನೇ ಶತಮಾನದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 100 ಓವರ್ ಆಡಿದ ಆರಂಭಿಕ ಜೋಡಿ ಎಂಬ ವಿಶೇಷ ದಾಖಲೆಯನ್ನು ಟಾಗೆನರೈನ್ ಚಂದ್ರಪಾಲ್ ಹಾಗೂ ಕ್ರೇಗ್ ಬ್ರಾಥ್ವೈಟ್ ನಿರ್ಮಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಕ್ರೇಗ್ ಬ್ರಾಥ್ವೈಟ್ 312 ಎಸೆತಗಳಲ್ಲಿ 18 ಫೋರ್ನೊಂದಿಗೆ 182 ರನ್ ಬಾರಿಸಿದರೆ, ಟಾಗೆನರೈನ್ ಚಂದ್ರಪಾಲ್ 467 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 16 ಫೋರ್ನೊಂದಿಗೆ 207 ರನ್ಗಳಿಸಿದ್ದರು. ಈ ಮೂಲಕ ಜಿಂಬಾಬ್ವೆ ವಿರುದ್ಧ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ ನಷ್ಟಕ್ಕೆ 447 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
Published On - 10:58 pm, Mon, 6 February 23